ಕಾಂಗ್ರೆಸ್ ಸರ್ಕಾರ ವಚನ ಭ್ರಷ್ಟ ಆಗುವುದಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

* * *ಕಲ್ಯಾಣ ಗ್ರಾಮದಲ್ಲಿ ಸಚಿವರಿಂದ ಮತಯಾಚನೆ*
* **ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಗ್ಯಾರಂಟಿ*

ಪ್ರಗತಿವಾಹಿನಿ ಸುದ್ದಿ, *ಕಲ್ಯಾಣ (ಶಿಗ್ಗಾವಿ):* ಕಾಂಗ್ರೆಸ್ ಪಕ್ಷ ಸದಾ ಬಡವರ ಬಗ್ಗೆ ಚಿಂತಿಸುವ ಪಕ್ಷ. ಜನ ಸಾಮಾನ್ಯರ ಅಭಿವೃದ್ಧಿಯೇ ಪಕ್ಷದ ಗುರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಶಿಗ್ಗಾವಿ-ಸವಣೂರು ವಿಧಾನಸಭಾ ಕ್ಷೇತ್ರದ ಕುಂದೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಲ್ಯಾಣ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಪರ ಮತಯಾಚಿಸಿದ ಸಚಿವರು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳಿಗೆ ಜಿಎಸ್ಟಿ ವಿಧಿಸುವ ಮೂಲಕ ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ. ಪ್ರತಿಯೊಂದಕ್ಕೂ ಜಿಎಸ್ಟಿ ಹೇರುತ್ತಾ ಬಂದಿದೆ ಎಂದು ಟೀಕಿಸಿದರು.
ಕರೋನಾ ಬಂದು ಹೋದಮೇಲೆ ಜನರ ಕಷ್ಟ ಕೇಳುವರಿರಲಿಲ್ಲ. ಇದರಿಂದ ಸಂಕಷ್ಟದಲ್ಲಿದ್ದ ಜನರ ಸುಧಾರಣೆಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಇದರ ಫಲವಾಗಿ 1.23 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ತಲುಪುತ್ತಿದ್ದು, ತಿಂಗಳಿಗೆ ಮೂರು ಸಾವಿರ ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಚನ ಭ್ರಷ್ಟ ಆಗುವುದಿಲ್ಲ. ಐದು ವರ್ಷವೂ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಟ ಪಡಿಸಿದರು.
ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ದೇಶಕ್ಕೋಸ್ಕರ ಪ್ರಾಣ ಕೊಟ್ಟರು. ಇಂಥ ನಾಯಕರಿರುವ ಪಕ್ಷ ಕಾಂಗ್ರೆಸ್. ಸ್ವತಂತ್ರ ಸಿಕ್ಕಾಗಿನಿಂದ ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷವೇ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ದೇಶದಲ್ಲಿರುವ ಪ್ರತಿಯೊಂದು ಯೋಜನೆಗಳು ಕೂಡ ಕಾಂಗ್ರೆಸ್ ಪಕ್ಷ ನೀಡಿದ ಕೊಡುಗೆ ಎಂದು ಸಚಿವರು ತಿಳಿಸಿದರು.
ಬೆಳೆ ಹಾನಿಗೆ ಪರಿಹಾರ ನೀಡುವ ಸಲುವಾಗಿ ಕಾಂಗ್ರೆಸ್ ಶಾಸಕರು, ಸಚಿವರು ದೆಹಲಿಯಲ್ಲಿ ಪ್ರತಿಭಟನೆ ಮಾಡಿದರೂ ಹಣ ಕೊಡಲಿಲ್ಲ. ಬೇರೆ ರಾಜ್ಯಗಳಲ್ಲಿ ಏನೇ ಆದರೂ ಮೋದಿ, ಅಮಿತ್ ಶಾ ಹೋಗುತ್ತಾರೆ. ಆದರೆ, ಕರ್ನಾಟಕದಲ್ಲಿ ಬರ ಬಂದಿದ್ದರೂ ಮೋದಿ ಬರಲಿಲ್ಲ. 2019 ರಲ್ಲಿ ಭಾರಿ ಮಳೆಯಿಂದ ಉತ್ತರ ಕರ್ನಾಟಕವೇ ತತ್ತರಿಸಿದರೂ ಮೋದಿ ತಿರುಗಿ ನೋಡಲಿಲ್ಲ ಎಂದು ಸಚಿವರು ಟೀಕಾ ಪ್ರಹಾರ ನಡೆಸಿದರು.
ಬಿಜೆಪಿಯವರಿಗೆ ಶ್ರೀಮಂತರ ಚಿಂತೆಯಾದರೆ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಬಡವರ ಚಿಂತೆ. ಸರ್ವರಿಗೂ ಸಮಬಾಳು ಎಂಬುದೇ ಕಾಂಗ್ರೆಸ್ ಪಕ್ಷದ ಗುರಿ ಎಂದರು.
ಈ ವೇಳೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ಮುಖಂಡರಾದ ಗೀತಾ ಪೂಜಾರ್, ಶಂಭು ಅಜೂರು ಭರಮಣ್ಣ ಶಿವೂರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
*ಸಚಿವರಿಂದ ಮತ ಯಾಚನೆ*
ಕುಂದೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಲ್ಯಾಣ, ಕುಲಸಾಪೂರ್, ಚಿಕ್ಕಮಲ್ಲೂರ,ಹಿರೇಮಲ್ಲೂರ, ಗಂಜಿಗಟ್ಟಿ ಗ್ರಾಮಗಳಲ್ಲಿ ಸಚಿವರು ಪ್ರಚಾರ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ