ಎಂ.ಕೆ.ಹೆಗಡೆ, ಬೆಳಗಾವಿ -ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಇನ್ನು ಒಂದೇ ತಿಂಗಳಲ್ಲಿ ಚುನಾವಣೆ ಮುಕ್ತಾಯವಾಗಲಿದೆ. ಈ 28ದಿನ ಎಲ್ಲ ಪಕ್ಷಗಳಿಗೂ ಸತ್ವಪರೀಕ್ಷೆಯಾಗಲಿದೆ. ಬಿಜೆಪಿಗೆ ಸರಕಾರದ ಅಳಿವು-ಉಳಿವಿನ ಪ್ರಶ್ನೆಯಾದರೆ, ಲೋಕಸಭೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್, ಜೆಡಿಎಸ್ ಗೆ ಅಸ್ತಿತ್ವದ ಪ್ರಶ್ನೆಯಾಗಿದೆ.
ಈ ಚುನಾವಣೆಯ ಯುದ್ದದ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಬಲ ಅಸ್ತ್ರವೊಂದನ್ನು ಕಳೆದುಕೊಂಡಿದೆ. ಪ್ರತಿ ಚುನಾವಣೆಯಲ್ಲಿ ಮುಂಚೂಣಿಯಲ್ಲಿ ನಿಂತು ಸರ್ವ ರೀತಿಯಲ್ಲೂ ಕಾಂಗ್ರೆಸ್ ಗೆ ಬಲ ನೀಡುತ್ತಿದ್ದ, ಟ್ರಬಲ್ ಶೂಟರ್ ಎಂದೇ ಹೆಸರು ಪಡೆದಿರುವ ಡಿ.ಕೆ.ಶಿವಕುಮಾರ ಈ ಉಪಚುನಾವಣೆ ಸಮರ ಎದುರಿಸಲು ಸಿಗುವುದು ಡೌಟ್.
ಡಿ.ಕೆ.ಶಿವಕುಮಾರ ಅಕ್ರಮ ಹಣ ಸಂಪಾದನೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿದ್ದಾರೆ. ಅವರನ್ನು ಈಗಾಗಲೆ ಜೈಲಿನಲ್ಲಿಡಲಾಗಿದೆ. ಅವರಿಗೆ ಜಾಮೀನು ಸಿಗುವ ಬಗ್ಗೆ ಇನ್ನೂ ಖಚಿತತೆ ಇಲ್ಲ. ಇದೇ 25ರಂದು ಅವರ ಜಾಮೀನು ಅರ್ಜಿ ಸಂಬಂಧ ಸುಪ್ರಿಂ ಕೋರ್ಟ್ ತೀರ್ಪು ನೀಡಲಿದೆ. ಈ ತೀರ್ಪಿನ ಮೇಲೆ ಶಿವಕುಮಾರ ಜೈಲಿನಿಂದ ಹೊರಗೆ ಬರುವುದು ಅವಲಂಬಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ
ಒಂದೊಮ್ಮೆ ಜಾಮೀನು ದೊರೆತು ಹೊರಗೆ ಬಂದರೂ ಇಡಿಯ ನಿರಂತರ ವಿಚಾರಣೆಯಿಂದಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವುದು ಅವರಿಗೆ ಕಷ್ಟವಾಗಲಿದೆ. ನ್ಯಾಯಾಲಯದಲ್ಲಿನ ಮೊಕದ್ದಮೆ ಎದುರಿಸಲು ಮಾಡಿಕೊಳ್ಳಬೇಕಾದ ಸಿದ್ದತೆಯಲ್ಲಿಯೇ ಅವರು ಬ್ಯುಸಿಯಾಗಲಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಬಾರಿ ಡಿ.ಕೆ.ಶಿವಕುಮಾರ ಅವರಂತಹ ಘಟಾನುಘಟಿಯ ಕೊರತೆ ಕಾಂಗ್ರೆಸ್ ಗೆ ಕಾಡುತ್ತಿದೆ. ಹಾಗಾಗಿ ತನ್ನ ಕೈಯಲ್ಲಿದ್ದ 12 ಕ್ಷೇತ್ರಗಳನ್ನು ಉಳಿಸಿಕೊಳ್ಳುವುದು ಕಾಂಗ್ರೆಸ್ ಗೆ ಕಷ್ಟವಾಗಬಹುದು.
ಮೈತ್ರಿ ಸರಕಾರದ ಕೊನೆಯ ಅಧಿವೇಶನದ ಕೊನೆಯ ದಿನ ಡಿ.ಕೆ.ಶಿವಕುಮಾರ ಅನರ್ಹ ಶಾಸಕರ ವಿರುದ್ಧ ತೊಡೆ ತಟ್ಟಿದ್ದರು. ಸಮರ ಭೂಮಿಯಲ್ಲಿ ನಿಮ್ಮನ್ನು ಎದುರಿಸುತ್ತೇನೆ ಎಂದು ಗುಡುಗಿದ್ದರು. ಮುಂಬೈನಲ್ಲಿ ಅನರ್ಹ ಶಾಸಕರು ಅಡಗಿಕೊಂಡಾಗ ಅಲ್ಲಿಗೆ ಹೋಗಿದ್ದ ಸಂದರ್ಭದಲ್ಲಿ ಅನುಭವಿಸಿದ್ದ ಅವಮಾನದಿಂದ ಡಿ.ಕೆ.ಶಿವಕುಮಾರ ಕುದಿದು ಹೋಗಿದ್ದರು.
ಇದಕ್ಕೆ ಉಪಚುನಾವಣೆಯಲ್ಲಿ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ನಿರ್ಧರಿಸಿದ್ದರು. ಆದರೆ ಈಗ ಬಂದಿರುವ ಇಡಿ ಉರುಳು ಅವರನ್ನು ಕಟ್ಟಿ ಹಾಕಿದೆ. ಇದು ವಯಕ್ತಿಕವಾಗಿ ಡಿ.ಕೆ.ಶಿವಕುಮಾರ ಅವರಿಗಿಂತ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ. ಇತ್ತೀಚಿನ ಎಲ್ಲ ಉಪಚುನಾವಣೆಗಳಲ್ಲೂ ಡಿ.ಕೆ.ಶಿವಕುಮಾರ ಪ್ರಮುಖ ಪಾತ್ರ ವಹಿಸುತ್ತ ಬಂದಿದ್ದರು. ಎಲ್ಲೆಲ್ಲಿ ಕಾಂಗ್ರೆಸ್ ಗೆದ್ದಿದೆಯೋ ಅಲ್ಲೆಲ್ಲ ಡಿ.ಕೆ.ಶಿವಕುಮಾರ ಅವರ ಬಲವೇ ಪ್ರಮುಖವಾಗಿತ್ತು.
ಡಿ.ಕೆ.ಶಿವಕುಮಾರ ರಹಿತ ಕಾಂಗ್ರೆಸ್ ಈ ಬಾರಿ ಹೇಗೆ ಚುನಾವಣೆ ಎದುರಿಸಲಿದೆ? ಯಾವ ರೀತಿ ಫಲಿತಾಂಶ ಪಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
25ರ ವರೆಗೂ ಡಿ.ಕೆ.ಶಿವಕುಮಾರ ಬಿಡುಗಡೆ ಇಲ್ಲ
ರಾಜ್ಯ ರಾಜಕೀಯದಲ್ಲಿ ತಲ್ಲಣ, ಎಲ್ಲ ಪಕ್ಷಗಳೂ ಕಂಗಾಲು
ರಾಜ್ಯ ರಾಜಕೀಯದಲ್ಲಿ ತಲ್ಲಣ, ಎಲ್ಲ ಪಕ್ಷಗಳೂ ಕಂಗಾಲು
ಅನರ್ಹರಿಗೆ ಶಾಕ್ -ಹಠಾತ್ ಉಪಚುನಾವಣೆ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ