*50ಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಸಿ ದಾಖಲೆ ಬರೆದ ಕಾಂಗ್ರೆಸ್ ಸರ್ಕಾರ: ಜೋಶಿ ತರಾಟೆ*

ಪ್ರಗತಿವಾಹಿನಿ ಸುದ್ದಿ: ದುರಾಡಳಿತ, ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ 50ಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಕೆ ಮಾಡಿ ದಾಖಲೆ ಬರೆದಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹರಿ ಹಾಯ್ದರು.
ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಪೆಟ್ರೋಲ್, ಡಿಸೇಲ್, ವಿದ್ಯುತ್, ಆಸ್ತಿ ನೋಂದಣಿ ಶುಲ್ಕ ಸೇರಿದಂತೆ 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನಸಾಮಾನ್ಯರನ್ನು ಹಿಂಸಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ರಾಜ್ಯದಲ್ಲಿ ಗೃಹೋಪಯೋಗಿ, ಕೈಗಾರಿಕೆ ಹಾಗೂ ವಾಣಿಜ್ಯೋಪಯೋಗಿ ವಿದ್ಯುತ್ ದರ ಹೆಚ್ಚಿಸಲು ತಯಾರಿ ನಡೆದಿದೆ. ಇದು ಸರ್ಕಾರದ ಕೈಗಾರಿಕಾ ವಿರೋಧಿ ನೀತಿಯನ್ನು ನಿರೂಪಿಸುತ್ತದೆ. ಈ ಕ್ರಮದಿಂದಾಗಿ ಬೃಹತ್ ಉದ್ಯಮಗಳು ರಾಜ್ಯಕ್ಕೆ ಬರಲು ಹಿಂದಡಿ ಇಡುತ್ತಿವೆ. ಈಗಾಗಲೇ ಗೂಗಲ್ ಕಂಪನಿ ರಾಜ್ಯದಿಂದ ಹೊರ ಹೋಗಿದೆ ಎಂದರು.
ಉಚಿತ ವಿದ್ಯುತ್ ಬಾಬ್ತು ವಿದ್ಯುತ್ ಕಂಪನಿಗಳಿಗೆ ನೀಡಬೇಕಿರುವ ಬಾಕಿ ಹಣವನ್ನು ಸರ್ಕಾರ ಇನ್ನೂ ಪಾವತಿಸಿಲ್ಲ. ಇದರ ಪರಿಣಾಮ ವಿದ್ಯುತ್ ಕಂಪನಿಗಳು ದರ ಏರಿಕೆಯ ಪ್ರಸ್ತಾಪ ಮಾಡಿವೆ. ಇದಕ್ಕೆ ಸರ್ಕಾರ ಸಹ ಸಮ್ಮತಿಸಿದೆ. ಈ ಮೂಲಕ ಮೂರು ವರ್ಷದಲ್ಲಿ ಮೂರು ಮೂರು ಬಾರಿ ವಿದ್ಯುತ್ ದರ ಹೆಚ್ಚಳ ಮಾಡಿ ವಾಣಿಜ್ಯೋದ್ಯಮಿಗಳನ್ನು ಕೊಳ್ಳೆ ಹೊಡೆಯಲು ನೋಡುತ್ತಿದೆ ಎಂದು ಆರೋಪಿಸಿದರು
ಆರ್ಥಿಕ ದುರ್ಬಲದಲ್ಲಿ ರಾಜ್ಯ
ಆರ್ಥಿಕ ಸಂಪದ್ಭರಿತವಾಗಿದ್ದ ಕರ್ನಾಟಕವನ್ನು ವಿತ್ತೀಯ ದುಸ್ಥಿತಿಯತ್ತ ತಳ್ಳಿದೆ. ರಾಜ್ಯ ಸರ್ಕಾರ ₹,8.4 ಲಕ್ಷ ಕೋಟಿ ಸಾಲ ಮಾಡಿಕೊಂಡಿದೆ. ಸಾಲವಿರಲಿ ಅದರ ಬಡ್ಡಿ ಕಟ್ಟಲೂ ದುಡ್ಡಿಲ್ಲ. ಈ ಸರ್ಕಾರದಲ್ಲಿ ವಿತ್ತೀಯ ಶಿಸ್ತೆಂಬುದೇ ಇಲ್ಲವಾಗಿದೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರದ ಸಚಿವರು ಭಾರತದ ಜಿಡಿಪಿ ಬಗ್ಗೆ ಮಾತನಾಡುತ್ತಾರೆ. ಮೊದಲು ಇವರು ರಾಜ್ಯದ ಜಿಡಿಪಿ ಏನಾಗಿದೆ ಎಂಬುದನ್ನು ನೋಡಿಕೊಳ್ಳಲಿ. ಈ ಬಾರಿ ಶೇ. 27.5 ರಷ್ಟು ಸಾಲದ ಪ್ರಮಾಣ ಹೆಚ್ಚಬಹುದು. ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯವನ್ನು ಅತ್ಯಂತ ಗಂಭೀರ ಪರಿಸ್ಥಿತಿಗೆ ತಲುಪಿಸಿದ್ದಾರೆ ಎಂದು ಜೋಶಿ ತಿರುಗೇಟು ನೀಡಿದರು.
ಹಾಲು-ಜೇನು ಹೇಳಿಕೆ ಹಾಸ್ಯಾಸ್ಪದ
“ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ತಾವು ಹಾಲು-ಜೇನು ಇದ್ದಂತೆ” ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ನಿಜಕ್ಕೂ ಹಾಸ್ಯಾಸ್ಪದ. ಅವರದ್ದು ಹಾಲು-ಜೇನು ಅಲ್ಲ; ಬಹುಶಃ ಆಲ್ಕೋಹಾಲ್ನಿಂಬೆಹಣ್ಣಿನಂತಹ ಸಂಬಂಧ ಇರಬೇಕು ಎಂದು ವ್ಯಂಗ್ಯವಾಡಿದರು ಪ್ರಲ್ಹಾದ ಜೋಶಿ.
ಫೋನ್ ಕದ್ದಾಲಿಕೆ ಏಕೆ ?
ಸಿಎಂ ಸಿದ್ದರಾಮಯ್ಯ ಗುಪ್ತ ಮಾಹಿತಿ ಕಲೆ ಹಾಕುತ್ತಿದ್ದಾರೆ. ಯಾವ ಕಾರಣಕ್ಕೆ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ? ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ ಜೋಶಿ, ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗಲೂ ಫೋನ್ ಕದ್ದಾಲಿಕೆ ನಡೆದಿತ್ತು ಎನ್ನುವ ಇವರು ಆಗ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದರು. ತದನಂತರ ತಮ್ಮ ಸರ್ಕಾರವೇ ಅಧಿಕಾರಕ್ಕೆ ಬಂದರೂ ಏಕೆ ಸುಮ್ಮನಿದ್ದರು? ಎಂದು ಪ್ರಶ್ನಿಸಿದ್ದಾರೆ.
ಟೆಲಿಫೋನ್ ಕದ್ದಾಲಿಕೆ ತನಿಖೆಗೆ ಆಗ್ರಹ
ಟೆಲಿಫೋನ್ ಕದ್ದಾಲಿಕೆ ಆರೋಪ ಗಂಭೀರವಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದ ಜೋಶಿ, ಕಾಂಗ್ರೆಸ್ ಆಡಳಿತದಲ್ಲಿ ಆಗಿನ ಫೋನ್ ಕದ್ದಾಲಿಕೆ ಬಗ್ಗೆ ತನಿಖೆ ನಡೆಸುವುದನ್ನು ಬಿಟ್ಟು ಸಿಎಂ ಸಿದ್ದರಾಮಯ್ಯ ಅವರೇನು ಆಗ ಕತ್ತೆ ಕಾಯುತ್ತಿದ್ದರೇ? ಎಂದು ಖಾರವಗಿ ಪ್ರಶ್ನಿಸಿದರು.
ಆಲಮಟ್ಟಿ ಅಣೆಕಟ್ಟು ಎತ್ತರ ಬಗ್ಗೆ ಚರ್ಚಿಲು ಡಿಸಿಎಂ ಡಿ.ಕೆ.ಶಿವಕುಮಾರ ದೆಹಲಿಗೆ ಬಂದರೆ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು. ಅಣೆಕಟ್ಟು ಎತ್ತರಕ್ಕೆ ಕರ್ನಾಟಕದ ಹಿತದೃಷ್ಟಿಯಿಂದ ಅಗತ್ಯ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದ ಕೇಂದ್ರ ಸಚಿವರು, ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಆಲಮಟ್ಟಿ ಜಲಾಶಯ ಅಭಿವೃದ್ಧಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿತ್ತು. ಆದರೆ, ಅದು ಈಡೇರಲೇ ಇಲ್ಲ ಎಂದು ಚಾಟಿ ಬೀಸಿದರು.
ಕಾಂಗ್ರೆಸ್ನಲ್ಲಿ ಕುಟುಂಬ ರಾಜಕಾರಣ ಇಲ್ಲ ಎನ್ನುತ್ತಾರೆ ಸಿಎಂ. ಕಾಂಗ್ರೆಸ್ ಹೈಕಮಾಂಡ್ ಗಾಂಧಿ ಕುಟುಂಬದಲ್ಲೇ ಮೂವರು ಸಂಸದರಿದ್ದಾರೆ. ಇದು ಆ ಪಕ್ಷದ ಕುಟುಂಬ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಅಲ್ಲವೇ?ಎಂದು ಜೋಶಿ ಲೇವಡಿ ಮಾಡಿದರು.



