ಮುಂದಿನ 5 ದಿನ ಎಲ್ಲ ಊರಲ್ಲೂ ಕಾಂಗ್ರೆಸ್ ಬೃಹತ್ ಪ್ರತಿಭಟನೆ – ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಹಿರೇಬಾಗೇವಾಡಿ (ಬೆಳಗಾವಿ) – ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಮುಂದಿನ 5 ದಿನಗಳ ಕಾಲ ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿ ಊರಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
ಹಿರೇಬಾಗೇವಾಡಿಯಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪೆಟ್ರೋಲ್ ಬೆಲೆ 1 ರೂ. ಏರಿದ್ದಕ್ಕೆ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬೀದಿಗಿಳಿದು ಪ್ರತಿಭಟಿಸಿದ್ದರು. ಈಗ ತಿಂಗಳಲ್ಲಿ 16 ಬಾರಿ ಬೆಲೆ ಏರಿಕೆಯಾಗಿದೆ. 100 ರೂ. ಗಡಿ ದಾಟಿದೆ. ಅಚ್ಚೇದಿನ್ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಇವರು ಜನರನ್ನು ಅಕ್ಷರಶಃ ಬೀದಿಗೆ ತಳ್ಳಿದ್ದಾರೆ ಎಂದು ಅವರು ಹೇಳಿದರು.
ಇದು ಕಾಂಗ್ರೆಸ್ ಪ್ರತಿಭಟನೆಯಲ್ಲ. ಜನಸಾಮಾನ್ಯರ ಪ್ರತಿಭಟನೆ. ಜನರಿಗೆ ಸಂಕಷ್ಟ ಬಂದಾಗಲೆಲ್ಲ ಕಾಂಗ್ರೆಸ್ ಅವರ ನೆರವಿಗೆ ನಿಂತಿದೆ. ಈಗ ಪೆಟ್ರೋಲ್, ಡಿಸೆಲ್, ಅಡುಗೆ ಎಣ್ಣೆ, ಗ್ಯಾಸ್ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಕಾಂಗ್ರೆಸ್ ಮಾಡಿರುವ ವಿದೇಶಿ ಸಾಲ ತೀರಿಸುವುದಕ್ಕಾಗಿ ಪೆಟ್ರೋಲ್ ಬೆಲೆ ಏರಿಸಲಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಇದ್ದಾಗಿ ಒಂದು ಲಕ್ಷ ಕೋಟಿ ರೂ. ಇದ್ದ ವಿದೇಶಿ ಸಾಲ ಈಗ 6 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ನರೇಂದ್ರ ಮೋದಿ ಸರಕಾರ ದೇಶವನ್ನು 7 ವರ್ಷದಲ್ಲಿ 70 ವರ್ಷ ಹಿಂದಕ್ಕೆ ಒಯ್ದಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಕಿಡಿಕಾರಿದರು.
ಚನ್ನರಾಜ ಹಟ್ಟಿಹೊಳಿ, ಅಡಿವೇಶ ಇಟಗಿ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬೆಲೆ ಏರಿಕೆ ವಿರುದ್ಧ ಸಿಡಿದೆದ್ದ ಕಾಂಗ್ರೆಸ್: ಲಕ್ಷ್ಮಿ ಹೆಬ್ಬಾಳಕರ್ ನೇತೃತ್ವದಲ್ಲಿ ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ