ಪ್ರಗತಿವಾಹಿನಿ ಸುದ್ದಿ, ಮೂಲ್ಕಿ(ದಕ್ಷಿಣ ಕನ್ನಡ): ಕಾಂಗ್ರೆಸ್ ದೇಶದಲ್ಲಿ ಶಾಂತಿ ನೆಲೆಸುವುದನ್ನು ಸಹಿಸುವುದಿಲ್ಲ, ಕಾಂಗ್ರೆಸ್ ಪಕ್ಷ ಶಾಂತಿಯ ವಿರೋಧಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೂಲ್ಕಿಯಲ್ಲಿ ಬುಧವಾರ ಬೃಹತ್ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
“ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ದೇಶದಲ್ಲಿ ಶಾಂತಿ ಇರದು. ದೇಶದ ಪ್ರಗತಿಯನ್ನು ಕಾಂಗ್ರೆಸ್ ಎಂದೂ ಸಹಿಸುವುದಿಲ್ಲ ಎಂದ ಮೋದಿ, ತುಷ್ಟೀಕರಣವೇ ಕಾಂಗ್ರೆಸ್ ನ ಪ್ರಮುಖ ಉದ್ದೇಶವಾಗಿದೆ. ಭಯೋತ್ಪಾದನೆ ಮಾಡುವವರನ್ನು ಕಾಂಗ್ರೆಸ್ ಬೆಂಬಲಿಸುತ್ತದೆ. ವಿಚ್ಛಿದ್ರಕಾರಿ ಚಟುವಟಿಕೆಗಳನ್ನು ಮಾಡುವ ಸಂಘಟನೆಗಳ ಸದಸ್ಯರನ್ನು ರಕ್ಷಿಸಲು ಮೈದಾನಕ್ಕೆ ಬರುತ್ತದೆ. ಅವರ ಮೇಲಿನ ಕೇಸುಗಳನ್ನು ವಾಪಸ್ ಪಡೆಯುವುದಷ್ಟೇ ಅಲ್ಲ, ಅವರ ಬಿಡುಗಡೆಯನ್ನೂ ಮಾಡುತ್ತದೆ” ಎಂದು ಜರಿದರು.
“ಭಾರತದ ಅಭಿವೃದ್ಧಿಯನ್ನು ಇಡೀ ಜಗತ್ತೇ ಶ್ಲಾಘಿಸುತ್ತಿದೆ. ಆದರೆ ಕಾಂಗ್ರೆಸ್ಸಿಗರು ಇಡೀ ಜಗತ್ತನ್ನೇ ತಿರುಗಿ ಅಪಪ್ರಚಾರ ಮಾಡುತ್ತಿದ್ದಾರೆ. ಸೇನೆ, ಸೈನಿಕರನ್ನೂ ಅವಮಾನಿಸುತ್ತಿದ್ದಾರೆ” ಎಂದು ಮೋದಿ ಹೇಳಿದರು. ಇದೇ ವೇಳೆ ಜೆಡಿಎಸ್ ಕೂಡ ಕಾಂಗ್ರೆಸ್ ನ ಇನ್ನೊಂದು ಮುಖ ಎಂದು ಅವರು ಹೇಳಿದರು.
“ಕರ್ನಾಟಕವನ್ನು ನಂ.1 ಮಾಡುವುದು ನಮ್ಮ ಉದ್ದೇಶ. ಮೀನುಗಾರಿಕೆ ಹಾಗೂ ಕೃಷಿಯಲ್ಲಿ ನಾವು ನಂ.1 ಆಗಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಅಸ್ಥಿರತೆ ಇದ್ದರೆ ನಿಮ್ಮ ಭಾಗ್ಯವೂ ಅಸ್ಥಿತರವಾಗಲಿದೆ. ಕರ್ನಾಟಕದಲ್ಲಿ ಸ್ಥಿರ ಸರಕಾರ ಬರದಿದ್ದಲ್ಲಿ ತಮ್ಮ ಸಂಕಲ್ಪವೂ ಸ್ಥಿರತೆಯನ್ನು ಕಳೆದುಕೊಳ್ಳಲಿವೆ ಎಂದು ಮೋದಿ ಹೇಳಿದರು.
“18 ವರ್ಷದ ಯುವ ಮತದಾರರು ದೇಶದ, ರಾಜ್ಯದ ಭವಿಷ್ಯ ನಿರ್ಧರಿಸಲಿದ್ದಾರೆ. ಈಗಿನ ಸಾಧನೆಗಳೆಲ್ಲವೂ ಮೋದಿಯಿಂದದದ್ದಲ್ಲ, ಬದಲಾಗಿ ನಿಮ್ಮ ಒಂದು ಮತದ ಬಲದಿಂದಾದದ್ದು ಎಂಬುದನ್ನು ಗಮನಿಸಬೇಕು” ಎಂದು ಮೋದಿ ಹೇಳಿದರು.
“ತುಳುವಪ್ಪೆ ಜೋಕುಲ್ ನೆ ಸೊಲ್ಮೆಲ್” ಎಂದು ತುಳುವಿನಲ್ಲೇ ಭಾಷಣ ಆರಂಭಿಸುವ ಮೂಲಕ ಮೋದಿ ತುಳುನಾಡ ಜನರ ಅಭಿಮಾನ ಹೆಚ್ಚಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಇತರ ಗಣ್ಯರು ಹಾಜರಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಜಮಾಯಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ