ಅಂತ್ಯೋದಯ ತತ್ವವನ್ನು ಸಾಕಾರಗೊಳಿಸಿದ ಪಕ್ಷ ಬಿಜೆಪಿ
ಪ್ರಗತಿವಾಹಿನಿ ಸುದ್ದಿ, ಬೀಳಗಿ: ಪ್ರತಿ ಮನೆ-ಮನೆಗೂ ಶುದ್ಧವಾದ ನೀರು, ನಿರಂತರ ವಿದ್ಯುತ್ ರೈತರಿಗೆ ಹಗಲು ವೇಳೆ ೭ ಗಂಟೆ ತ್ರಿಫೇಸ್ ವಿದ್ಯುತ್ ದೊರೆಯುತ್ತಿದೆ. ಉತ್ತಮ ರಸ್ತೆ ಸಂಪರ್ಕ, ಸಮುದಾಯ ಭವನ, ಶಿಕ್ಷಣ ಆರೋಗ್ಯ ಎಲ್ಲವೂ ಬೀಳಗಿ ಮತಕ್ಷೇತ್ರದ ಜನತೆಗೆ ಸುಲಭವಾಗಿ ದೊರೆಯುವಂತೆ ಮಾಡಿದ್ದೇನೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.
ಬೀಳಗಿ ನಗರದ ವಿವಿಧ ವಾರ್ಡುಗಳು, ದೇವನಾಳ, ಚಿಕ್ಕಶೆಲ್ಲಿಕೇರಿ, ಹಾಗೂ ಖಜ್ಜಡಿಡೋಣಿ ಗ್ರಾಮಗಳಲ್ಲಿ ಮನೆ-ಮನೆಗೆ ತೆರಳಿ ಪ್ರಚಾರ ನಡೆಸಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು ಬೀಳಗಿಯಲ್ಲಿ ೨೨೦ ಕೆ.ವಿ. ವಿದ್ಯುತ್ ಸ್ಟೇಶನ್, ಪ್ರತಿ ಜಿಲ್ಲಾ ಪಂಚಾಯತಗೆ ಒಂದರಂತೆ ಹೊಸ ವಿದ್ಯುತ್ ಸ್ಟೇಶನ್‌ಗಳ ಜೊತೆಗೆ ಹಳೆಯ ಸ್ಟೇಶನ್‌ಗಳ ಸಾಮರ್ಥ್ಯವನ್ನು ಮೇಲ್ದರ್ಜೆಗೆ ಏರಿಸಲು ೨೫೦ ಕೋಟಿ ವೆಚ್ಚ ಮಾಡಲಾಗಿದೆ. ಇದರಿಂದ ಪ್ರತಿ ಗ್ರಾಮಗಳಲ್ಲೂ ಗುಣಮಟ್ಟದ ವಿದ್ಯುತ್ ಸಿಗುತ್ತಿದೆ. ೧೬೨ ಕೋಟಿ ವೆಚ್ಚದಲ್ಲಿ ಜಲ ಜೀವನ ಮಿಷನ್ ಮೂಲಕ ಗ್ರಾಮಗಳ ಪ್ರತಿ ಮನೆ ಮನೆಗೂ ನಲ್ಲಿ ಮೂಲಕ ಶುದ್ಧವಾದ ಕುಡಿಯುವ ನೀರು ದೊರೆಯುತ್ತಿದೆ. ಆ ಮೂಲಕ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆಯಾಗಿದೆ ಎಂದು ಅವರು ಹೇಳಿದರು.
ಬಿಜೆಪಿ ಸರ್ಕಾರ ಎಲ್ಲ ವರ್ಗದ ಜನರಿಗೂ ಮಿಸಲಾತಿ ಸೌಕರ್ಯ ನೀಡಿದೆ. ದಶಕಗಳಿಂದ ಕಗ್ಗಾಂಟಾಗಿದ್ದ ಸಾಮಾಜಿಕ ನ್ಯಾಯದಡಿ ಮಿಸಲಾತಿ ಹಂಚಿಕೆಯನ್ನು ನಾವು ಬಗೆಹರಿಸಿದ್ದೇವೆ. ಕಾಂಗ್ರೇಸ್ ದಲಿತರು, ಹಿಂದುಳಿದವರನ್ನು ವೋಟ್ ಬ್ಯಾಂಕ್ ಆಗಿ ಬಳಕೆ ಮಾಡಿಕೊಂಡಿದೆ. ನಮ್ಮ ಸರ್ಕಾರ ಅಂತ್ಯೋದಯ ತತ್ವವನ್ನು ಸಾಕಾರಗೊಳಿಸಿದೆ. ಕಾಂಗ್ರೇಸ್ ದೇಶದಲ್ಲಿ ಅಡ್ರೇಸ್ ಮತ್ತು ಜನರ ನಂಬಿಕೆ ಎರಡನ್ನು ಕಳೆದುಕೊಂಡಿದೆ. ಬೀಳಗಿಯಲ್ಲೂ ಈ ಬಾರಿ ಕಾಂಗ್ರೇಸ್ ಸೋತು ಇತಿಹಾಸ ಪುಟ ಸೇರಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಈರಣ್ಣ ಗಿಡ್ಡಪ್ಪನವರ, ಮಲ್ಲಿಕಾರ್ಜುನ ಅಂಗಡಿ, ಬಿ. ಜಿ. ರೇವಡಿಗಾರ, ವಿಠ್ಠಲ ನಿಂಬಾಳಕಾರ, ದೊಡ್ಡಪ್ಪ ಬ್ಯಾಳಿ, ಎಂ. ಎಸ್. ಕುಮಾರ ದೇಸಾಯಿ, ವಿಠ್ಠಲ ಬಾಗೇವಾಡಿ ಉಪಸ್ಥಿತರಿದ್ದರು.
ವಿವಿಧ ಗ್ರಾಮಗಳ ಮುಖಂಡರು ಕಾಂಗ್ರೇಸ್ ತೊರೆದು ಬಿಜೆಪಿ ಸೇರ್ಪಡೆ:
ಕುಂದರಗಿ ಗ್ರಾಮದ ವಿಶ್ವಕರ್ಮ ಸಮಾಜದ ಮುಖಂಡರು ಹಾಗೂ ನರೆನೂರ ತಾಂಡಾದ ನಿಂಗನಗೌಡ ನಾಯ್ಕ್, ಹಣಮಂತ ಕಾರಬಾರಿ, ವೆಂಕಪ್ಪ ನಾಯ್ಕ್, ಲಾಲಪ್ಪ ಲಮಾಣಿ, ಸೋಮಪ್ಪ ಲಮಾಣಿ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಬೀಳಗಿ ಬಿಜೆಪಿ ಕಾರ್ಯಾಲಯದಲ್ಲಿ ಸಚಿವ ಮುರುಗೇಶ ನಿರಾಣಿ ಹಾಗೂ ವಿ.ಪ. ಸದಸ್ಯ ಹಣಮಂತ ನಿರಾಣಿಯವರ ನೇತೃತ್ವದಲ್ಲಿ ಬಿಜೆಪಿ ಸೇರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ