ಬಿಜೆಪಿ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಸಭೆ; ಎಲ್ಲೆಲ್ಲಿ? ಯಾವಾಗ? ಓದಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : “ಬಿಜೆಪಿ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ನಾಳೆಯಿಂದ ಬಿಜೆಪಿ ನಾಯಕರ ನೈತಿಕತೆ ಪ್ರಶ್ನಿಸುವ ಸಭೆ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಕಾಲದ ಅಕ್ರಮ, ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ, ಸಂವಿಧಾನ ಸಂಸ್ಥೆಗಳ ದುರ್ಬಳಕೆ ಬಗ್ಗೆ ಪ್ರಶ್ನೆ ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಗುರುವಾರ ರಾತ್ರಿ ತುರ್ತು ಮಾಧ್ಯಮಗೋಷ್ಟಿ ನಡೆಸಿದ ಶಿವಕುಮಾರ್ ಅವರು, “ನಾಳೆ (ಶುಕ್ರವಾರ) ಬಿಡದಿಯಲ್ಲಿ ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ಅವಧಿಯಲ್ಲಿ ರಾಜ್ಯದಲ್ಲಿ ಆಗಿರುವ ಹಗರಣ, ಅನ್ಯಾಯಗಳ ಬಗ್ಗೆ ಪ್ರಶ್ನೆ ಮಾಡಿ ಜನರಿಗೆ ತಿಳಿಸುತ್ತೇವೆ. ನಮ್ಮ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರ ನೀಡಬೇಕು” ಎಂದು ತಿಳಿಸಿದರು.
“ಬಿಜೆಪಿ ನಾಯಕರು ಎಲ್ಲೆಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೋ ಅಲ್ಲಿ ಒಂದೊಂದು ದಿನ ಮುಂಚಿತವಾಗಿ ಈ ಕಾರ್ಯಕ್ರಮ ಮಾಡುತ್ತೇವೆ. ಆಗಸ್ಟ್ 2ರಂದು ಬಿಡದಿ, 3ರಂದು ರಾಮನಗರ, 4ರಂದು ಚನ್ನಪಟ್ಟಣ, 5ರಂದು ಮದ್ದೂರು, 6ರಂದು ಮಂಡ್ಯದಲ್ಲಿ, 9ರಂದು ಮೈಸೂರಿನಲ್ಲಿ ಈ ಕಾರ್ಯಕ್ರಮ ಮಾಡಲಾಗುವುದು” ಎಂದು ಮಾಹಿತಿ ನೀಡಿದರು.
“ಇದೇ ವೇಳೆ ಬಿಜೆಪಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯಾವ ರೀತಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜನರಿಗೆ ತಿಳಿಸುತ್ತೇವೆ. ಪ್ರತಿನಿತ್ಯ ಸಚಿವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಶಾಸಕರು ಹಾಗು ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ” ಎಂದು ತಿಳಿಸಿದರು.
*ಇದು ಎನ್ ಡಿಎ ಅಲ್ಲ, ಬಿಜೆಪಿ ಪಾದಯಾತ್ರೆ:*
“ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪಾದಯಾತ್ರೆ ಘೋಷಣೆ ಮಾಡಿದ್ದಾರೆ. ಇಷ್ಟುದಿನ ಕೇಂದ್ರ ಸಚಿವರಾದ ಕುಮಾರಸ್ವಾಮಿ ಹಾಗೂ ಜೆಡಿಎಸ್ ನವರು ಈ ವಿಚಾರದಲ್ಲಿ ಅತಂತ್ರವಾಗಿದ್ದರು. ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದರು. ಜೆಡಿಎಸ್ ಕಾರ್ಯಕಾರಿ ಸಮಿತಿ ಮುಖ್ಯಸ್ಥರು ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದನ್ನೂ ಗಮನಿಸಿದ್ದೇನೆ. ಬಿಜೆಪಿಯವರು ಕೂಡ ಗೊಂದಲದಲ್ಲಿದ್ದರು.
ಈಗ ಎರಡೂ ಪಕ್ಷಗಳ ನಾಯಕರು ಪಾದಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ್ದು, ಅದಕ್ಕೂ ಮುನ್ನ ನಾವು ಅವರನ್ನು ಪ್ರಶ್ನೆ ಮಾಡಬೇಕಿದೆ. ಈ ಪಾದಯಾತ್ರೆಯನ್ನು ಎನ್ ಡಿಎ ಮೈತ್ರಿಕೂಟ ಘೋಷಣೆ ಮಾಡಿಲ್ಲ. ಕೇವಲ ಬಿಜೆಪಿ ಮಾತ್ರ ಘೋಷಣೆ ಮಾಡಿದೆ.
ಪಾದಯಾತ್ರೆ ಸಂಬಂಧ ಪೊಲೀಸರು ಹಾಗೂ ಮಾಧ್ಯಮಗಳಿಗೆ ನೀಡಿರುವ ಮಾಹಿತಿಯಲ್ಲಿ ಬಿಜೆಪಿಯ ಪಾದಯಾತ್ರೆ ಎಂದು ಹೇಳಲಾಗಿದೆ ಹೊರತು, ಜೆಡಿಎಸ್ ಪಕ್ಷದ ಚಿಹ್ನೆ ಸಹ ಇಲ್ಲ.
ಪಾದಯಾತ್ರೆಗೆ ಅಪಸ್ವರ ಎತ್ತಿದ್ದ ಜೆಡಿಎಸ್ ನಾಯಕರು ಒಪ್ಪಿದ್ದಾರೆ. ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಭಾವಿಸಿದ್ದೆ” ಎಂದರು.
*ಪಾದಯಾತ್ರೆ ಸ್ವಾಗತಿಸುತ್ತೇನೆ:*
“ಅವರ ಪಾದಯಾತ್ರೆಗೆ ನಮ್ಮ ವತಿಯಿಂದ ಯಾವುದೇ ಅಡ್ಡಿ ಮಾಡುವುದಿಲ್ಲ. ಬೆಂಗಳೂರಿನಲ್ಲಿ ನಗರದ ಒಳಗೆ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡುತ್ತೇವೆ. ಅವರ ಪಾದಯಾತ್ರೆ ಬೇಡ ಎಂದು ನಾನೇಕೆ ಹೇಳಲಿ. ನಾನು ಅವರ ಪಾದಯಾತ್ರೆ ಸ್ವಾಗತಿಸುತ್ತೇವೆ. ನಮ್ಮನ್ನು ನೋಡಿ ಅವರು ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ, ಮಾಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಅವರ ವಿಚಾರ ತಿಳಿಸಲಿ, ನಮ್ಮ ವಿಚಾರ ನಾವು ತಿಳಿಸುತ್ತೇವೆ” ಎಂದು ತಿಳಿಸಿದರು.
*ಪ್ರಶ್ನೋತ್ತರ:*
ನೀವು ಪಾದಯಾತ್ರೆ ಮಾಡುತ್ತೀರಾ ಎಂದು ಕೇಳಿದಾಗ, “ನಾವು ಪಾದಯಾತ್ರೆ ಮಾಡುವುದಿಲ್ಲ. ಸತ್ಯ ಹರಿಶ್ಚಂದ್ರರಂತೆ ಪಾದಯಾತ್ರೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಅವರ ಕಾಲದಲ್ಲಿನ ಅಕ್ರಮಗಳ ಬಗ್ಗೆ, ರಾಜ್ಯಕ್ಕೆ ಮಾಡಿರುವ ಅನ್ಯಾಯ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಬಗ್ಗೆ ಪ್ರಶ್ನೆ ಮಾಡುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ ಅಧಿಕಾರಾವಧಿಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ನಮ್ಮ ಬಳಿಯೂ ದಾಖಲೆಗಳಿವೆ. ದಾಖಲೆ ಸಮೇತ ನಾವು ಪ್ರಶ್ನೆ ಮಾಡುತ್ತೇವೆ” ಎಂದು ತಿಳಿಸಿದರು.
*ಬಿಜೆಪಿ ಜತೆ ಜೆಡಿಎಸ್ ವಿಲೀನ ಮಾಡಿಕೊಂಡಿರಬೇಕು:*
ಪಾದಯಾತ್ರೆ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದವರು ಈಗ ಒಟ್ಟಿಗೆ ಪಾದಯಾತ್ರೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಅವರು ಏನಾದರೂ ಮಾಡಿಕೊಳ್ಳಲಿ. ಕುಮಾರಸ್ವಾಮಿ ಅವರ ಮಾತು, ವಿಚಾರ ನೋಡಿದ್ದೇನೆ. ಬಿಜೆಪಿ ಜತೆ ಜೆಡಿಎಸ್ ಅನ್ನು ವಿಲೀನ ಮಾಡಿಕೊಂಡಿರಬೇಕು. ಹೀಗಾಗಿ ಬಿಜೆಪಿ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ನೆಲೆ ಇಲ್ಲ. ಹೀಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
*ಪಕ್ಷ ಉಳಿಸಿಕೊಳ್ಳುವುದು ಅವರಿಗೆ ಬಿಟ್ಟ ವಿಚಾರ:*
ಯಾವುದಾದರೂ ಒತ್ತಡಕ್ಕೆ ಮಣಿದು ಕುಮಾರಸ್ವಾಮಿ ಅವರು ಕೊನೆ ಗಳಿಗೆಯಲ್ಲಿ ಪಾದಯಾತ್ರೆಗೆ ಸಮ್ಮತಿ ಸೂಚಿಸಿದ್ದಾರಾ ಎಂದು ಕೇಳಿದಾಗ, “ಜೆಡಿಎಸ್ ಪಕ್ಷವನ್ನು ಉಳಿಸಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಜೆಡಿಎಸ್ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಬಹುದು. ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಪಾದಯಾತ್ರೆ ವಿರೋಧಿಸುತ್ತಿದ್ದಾರೆ ಎಂದು ಭಾವಿಸಿದ್ದೆ. ಅದು ಅವರ ಇಚ್ಛೆ. ಅವರು ಒಟ್ಟಿಗೆಯಾದರೂ ಮಾಡಲಿ, ವಿಲೀನವಾದರೂ ಮಾಡಿಕೊಳ್ಳಲಿ. ನಮ್ಮ ಅಭ್ಯಂತರವಿಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ” ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಎಲ್ಲಾ ಸಚಿವರು ಭಾಗವಹಿಸುತ್ತಾರಾ ಎಂದು ಕೇಳಿದಾಗ, “ಕೆಲವು ಸಚಿವರಿಗೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಜವಾಬ್ದಾರಿ ನೀಡಲಾಗಿದೆ. ಅವರ ಹೊರತಾಗಿ ಬೇರೆ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಯಾವ ದಿನ ಯಾರು ಭಾಗವಹಿಸುತ್ತಾರೆ ಎಂಬ ಮಾಹಿತಿ ಶೀಘ್ರ ಬಿಡುಗಡೆ ಮಾಡುತ್ತೇವೆ” ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುತ್ತೀರಾ ಎಂದು ಕೇಳಿದಾಗ, “ಖಂಡಿತಾ, ಪ್ರಶ್ನೆಗಳನ್ನು ಕೇಳುತ್ತೇವೆ, ದಾಖಲೆ ಬಿಡುಗಡೆ ಮಾಡುತ್ತೇವೆ” ಎಂದು ತಿಳಿಸಿದರು.
ಬಿಜೆಪಿ ಕಾಲದ ಅಕ್ರಮಗಳ ಬಗ್ಗೆ ತನಿಖೆ ಮಾಡಬಹುದಲ್ಲವೇ ಎಂದು ಕೇಳಿದಾಗ, “ನಾವು ತನಿಖೆ ಮಾಡುತ್ತಿದ್ದೇವೆ. ಸತ್ಯಾಂಶ ಜನರಿಗೆ ತಿಳಿಯಬೇಕು. ಬಿಜೆಪಿ ವಿಧಾನ ಪರಿಷತ್ ಮಾಜಿ ಸದಸ್ಯ ವೀರಯ್ಯ ಅವರು ಅಕ್ರಮದಲ್ಲಿ ಭಾಗಿಯಾಗಿ ಜೈಲು ಸೇರಿದ್ದಾರೆ. ಅವರು ಇಂತಹ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಯಾರಿಗೂ ಗೊತ್ತಿರಲಿಲ್ಲ. ನಾವು ತನಿಖೆ ಚುರುಕು ಮಾಡಿದ ಕಾರಣ ಈಗ ಜೈಲು ಸೇರಿದ್ದಾರೆ” ಎಂದು ತಿಳಿಸಿದರು.
ಹಗರಣದ ತನಿಖೆ ತಾರ್ಕಿಕ ಅಂತ್ಯ ಕಾಣಲಿದೆಯೇ ಅಥವಾ ಬೆದರಿಕೆ ತಂತ್ರವೇ ಎಂದು ಕೇಳಿದಾಗ, “ನಾವು ಯಾರನ್ನೂ ಬೆದರಿಸುವ ಅಗತ್ಯವಿಲ್ಲ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ