ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-ರಾಜ್ಯದಲ್ಲಿ ಪ್ರವಾಹ ಅಪ್ಪಳಿಸಿ 50 ದಿನ ಕಳೆದರೂ ಪರಿಹಾರ ಕಾರ್ಯಕ್ರಮ ಕೈಗೊಳ್ಳಲು ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯದ ಹಲವಾರು ನಾಯಕರು ಪಾಲ್ಗೊಂಡಿದ್ದರು. ನಗರದ ಕಾಂಗ್ರೆಸ್ ಕಚೆರಿಯಿಂದ ಆರಂಭವಾದ ರ್ಯಾಲಿ ಚನ್ನಮ್ಮ ವೃತ್ತಕ್ಕೆ ಆಗಮಿಸಿ ಸಭೆಯಾಗಿ ಮಾರ್ಪಟ್ಟಿತು.
ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರಕಾರಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನೆರೆ ಸಂತ್ರಸ್ತರಿಗೆ ಬೆಂಬಲವಾಗಿ ನಿಲ್ಲಲು ಈ ಪ್ರತಿಭಟನಾ ಸಮಾವೇಶ ನಡೆಸುತ್ತಿದ್ದೇವೆ. ಇದು ನಮ್ಮ ಹೋರಾಟದ ಪ್ರಾರಂಭ ಎಂದು ಘೋಷಿಸಿದರು.
105 ವರ್ಷಗಳ ನಂತರ ಕರ್ನಾಟಕದಲ್ಲಿ ಇಂತಹ ಭೀಕರ ಪ್ರವಾಹ ಬಂದಿದೆ. ಉತ್ತರ ಕರ್ನಾಟಕದಲ್ಲಿ ಬಹಳದೊಡ್ಡ ಪ್ರಮಾಣದ ಹಾನಿಯಾಗಿದೆ. 103 ತಾಲ್ಲೂಕುಗಳ ಜನರು ಪ್ರವಾಹಕ್ಕೆ ತುತ್ತಾಗಿ ಬೆಳೆ, ಮನೆ, ಚರಾಸ್ತಿ ಕಳೆದುಕೊಂಡಿದ್ದಾರೆ. ಏಳರಿಂದ ಎಂಟು ಲಕ್ಷ ಜನರು ಬೀದಿ ಪಾಲಾಗಿದ್ದಾರೆ. ಇಪ್ಪತ್ತು ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಇಂತಹ ಕೆಟ್ಟ ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ.
ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಯಡಿಯೂರಪ್ಪರನ್ನು ಟೀಕಿಸಲು ನಾವು ಪ್ರತಿಭಟನಾ ಸಭೆ ನಡೆಸುತ್ತಿಲ್ಲ. ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ಒತ್ತಾಯ ಮಾಡುತ್ತಿದ್ದೇವೆ. ಯಡಿಯೂರಪ್ಪನವರು ಏನೂ ನಷ್ಟವೇ ಆಗಿಲ್ಲ ಅನ್ನೋ ಹಾಗೆ ಮಾತನಾಡುತ್ತಿದ್ದಾರೆ. ನಿಮ್ಮದು ಮನುಷ್ಯ ಚರ್ಮವೋ ಎಮ್ಮೆ ಚರ್ಮವೋ ಗೊತ್ತಾಗುತ್ತಿಲ್ಲ.
ಕೇಂದ್ರ ಸಚಿವರ ಪ್ರವಾಸದಿಂದ ನಯಾಪೈಸೆ ಪ್ರಯೋಜನವಾಗಿಲ್ಲ. ಜನರಿಗೆ ಸ್ಪಂದಿಸಲು ಆಗದಿದ್ದರೆ ನಿವ್ಯಾಕೆ ಅಧಿಕಾರದಲ್ಲಿ ಇರಬೇಕು? ಅಧಿಕಾರ ನಡೆಸಲು ಆಗದಿದ್ದರೆ ಕೆಳಗೆ ಇಳಿಯಿರಿ. ನಾವು ಬಂದು ಜನರ ಕಷ್ಟ ಪರಿಹಾರ ಮಾಡುತ್ತೇವೆ. ಜನರಿಗೆ ಪರಿಹಾರ ಕೊಡಲು ನಿಮಗೇನು ರೋಗ ಬಂದಿದೆ ಎಂದು ಕಿಡಿಕಾರಿದರು..
ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಸಮ್ಮಿಶ್ರ ಸರಕಾರ ಕೆಡವಲು ಇನ್ನಿಲ್ಲದ ಕಸರತ್ತು ಮಾಡಿದ ಬಿಜೆಪಿ, ನಾವು ಅಧಿಕಾರಕ್ಕೆ ಬಂದರೆ ಚಂದ್ರ, ಸೂರ್ಯರನ್ನೇ ತಂದು ಕೊಡುತ್ತೇವೆ ಎನ್ನುವಂತೆ ಮಾತನಾಡಿತ್ತು. ಆದರೆ ಈಗ ಪ್ರವಾಹ ಸಂತ್ರಸ್ತರು ಸರಕಾರದ ಬಳಿ ಭಿಕ್ಷೆ ಬೇಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರು ತಮಗೆ ಪರಿಹಾರ ಕೊಡುವಂತೆ ದಿನನಿತ್ಯ ಕೇಳುವ ರೀತಿ ಕಣ್ಣೀರು ತರಿಸುತ್ತಿದೆ. ಆದರೆ ಏನು ಮಾಡುವುದು? ಸರಕಾರ ಯಾವುದಕ್ಕೂ ಸ್ಪಂದಿಸುತ್ತಿಲ್ಲ. 3800 ಜನರು ಮನೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ವಾಸಿಸಲು ಸೂರಿಲ್ಲ. ಇಂತಹ ಸರಕಾರ ಇದ್ದು ಏನು ಪ್ರಯೋಜನ? ಜನರ ಪಾಲಿಗೆ ಸರಕಾರ ಇದ್ದೂ ಇಲ್ಲದಂತಾಗಿದೆ ಎಂದು ಹೆಬ್ಬಾಳಕರ್ ಕಿಡಿಕಾರಿದರು.
ರಾಜ್ಯದ 25 ಸಂಸದರು ರಾಜ್ಯದ ಜನರಿಗೆ ವಿಶ್ವಾಸ ದ್ರೋಹ ಮಾಡಿದ್ದಾರೆ. ಕೇಂದ್ರದಿಂದ ಒಂದು ಪೈಸೆ ಪರಿಹಾರ ತರಲು ಆಗಿಲ್ಲ. ಅನರ್ಹ ಶಾಸಕರನ್ನು ವಿಶೇಷ ವಿಮಾನದಲ್ಲಿ ಕರೆದೊಯ್ಯಲು ದುಡ್ಡು ಖರ್ಚು ಮಾಡುತ್ತೀರಿ. ಆದರೆ ಪ್ರವಾಹ ಸಂತ್ರಸ್ತರಿಗೆ ಕೊಡಲು ನಿಮ್ಮ ಬಳಿ ಹಣವಿಲ್ಲ. ಪ್ರಧಾನಿ ನರೇಂದ್ರ ಮೋದಿ ಬೇಡವಾದದ್ದಕ್ಕೆಲ್ಲ ಟ್ವೀಟ್ ಮಾಡುತ್ತಾರೆ. ಆದರೆ ಪ್ರವಾಹ ಸಂತ್ರಸ್ತರನ್ನು ಸಂತೈಸಲು ಆಗುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳಕರ್ ಟೀಕಿಸಿದರು.