*ನಾಳೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಪ್ರತಿಭಟಿಸಲಿದೆ: ಡಿಕೆಶಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೋಲೆಗೆ ಮುಂದಾಗಿದ್ದಾರೆ. ಇದನ್ನು ಖಂಡಿಸಿ ನಾಳೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಾಜ್ಯಪಾಲರ ನಡೆಯನ್ನು ಖಂಡಿಸಿ ಪಕ್ಷವು ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಿದೆ. ಯಾವುದೇ ದಾಂಧಲೆ ಇಲ್ಲದೆ ಶಾಂತಿಯುತವಾಗಿ ಎಚ್ಚರಿಕೆಯಿಂದ ಪ್ರತಿಭಟನೆ ನಡೆಸಲಾಗುವುದು. ಗಾಂಧಿ ಪ್ರತಿಪಾದಿಸಿದ ಶಾಂತಿ ಮಾರ್ಗದಲ್ಲಿ ಪ್ರತಿಭಟನೆ ನಡೆಸಿ ದೇಶಕ್ಕೆ ಸಂದೇಶ ನೀಡುವುದಾಗಿ ಡಿಕೆಶಿ ಹೇಳಿದ್ದಾರೆ.
ರಾಜ್ಯಪಾಲರು ತೀರ್ಮಾನ ಸರಿಯಾಗಿ ಮಾಡಿಲ್ಲ. ಸಚಿವ ಸಂಪುಟ, ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿದೆ. ಹಿಂದಿನ ಸಂಪುಟ ಸಭೆಯಲ್ಲ ನಾವು ಕೈಗೊಂಡ ನಿರ್ಣಯವನ್ನು ರಾಜ್ಯಪಾಲರು ಸ್ವೀಕರಿಸಿಲ್ಲ. ರಾಜಭವನವನ್ನು ದುರಪಯೋಗ ಮಾಡಿ ನಿರ್ಧಾರ ಹೊರಡಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದರು.
ರಾಜ್ಯಪಾಲರ ನಡೆ ವಿರುದ್ಧ ರಾಜ್ಯದಾದ್ಯಂತ ನಾಳೆ ಕಾಂಗ್ರೆಸ್ ಪ್ರತಿಭಟನೆ: ಡಿಸಿಎಂ ಡಿ.ಕೆ. ಶಿವಕುಮಾರ್
“ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲ ನಡೆಯ ವಿರುದ್ಧ ಸೋಮವಾರ (ಆ. 19) ರಾಜ್ಯ ವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ರಾಷ್ಟ್ರಪತಿಗಳಿಗೆ ಪ್ರತಿಭಟನೆಯನ್ನು ದಾಖಲಿಸಲಿದ್ದಾರೆ” ಎಂದರು.
“ಪ್ರಕರಣ ಅಲ್ಲದಿದ್ದರೂ ಸಹ ಇದನ್ನು ಬೇಕಂತಲೇ ಎತ್ತಿ ಕಟ್ಟಲಾಗುತ್ತಿದೆ. ರಾಜ್ಯಪಾಲರಿಂದ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ. ಇದರ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಎಂದು ಮುಖಂಡರಿಗೆ ತಿಳಿಸಿದ್ದೇವೆ. ಕಿಡಿಗೇಡಿಗಳು ಒಳನುಸುಳಿ ಗಲಭೆ ಎಬ್ಬಿಸಿ ಕಲ್ಲು ಎಸೆಯುವ ಕೆಲಸ ಮಾಡಬಹುದು ಇದರ ಬಗ್ಗೆಯೂ ಎಚ್ಚರದಿಂದ ಇರಿ ಎಂದು ಸೂಚನೆ ನೀಡಿದ್ದೇವೆ. ನಮ್ಮದು ಗಾಂಧಿ ಮಾರ್ಗದ ಶಾಂತಿಯುತ ಪ್ರತಿಭಟನೆ” ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರ ಭೇಟಿಯ ಬಗ್ಗೆ ಪ್ರಶ್ನಿಸಿದಾಗ “ಪ್ರಸ್ತುತ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳು ಹಾಗೂ ಸಂದರ್ಭದ ಬಗ್ಗೆ ಅವರಿಗೆ ವಿವರಣೆ ನೀಡಿದ್ದೇವೆ” ಎಂದು ತಿಳಿಸಿದರು.
ರಾಷ್ಟ್ರ ವ್ಯಾಪಿ ಪ್ರತಿಭಟನೆ ನಡೆಸುವ ಬಗ್ಗೆ ಕೇಳಿದಾಗ “ಇದರ ಬಗ್ಗೆ ಗೊತ್ತಿಲ್ಲ, ಇದನ್ನು ಎಐಸಿಸಿ ನಿರ್ಧಾರ ಮಾಡುತ್ತದೆ” ಎಂದರು.
ತುಂಗಭದ್ರಾ ಗೇಟ್ ಅಳವಡಿಕೆಯ ಬಗ್ಗೆ ಕೇಳಿದಾಗ “ಗೇಟ್ ಅಳವಡಿಕೆ ಯಶಸ್ವಿಯಾಗಿ ನೆರವೇರಿದೆ. ಅವಘಡ ಸಂಭವಿಸಿದಾಗ ಕಾರಜೋಳ, ಬೊಮ್ಮಾಯಿ, ವಿಜಯೇಂದ್ರ, ಅಶೋಕ್ ಹಾಗೂ ಕುಮಾರಸ್ವಾಮಿ ಸೇರಿದಂತೆ ಅನೇಕರು ಟೀಕೆಗಳನ್ನು ಮಾಡಿದ್ದರು. ಅವರ ಟೀಕೆಗಳು ಸತ್ತು ಹೋದವು, ಆದರೆ ನಮ್ಮ ಕೆಲಸ ಮಾತ್ರ ಉಳಿಯಿತು. ಅದಕ್ಕೆ ನಾನು ಯಾವಾಗಲು ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಹೇಳುತ್ತಿರುತ್ತೇನೆ. ಅಣೆಕಟ್ಟಿನ ಗೇಟ್ ದುರಸ್ತಿ ಮಾಡುವಲ್ಲಿ ಶ್ರಮಿಸಿದ ಎಲ್ಲರಿಗೂ ಸರ್ಕಾರ ಗೌರವ ಸಲ್ಲಿಸಲಿದೆ” ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ