ವಿಶ್ವಾಸಮತ ಯಾಚನೆ ಮುಂದಕ್ಕೆ ಹಾಕಲು ಕಾಂಗ್ರೆಸ್ ತಂತ್ರ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಸುಪ್ರಿಂ ಕೋರ್ಟ್ ತೀರ್ಪು ಮತ್ತು ಸ್ಪೀಕರ್ ರೂಲಿಂಗ್ ಆಧಾರವಾಗಿಟ್ಟುಕೊಂಡು ವಿಶ್ವಾಸಮತ ಯಾಚನೆಯನ್ನು ಮುಂದಕ್ಕೆ ಹಾಕಲು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ.
ಇಂದು ಬೆಳಗ್ಗೆ ಸದನ ಆರಂಭವಾಗುವುದಕ್ಕೂ ಮುನ್ನ ಮುಖ್ಯಮಂತ್ರಿ ನೇತೃತ್ವದ ಮೈತ್ರಿ ಪಕ್ಷಗಳ ನಿಯೋಗ ಸ್ಪೀಕರ್ ಅವರನ್ನು ಭೇಟಿಯಾಗಿ 2 ದಿನ ಕಾಲಾವಕಾಶ ಕೇಳಿತ್ತು. ಆದರೆ ಸ್ಪೀಕರ್ ಸದನದ ಆರಂಭದಲ್ಲೇ, ನಾನು ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸುವುದಾಗಿ ಭರವಸೆ ನೀಡಿದ್ದೇನೆ. ನನ್ನನ್ನು ವಿಲನ್ ಮಾಡಬೇಡಿ ಎಂದು ವಿನಂತಿಸಿದ್ದರು.
ಅಲ್ಲದೆ ಸಿದ್ದರಾಮಯ್ಯ ಮೊದಲದಿನ ಎತ್ತಿದ್ದ ಕ್ರಿಯಾಲೋಪಕ್ಕೂ ರೂಲಿಂಗ್ ನೀಡಿದರು. ವಿಪ್ ನೀಡುವ ಅಧಿಕಾರ ಶಾಸಕಾಂಗ ಪಕ್ಷದ ನಾಯಕನಿಗೆ ಇದೆ ಎಂದು ಸ್ಪೀಕರ್ ಹೇಳಿದರು. ಆದರೆ ಈ ಸಂಬಂಧ ದೂರು ಬಂದರೆ ನಿರ್ಣಯ ನೀಡುತ್ತೇನೆ. ಊಹಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ನಂಟು -ಕೃಷ್ಣ ಭೈರೇಗೌಡ
ಆದರೆ ಇಂದು ಸದನದ ಅರ್ಧಭಾಗವನ್ನು ಕಾಂಗ್ರೆಸ್ ನ ಕೃಷ್ಣ ಭೈರೇಗೌಡ ಬಳಸಿಕೊಂಡರು. ಅವರು ಮಾತನಾಡುತ್ತ, ಅತೃಪ್ತ ಶಾಸಕರೊಂದಿಗೆ ಬಿಜೆಪಿ ನಂಟು ಹೊಂದಿರುವುದನ್ನು ಎಳೆ ಎಳೆಯಾಗಿ ವಿವರಿಸಿದರು. ಮಾಧ್ಯಮಗಳನ್ನು ಪ್ರಕಟವಾಗಿರುವ ವರದಿಗಳನ್ನೂ ಬಿಚ್ಚಿಟ್ಟರು.
ಅಂತಿಮವಾಗಿ, ವಿಪ್ ಸಂಬಂಧ ಸುಪ್ರಿಂ ಕೋರ್ಟ್ ಅಂತಿಮ ತೀರ್ಪು ನೀಡಿದ ನಂತರವೇ ವಿಶ್ವಾಸಮತ ಯಾಚಿಸುವುದು ಸರಿಯಾಗುತ್ತದೆ. ಅತೃಪ್ತ ಶಾಸಕರು ತಮಗೆ ಸುಪ್ರಿಂ ಕೋರ್ಟ್ ರಕ್ಷಣೆ ಇದೆ ಎಂದು ಭಾವಿಸಿದ್ದಾರೆ. ಆದರೆ ಸ್ಪೀಕರ್ ರೂಲಿಂಗ್ ನಲ್ಲಿ ವಿಪ್ ನೀಡಲು ಅವಕಾಶವಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ಹೊರಗಿರುವವರು ಬರದೆ ವಿಶ್ವಾಸಮತ ಕೋರುವುದು ಸಮಂಜಸವಲ್ಲ ಎಂದರು.
ಜಗದೀಶ ಶೆಟ್ಟರ್ ಮನವಿ
ಊಟದ ವಿರಾಮದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಇನ್ನಷ್ಟು ಸದಸ್ಯರು ಮಾತನಾಡಲಿದ್ದಾರೆ. ಮಾತನಾಡುವುದಕ್ಕೆ ಸಮಯ ನಿಗದಿಪಡಿಸುವಂತೆ ಬಿಜೆಪಿಯ ಜಗದೀಶ ಶೆಟ್ಟರ್ ಮಾಡಿದ ಮನವಿಯನ್ನು ಸ್ಪೀಕರ್ ನಿರಾಕರಿಸಿ, ಇಂದೇ ವಿಶ್ವಾಸಮತ ಯಾಚನೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.
ಆದರೆ, ಕಾಂಗ್ರೆಸ್ ಮಾತ್ರ ಸುಪ್ರಿಂ ಕೋರ್ಟ್ ಅಂತಿಮ ತೀರ್ಪು ಬರುವವರೆಗೆ ವಿಶ್ವಾಸಮತಕ್ಕೆ ಹಾಕದಂತೆ ಒತ್ತಡ ಹೇರುತ್ತಿದೆ. ಅಂತಿಮವಾಗಿ ಸ್ಪೀಕರ್ ಏನು ಹೇಳುತ್ತಾರೆ, ಇನ್ನೂ ಯಾರ್ಯಾರು ಮಾತನಾಡಲಿದ್ದಾರೆ, ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ, ಅದನ್ನು ಹೇಗೆ ನಿಯಂತ್ರಿಸಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಊಟದ ವಿರಾಮದಲ್ಲಿ ಪುನಃ ಕಾಂಗ್ರೆಸ್, ಜೆಡಿಎಸ್ ನಿಯೋಗ ಸ್ಪೀಕರ್ ಭೇಟಿಗೆ ತೆರಳಿದೆ.
ಇದನ್ನೂ ಓದಿ –
ವಿಶ್ವಾಸ ಮತ ಯಾಚನೆಗೆ ಇನ್ನೂ 2 ದಿನ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ