Election NewsKannada NewsKarnataka NewsPolitics

ಕಾಂಗ್ರೆಸ್ ನವರು ಲಂಬಾಣಿ ಸಮುದಾಯದ ಮೀಸಲಾತಿ ಕಡಿತಗೊಳಿಸಿದ್ದಾರೆ: ಬಸವರಾಜ ಬೊಮ್ಮಾಯಿ ಆರೋಪ

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ನವರು ಲಂಬಾಣಿ ಸಮುದಾಯದ ಮೀಸಲಾತಿಯನ್ನು ಕಡಿಮೆ ಮಾಡಿದ್ದಾರೆ. ನಾನು ನಿಮ್ಮ ಸಹೋದರನಾಗಿ ಸಮುದಾಯಕ್ಕೆ ಸಿಗಬೇಕಾದ ನ್ಯಾಯಯುತ ಮೀಸಲಾತಿ ಕೊಡಿಸಲು ಬದ್ದನಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಅವರು ಇಂದು ಬಂಜಾರ ಸಮುದಾಯದ ಕೃಷ್ಣಾಪುರ ಮಠದ ಆವರಣದಲ್ಲಿ ಲಂಬಾಣಿ ಸಮುದಾಯದ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಅತ್ಯಂತ ಕಟ್ಟಕಡೆಯ ಸಮಾಜದ ಧ್ವನಿ ಕೇಳಬೇಕು. ಅದು ಕೇಳಲು ಸಮಾಜ ಸಂಘಟನೆ ಆಗಬೇಕು. ಈ ಸಮಾಜ ದೇವರ ವರದಾನ ಇರುವ ಸಮಾಜ, ಸಂತ ಸೇವಾಲಾಲ್ ಅವರ ಅಶೀರ್ವಾದ ಇರುವ ಸಮಾಜ, ಅತ್ಯಂತ ಕಷ್ಟದಲ್ಲಿರುವ ಜನರು ನೀವು. ನೀವು ಬಹಳ ಕಷ್ಟಪಟ್ಟು ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದ್ದೀರಿ, ಅವರಿಗೆ ಅವಕಾಶ ಕೊಟ್ಟರೆ ದೊಡ್ಡ ಸ್ಥಾನಗಳನ್ನು ಪಡೆಯುತ್ತಾರೆ. ಸರ್ಕಾರ ಕೈ ಹಿಡಿದರೆ ಈ ಸಮುದಾಯದ ಯುವಕರು ಉನ್ನತ ಸ್ಥಾನ ಪಡೆಯುತ್ತಾರೆ ಎಂದರು.

ದೇಶದ ಎಲ್ಲ ಭಾಗಗಳಲ್ಲಿ ಇರುವ ಕೆಲವೇ ಕೆಲವು ಸಮುದಾಯಗಳಲ್ಲಿ ಬಂಜಾರ ಸಮುದಾಯವೂ ಒಂದು. ಈ ಸಮುದಾಯ ಮುಂದೆ ಬರಲು ವಿದ್ಯೆ ಮತ್ತು‌ ಉದ್ಯೋಗದಲ್ಲಿ ಅವಕಾಶ ದೊರೆಯಬೇಕು. ಈ ಸಮುದಾಯ ಅಂಬೆಡ್ಕರ್ ಅವರನ್ಮು ನೆನಪಿಡಬೇಕು. ಅಂಬೇಡ್ಕರ್ ಅವರು ಎಸ್ಸಿ ಎಸ್ಟಿಗೆ ವಿಶೇಷ ಮೀಸಲಾತಿ ನೀಡಿ ಅವಕಾಶ ಕೊಟ್ಟರು. ಬಂಜಾರಾ ಸಮಾಜವನ್ನು ಎಸ್ಸಿಗೆ ಸೇರಿಸಿದ್ದು ದೇವರಾಜ ಅರಸರು. ಈ ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಹರಿಕಾರರು ದೇವರಾಜ ಅರಸರು ಮಾತ್ರ‌ ಎಂದರು. 

ತಾಂಡಾ ಅಭಿವೃದ್ಧಿಗೆ ಬಿಜೆಪಿ ಕಾರಣ

ಲಂಬಾಣಿ ತಾಂಡಾಗಳ ಅಭಿವೃದ್ದಿಗೆ ಬಿಜೆಪಿ ಕಾರ‌ಣ. ಯಡಿಯೂರಪ್ಪ ಸಿಎಂ ಆಗಿದ್ದಾಗ ತಾಂಡಾ ಅಭಿವೃದ್ಧಿ ನಿಗಮ ಮಾಡಿದ್ದೇವೆ‌. ನಾವು ಲಂಬಾಣಿ ಸಮುದಾಯದ ಮೀಸಲಾತಿಯನ್ನು 4.5 ಕ್ಕೆ  ಹೆಚ್ಚಿಗೆ ಮಾಡಿದ್ದೇವೆ. ಕಾಂಗ್ರೆಸ್ ಅದನ್ನು 3% ಕ್ಕೆ ಇಳಿಸಿದೆ‌. ಈ ಬಗ್ಗೆ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಬೇಕು ಎಂದು ಹೇಳಿದರು.

ಎಲ್ಲಾ ತಾಂಡಾಗಳು  ಕಂದಾಯ ಗ್ರಾಮಗಳಾಗಿ ಪರಿವರ್ತನೆ ಆಗಬೇಕು. ಕೇಂದ್ರ ರಾಜ್ಯದ ಎಲ್ಲ ಯೋಜನೆಗಳು ತಾಂಡಾಗಳಿಗೆ ಬರಬೇಕು ಇದು ನನ್ನ ಬದ್ದತೆ. ನಾನು ಬಂಜಾರ ಸ್ವಾಮೀಜಿ ಶ್ರೀ ಕುಮಾರ ಮಹಾರಾಜರ ಆಶೀರ್ವಾದ ಪಡೆದಿದ್ದೇನೆ. ಅವರು ಸಮಾಜದ ಅಭಿವೃದ್ಧಿ ಆಗಬೇಕು ಅಂತ ಹೇಳಿದ್ದಾರೆ. ನಾನು ಈ ಸಮುದಾಯದ ಸೋದರನಾಗಿ ಜೊತೆಯಲ್ಲಿರುತ್ತೇನೆ. ವಿಶೇಷವಾಗಿ ತಾಯಂದಿರು ಮುಖ್ಯವಾಹಿನಿಗೆ ಬರಬೇಕು. ನಿಮ್ಮ ಕೌಶಲ್ಯವನ್ನು ವಿಶ್ವಕ್ಕೆ ಪರಿಚಯಿಸಿ, ವಿಶೇಷ ಕಾರ್ಯಕ್ರಮ ರೂಪಿಸಿ ನಿಮ್ಮ ಆದಾಯ ಹೆಚ್ಚಳ ಮಾಡುವ ಎಲ್ಲ ಪ್ರಯತ್ನ ಮಾಡುತ್ತೇನೆ. ನಿಮ್ಮ ಸಹೋದರನಾಗಿ ಲೋಕಸಭೆಯಲ್ಲಿ ಧ್ವನಿ ಎತ್ತುತ್ತೇನೆ ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ಸಮಾವೇಶಕ್ಕೂ ಮುನ್ನ ಬಂಜಾರ ಸಮುದಾಯದ ಸ್ವಾಮೀಜಿ ಮಹಾನ್ ತಪಸ್ವಿ ಡಾ. ಶ್ರೀ ಕುಮಾರ ಮಹಾರಾಜರ ಆಶೀರ್ವಾದ ಪಡೆದರು.  ಸಮಾವೇಶದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಬಸವರಾಜ ನಾಯಕ್ , ಹಾವೇರಿ ಬಿಜೆಪಿ ಮುಖಂಡ ಗವಿಸಿದ್ದಪ್ಪ,  ಶಿವಣ್ಣ ಲಮಾಣಿ, ಹನುಮಂತಪ್ಪ ಲಮಾಣಿ, ಮಲ್ಲೇಶಪ್ಪ ಲಮಾಣಿ, ರಮೇಶ ಲಮಾಣಿ, ಪುಂಡಲಿಕ್ ಲಮಾಣಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಲಲಿತಾ ಲಮಾಣಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button