ಶಾಸಕ ಜಮೀರ್ ಅಹ್ಮದ್ ಪೊಲೀಸ್ ವಶಕ್ಕೆ

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಪ್ರಚೋದನಕಾರಿ ಹೇಳಿಕೆ ಖಂಡಿಸಿ, ರೆಡ್ಡಿ ಮನೆ ಮುಂದೆ ಪ್ರತಿಭಟನೆಗೆ ಸಜ್ಜಾಗಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇಂದು ಜಮೀರ್ ಅಹ್ಮದ್ ನೇತೃತ್ವದಲ್ಲಿ ನೂರಾರು ಬೆಂಬಲಿಗರು ಬಳ್ಳಾರಿ ನಗರದ ಕಂಟ್ರಿ ಕ್ಲಬ್ ಬಳಿ ಮೆರವಣಿಗೆ ಮೂಲಕ‌ ರೆಡ್ಡಿ ಮನೆ ಮುಂದೆ ಪ್ರತಿಭಟನೆಗೆ ತೆರಳಲು ಸಜ್ಜಾಗಿದ್ದರು. ಅನುಮತಿಯಿಲ್ಲದೇ ಮೆರವಣಿಗೆಗೆ ಸಜ್ಜಾದ ಹಿನ್ನೆಲೆಯಲ್ಲಿ ಜಮೀರ್​ ಸೇರಿದಂತೆ 30ಕ್ಕೂ ಹೆಚ್ಚು ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಕಿಡಿಕಾರಿರುವ ಜಮೀರ್ ಅಹ್ಮದ್, ಪೊಲೀಸರು ನಮ್ಮನ್ನು ತಡೆದು ವಶಕ್ಕೆ ಪಡೆದಿರುವುದು ಸರಿಯಲ್ಲ. ನಾವು ಶಾಂತಿಭಂಗ ಮಾಡಲು ಬಂದಿಲ್ಲಾ, ಪ್ರತಿಭಟನೆಗೆ ಬಂದಿದ್ದೆವು. ಪೊಲೀಸರು ಎಂದರೆ ಬಹಳ ಗೌರವ ಇದೆ. ಬಳ್ಳಾರಿ ಎಸ್ಪಿ ಜೊತೆ ಮಾತನಾಡುತ್ತಿದ್ದೇನೆ. ಪೊಲೀಸರು ನನ್ನನ್ನ ಅರೆಸ್ಟ್​​ ಮಾಡಲಿ. ಗುಂಡು ಹೊಡೆದು ಸಾಯಿಸಲಿ ಬಿಡಿ ಯಾರು ಬೇಡ ಅಂತಾರೆ. ಮೊನ್ನೆ ಗೋಲಿಬಾರ್​​​ನಲ್ಲಿ ಇಬ್ಬರನ್ನ ಸಾಯಿಸಿದ್ದಾರೆ. ಈಗ ನನ್ನನ್ನು ಸಾಯಿಸಲಿ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೋಮಶೇಖರ್ ರೆಡ್ಡಿ ಉಫ್​ ಅಂತ ಊದಿದ್ರೆ ನೀವೆಲ್ಲಾ ಹಾರಿ ಹೋಗ್ತೀವಿ ಎಂದಿದ್ದರು. ನಮ್ಮ ವಿರುದ್ಧ ಖಡ್ಗ ತೆಗೆಯುತ್ತೇವೆ ಎಂದಿದ್ದರಲ್ಲ. ಬಳ್ಳಾರಿಗೆ ಬಂದಿದ್ದೇನೆ ಎಲ್ಲಪ್ಪಾ ನಿನ್​​​​​​​ ಖಡ್ಗ? ಎಂದು ಪ್ರೆಶ್ನಿಸಿದ್ದಾರೆ.

Home add -Advt

ಪೌರತ್ವ ಕಾಯ್ದೆ ತಿದ್ದುಪಡಿ ಬೆಂಬಲಿಸಿ ಬಳ್ಳಾರಿ ನಗರದಲ್ಲಿ ನಡೆದ ಸಮಾವೇಶದಲ್ಲಿ ಶಾಸಕ ಸೋಮಶೇಖರ್ ರೆಡ್ಡಿ, ಅಲ್ಪಸಂಖ್ಯಾರಾದ ನೀವು 17 ಪರ್ಸೆಂಟ್‌ ಇದ್ದೀರಾ. ಹಿಂದೂಗಳು 80 ರಷ್ಟಿದ್ದು, ನಾವೆಲ್ಲರೂ ಉಫ್ ಎಂದು ಊದಿದರೆ ಕೊಚ್ಚಿ ಹೋಗುತ್ತೀರಿ. ಶಿವಾಜಿ ಮಹಾರಾಜರ ರೀತಿ ಖಡ್ಗ ಬಳಸಿದರೆ ನೀವೆಲ್ಲ ನಿರ್ನಾಮವಾಗುತ್ತೀರಿ. ಮುಸಲ್ಮಾನರು 10 ಜನರನ್ನು ಹುಟ್ಟಿಸಿದರೆ ಹಿಂದುಗಳು 50 ಜನರನ್ನು ಹುಟ್ಟಿಸುತ್ತೇವೆ. ಬೇಕೂಫ್ ಕಾಂಗ್ರೆಸ್‌ನವರ ಮಾತು ಕೇಳಿ ಬೀದಿಗೆ ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಧಮಕಿ ಹಾಕಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button