Kannada NewsKarnataka NewsLatest

*ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ, ಯಾರೇ ಹೋದರೂ ಪಕ್ಷಕ್ಕೆ ನಷ್ಟವಾಗದು: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; “ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ನೂರಾರು ನಾಯಕರು ಬರುತ್ತಾರೆ, ಹೋಗುತ್ತಾರೆ. ಯಾರೇ ಬರಲಿ, ಯಾರೇ ಹೋಗಲಿ ಪಕ್ಷಕ್ಕೆ ಅದರಿಂದ ನಷ್ಟವಾಗುವುದಿಲ್ಲ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:

“ಜಗದೀಶ್ ಶೆಟ್ಟರ್ ಅವರು ಬಿಜೆಪಿ ಆಂತರಿಕ ವಿಚಾರದಿಂದ ಬೇಸತ್ತು ಆ ಪಕ್ಷದ ವಿರುದ್ಧ ದೊಡ್ಡ ಆರೋಪ ಮಾಡಿ ಕಾಂಗ್ರೆಸ್ ಸೇರಿದ್ದರು. ಅವರಿಗೆ ಪಕ್ಷದ ಟೆಕೆಟ್ ನೀಡಿದ್ದೆವು. 35 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಆದರೂ ಅವರಿಗೆ ವಿಧಾನ ಪರಿಷತ್ತಿಗೆ ನಾಮನಿರ್ದೆಶನ ಮಾಡಿದ್ದೆವು. ಕಳೆದ 2-3 ತಿಂಗಳಿಂದ ಬಿಜೆಪಿ ನಾಯಕರು ಅವರನ್ನು ಸಂಪರ್ಕ ಮಾಡುತ್ತಿದ್ದರು. ಮೊನ್ನೆ ಕೂಡ ಬಿಜೆಪಿ ಸೇರುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ ನಿನ್ನೆ ಏಕಾಏಕಿ ಪಕ್ಷ ತೊರೆದಿದ್ದಾರೆ.

ನಮ್ಮ ಪಕ್ಷ 136 ಸೀಟು ಗೆದ್ದಿದೆ. ನಮ್ಮ ತಪ್ಪಿನಿಂದ 6-7 ಸೀಟು ಸೋತಿದ್ದೇವೆ. ಈಗಲೂ ಬಹಳ ಮಂದಿ ನಮ್ಮ ಪಕ್ಷ ಸೇರಲು ಎದುರು ನೋಡುತ್ತಿದ್ದಾರೆ. ನಾವು ಸಿದ್ಧಾಂತ, ನೀತಿ ಮೇಲೆ ರಾಜಕಾರಣ ಮಾಡುವವರು. ಬೆಳಗಾವಿ ಹಾಗೂ ಇತರೆ ಭಾಗದ ನಾಯಕರು, ಕಾರ್ಯಕರ್ತರು ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಹೋಗಿದ್ದು ಒಳ್ಳೆಯದಾಯಿತು ಎಂದು ಹೇಳಿದ್ದಾರೆ. ದೂರದೃಷ್ಟಿ ಇಟ್ಟುಕೊಂಡು ಅವರಿಗೆ ನಾವು ಅವಕಾಶ ಮಾಡಿಕೊಟ್ಟಿದ್ದೆವು. ಅವರು ಬಿಜೆಪಿ ವಿರುದ್ಧ ಕೊಟ್ಟ ಹೇಳಿಕೆಗಳಿಗೆ ಈಗ ಅವರೇ ಉತ್ತರ ನೀಡಬೇಕು. ಅದರ ಬಗ್ಗೆ ನಾವು ಮಾತನಾಡುವ ಅಗತ್ಯವಿಲ್ಲ. ಅವರ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಿಗೆ ನೀಡುತ್ತೇವೆ.

ಸಂವಿಧಾನ ಭಾರತೀಯರ ಪವಿತ್ರ ಗ್ರಂಥ:

ರಾಜ್ಯದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಪವಿತ್ರ ಗ್ರಂಥ ಸಂವಿಧಾನ. ಇದು ನಮ್ಮ ರಾಷ್ಟ್ರೀಯ ಗ್ರಂಥ. ಸಂವಿಧಾನ ಎತ್ತಿಹಿಡಿಯುವುದು ನಮ್ಮ ಕರ್ತವ್ಯ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜದ ಎಲ್ಲಾ ವರ್ಗದ ಜನರೂ ಅಧಿಕಾರಕ್ಕೆ ಬಂದಂತೆ. ಕಾಂಗ್ರೆಸ್ ಎಲ್ಲಾ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತದೆ.

ನಾವು ದೇಶದ ಚುನಾವಣೆಯ ಸಮೀಪದಲ್ಲಿದ್ದೇವೆ. ಮಾಧ್ಯಮಗಳಲ್ಲಿ ಅನೇಕ ಚರ್ಚೆ ಆಗುತ್ತಿವೆ. ಇಂಡಿಯಾ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತದೆ. ಕೆಲವರು ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತೇವೆ ಎಂದು ನೀಡಿರುವ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇವೆ. ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದೆ.

ಪ್ರಶ್ನೋತ್ತರ:

ಜೆಡಿಎಸ್ ಮತ್ತು ಕುಮಾರಸ್ವಾಮಿ ಬಿಜೆಪಿ ವಕ್ತಾರರು:

ಮುಂದೆ ತತ್ವ ಸಿದ್ಧಾಂತ ನಂಬಿ ಬರುವವರನ್ನು ಮಾತ್ರ ಸೇರಿಸಿಕೊಳ್ಳುತ್ತೀರಾ ಎಂದು ಕೇಳಿದಾಗ, “ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ನಾವು ಬಿಜೆಪಿಯವರನ್ನು ಅಧಿಕಾರದಿಂದ ದೂರವಿಡಲು ಕುಮಾರಸ್ವಾಮಿ ಅವರಿಗೆ ಬೇಷರತ್ ಬೆಂಬಲ ನೀಡಿ ಮುಖ್ಯಮಂತ್ರಿ ಮಾಡಿದ್ದೆವು. ಆ ಸರ್ಕಾರವನ್ನು ಅವರು ಉಳಿಸಿಕೊಳ್ಳಲಿಲ್ಲ. ಆಪರೇಷನ್ ಕಮಲದ ಮೂಲಕ ಸರ್ಕಾರ ಬೀಳಿಸಿದವರ ಜತೆಗೆ ಅವರು ಇಂದು ನೆಂಟಸ್ತನ ಬೆಳೆಸಿದ್ದಾರೆ. ಜೆಡಿಎಸ್ ಹಾಗೂ ಕುಮಾರಸ್ವಾಮಿ ಈಗ ಬಿಜೆಪಿಯ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರ ಬಿದ್ದಾಗ ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ಆಡಿದ ಮಾತುಗಳಿಗೆ ಈಗ ಅವರೇ ಉತ್ತರ ನೀಡಬೇಕು. ರಾಜಕಾರಣ ಹೀಗಿರುವಾಗ ಬಗ್ಗೆ ನಮಗೆ ನಾಚಿಕೆಯಾಗುತ್ತದೆ. ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೂ ನಾವು ನೀತಿ, ಸಿದ್ಧಾಂತದ ಮೇಲೆ ರಾಜಕಾರಣ ಮಾಡಬೇಕು” ಎಂದು ತಿಳಿಸಿದರು.

ಲಕ್ಷ್ಮಣ ಸವದಿ ಪಕ್ಷ ಬಿಡುವುದಿಲ್ಲ:

ಲಕ್ಷ್ಮಣ್ ಸವದಿ ಅವರನ್ನು ಭೇಟಿ ಮಾಡಿದ್ದ ಬಗ್ಗೆ ಕೇಳಿದಾಗ, “ನಾನು ಶೆಟ್ಟರ್ ಅವರ ಜತೆಗೆ ಬಂದವನಲ್ಲ. ನಾನು ನನ್ನ ವೈಯಕ್ತಿಕ ನಿರ್ಧಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಸವದಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಜತೆಗೆ ಅವರೇ ಮಾಧ್ಯಮಗಳಿಗೆ ಉತ್ತರ ನೀಡಿದ್ದಾರೆ. ಅವರು ಈಗ ನಮ್ಮ ಪಕ್ಷದ ನಾಯಕರು ಹಾಗೂ ಪ್ರಮುಖ ಆಸ್ತಿ” ಎಂದು ತಿಳಿಸಿದರು.

ಬಿಜೆಪಿಯವರು ಸವದಿ ಅವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಬಿಜೆಪಿಯವರು ಯಾರನ್ನೂ ಬಿಡುತ್ತಿಲ್ಲ. ಎಲ್ಲರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ನಮಗೂ ಆ ಕೆಲಸ ಗೊತ್ತಿದೆ. ನಾವು ಮನಸ್ಸು ಮಾಡಿದ್ದರೆ ಎಷ್ಟೋ ಮನೆಗಳು ಖಾಲಿಯಾಗಿರುತ್ತಿದ್ದವು” ಎಂದು ತಿಳಿಸಿದರು.

ನಮ್ಮ ಸಿದ್ಧಾಂತದಲ್ಲಿದ್ದವರನ್ನು ಮತ್ತೆ ಕರೆತರುವ ಪ್ರಯತ್ನದಲ್ಲಿದ್ದೇವೆ ಎಂಬ ಸುನೀಲ್ ಕುಮಾರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಪಕ್ಷದಿಂದ ಕರೆದುಕೊಂಡು ಹೋದರಲ್ಲ, ಅವರಿಗೆ ಯಾವ ಸಿದ್ಧಾಂತವಿತ್ತು? ಈಗ ಅವರಿಗೆ ಯಾವ ಸಿದ್ಧಾಂತದ ಪಾಠ ಮಾಡುತ್ತಿದ್ದಾರೆ? ಆಗ ಅವರೆಲ್ಲರೂ ಆ ಸಿದ್ಧಾಂತ ಒಪ್ಪಿದ್ದಾರಾ? ಈ ಬಗ್ಗೆ ಅವರ ಕ್ಷೇತ್ರದ ಕಾರ್ಯಕರ್ತರನ್ನು ಕೇಳಿ ನೋಡಿ, ಹೇಳುತ್ತಾರೆ” ಎಂದು ತಿಳಿಸಿದರು.

ಮುಂದೆ ಪಕ್ಷಕ್ಕೆ ಸೇರಿಸಿಕೊಳ್ಳುವಾಗ ತತ್ವ ಸಿದ್ಧಾಂತಕ್ಕೆ ಬದ್ಧರಾಗಿರುವವರನ್ನು ಸೇರಿಸಿಕೊಳ್ಳಿ ಎಂಬ ಖರ್ಗೆ ಅವರ ಸಲಹೆ ಬಗ್ಗೆ ಕೇಳಿದಾಗ, “ಖಂಡಿತವಾಗಿ ದೊಡ್ಡವರು ಹೇಳಿದ ಸಲಹೆಗಳನ್ನು ಸ್ವೀಕರಿಸುತ್ತೇವೆ. ಕೆಲವು ವಿಚಾರದಲ್ಲಿ ಹಿರಿಯರ ಸಲಹೆ ಬಹಳ ಮುಖ್ಯ” ಎಂದು ತಿಳಿಸಿದರು.

ರಾಜಣ್ಣ ಹೇಳಿಕೆಗೆ ಸಿಎಂ ಹಾಗೂ ಎಐಸಿಸಿಯವರು ಉತ್ತರ ನೀಡುತ್ತಾರೆ:

ನಾವು ಹೈಕಮಾಂಡ್ ಗುಲಾಮರೇ ಎಂಬ ಸಚಿವ ರಾಜಣ್ಣ ಅವರ ಹೇಳಿಕೆಯ ಬಗ್ಗೆ ಕೇಳಿದಾಗ, “ನಾವು ರಾಜಣ್ಣ ಅವರ ಹೇಳಿಕೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ. ಈ ವಿಚಾರವಾಗಿ ಮುಖ್ಯಮಂತ್ರಿಗಳು ಉತ್ತರ ನೀಡಿದ್ದಾರೆ. ಈ ಬಗ್ಗೆ ಎಐಸಿಸಿ ಗಮನಿಸಲಿದೆ. ರಾಜಣ್ಣ ಅವರು ಶಾಸಕರು ಹಾಗೂ ಕ್ಯಾಬಿನೆಟ್ ಸಚಿವರಾಗಿದ್ದು ಮುಖ್ಯಮಂತ್ರಿಗಳು ಈ ಬಗ್ಗೆ ಉತ್ತರ ನೀಡುತ್ತಾರೆ” ಎಂದರು.

ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಹೌದಾ, ನಾನು ಅವರ ಸಂಪರ್ಕದಲ್ಲಿರುವುದರ ಬಗ್ಗೆ ಗೊತ್ತಿಲ್ಲವೇ? ನಾವು ಅವರ ಶಾಸಕರ ಪಟ್ಟಿ ಹೇಳಬೇಕಾ?” ಎಂದು ತಿರುಗೇಟು ಕೊಟ್ಟರು.

ಲೋಕಸಭೆ ಚುನಾವಣೆ ನಂತರ ಬಿಜೆಪಿ ರಾಜ್ಯ ಸರ್ಕಾರ ಪತನಗೊಳಿಸುವ ಪ್ರಯತ್ನ ಮಾಡುತ್ತದಾ ಎಂದು ಕೇಳಿದಾಗ, “ಬೇರೆ, ಬೇರೆ ಪಕ್ಷಗಳ ಪರಿಸ್ಥಿತಿ ಆ ರೀತಿ ಆಗಬಹುದು.ಆದರೆ ಕಾಂಗ್ರೆಸ್ ಗೆ ಆ ಪರಿಸ್ಥಿತಿ ಬರುವುದಿಲ್ಲ ಎಂದು ನನಗನಿಸುತ್ತದೆ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button