Kannada NewsKarnataka NewsLatest

ಒಗ್ಗಟ್ಟಾಗಿ ಚುನಾವಣೆ ಎದುರಿಸಿದಲ್ಲಿ ಕಾಂಗ್ರೆಸ್ ಜಯಭೇರಿ

 ಸವದತ್ತಿಯಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಸವದತ್ತಿ: ಬರಲಿರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕು. ತನ್ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ಸವದತ್ತಿಯಲ್ಲಿ ಭಾನುವಾರ ನಡೆದ ಗ್ರಾಮ ಪಂಚಾಯಿತಿ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷರೂ ಶಾಸಕರೂ ಆಗಿರುವ ಸತೀಶ ಜಾರಕಿಹೊಳಿ ಮತ್ತು ಕೆಪಿಸಿಸಿ ವಕ್ತಾರರೂ, ಶಾಸಕರೂ ಆಗಿರುವ ಲಕ್ಷ್ಮಿ ಹೆಬ್ಬಾಳಕರ್ ನೇತೃತ್ವದಲ್ಲಿ ಸ್ಥಳೀಯ ವಡಿಯರ ಕಲ್ಯಾಣ ಮಂಟಪದಲ್ಲಿ ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದ ಗ್ರಾಮ ಪಂಚಾಯಿತಿ ಚುನಾವಣೆ ಅಂಗವಾಗಿ ಪೂರ್ವಭಾವಿ ಸಭೆ ನಡೆಯಿತು.

ಈಗ ನಡೆಯುತ್ತಿರುವ ಗ್ರಾಂ.ಪಂ ಚುನಾವಣೆಯು ಮುಂದಿನ ೨೦೨೩ರ ವಿಧಾನಸಭೆ ಚುನಾವಣೆ ಹಾಗೂ ೨೦೨೪ರ ಲೋಕಸಭಾ ಚುನಾವಣೆಯ ಬುನಾದಿಯಾಗಿದ್ದು, ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿ ಚುನಾವಣೆ ಎದುರಿಸಿದರೆ ಕಾಂಗ್ರೆಸ್ ಜಯಭೇರಿ ಭಾರಿಸುವುದರಲ್ಲಿ ಸಂಶಯವಿಲ್ಲ ಎಂದು ಜಾರಕಿಹೊಳಿ ಮತ್ತು ಹೆಬ್ಬಾಳಕರ್ ಹೇಳಿದರು.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಘಟನಾತ್ಮಕವಾಗಿ ಗ್ರಾಂ.ಪಂ ಚುನಾವಣೆಯನ್ನು ಎದುರಿಸಬೇಕಿದೆ. ಬೆಳಗಾವಿ ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದು, ಸಾಕಷ್ಟು ಮತದಾರರಿದ್ದಾರೆ. ಒಗ್ಗಟ್ಟನ್ನು ಪ್ರದರ್ಶಿಸಿದರೆ ನಮಗೆ ಗೆಲುವು ಖಚಿತವಾಗಿದೆ ಎಂದು ಇಬ್ಬರೂ ನಾಯಕರು ಹೇಳಿದರು.

ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದಲ್ಲಿ ೮೦ ಸಾವಿರಕ್ಕೂ ಅಧಿಕ ಕಾಂಗ್ರೆಸ್ ಮತದಾರರಿದ್ದು, ಒಗ್ಗಟ್ಟಿನ ಬಲ ಇಲ್ಲದೆ ಇರುವುದರಿಂದ ೧೫ ವರ್ಷದಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲದಾಗಿರುವುದು ವಿಷಾದದ ಸಂಗತಿಯಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಬಿಜೆಪಿ ಸರಕಾರವು ಭ್ರಷ್ಟಾಚಾರದಲ್ಲಿ ನಂ.೧ ಸ್ಥಾನವನ್ನು ಪಡೆದುಕೊಂಡಿದ್ದು, ಜನರನ್ನು ದಿಕ್ಕು ತಪಿಸುವಂತ ಕೆಲಸ ಮಾಡುತ್ತಿದೆ. ಗೋಹತ್ಯೆ ನಿಷೇಧ ಕಾಯ್ದೆ ಬಿಜೆಪಿಯವರು ಮಾಡಿದ್ದಲ್ಲ. ಇದನ್ನು ಜವಾಹರಲಾಲ ನೆಹರುರವರು ೧೯೫೨ರಲ್ಲಿಯೇ ಜಾರಿಗೆ ತಂದಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಹೇಳುವ ಬಿಜೆಪಿ ಸರಕಾರವು ಪ್ರತಿನಿತ್ಯ ಮಾಂಸವನ್ನು ರಪ್ತು ಮಾಡುತ್ತಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ನಮ್ಮ ನಮ್ಮಲ್ಲಿ ನಾವು ಕಚ್ಚಾಡುವದನ್ನು ಮೊದಲು ಬಿಡಬೇಕಿದ್ದು, ಸವದತ್ತಿ ಯಲ್ಲಮ್ಮಾ ಮತ ಕ್ಷೇತ್ರದಲ್ಲಿ ಕಚ್ಚಾಟ ನಿಲ್ಲದೆ ಹೋದಲ್ಲಿ ಇಲ್ಲಿ ಹೊಸ ಪ್ರಯೋಗ ಮಾಡಬೇಕಾಗುವುದು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.

ಬರುವಂತ ಗ್ರಾ.ಪಂ ಚುನಾವಣೆಯ ಕುರಿತು ಪ್ರತಿಯೊಬ್ಬರಿಗೂ ಅದರ ಪರಿಕಲ್ಪನೆ ಇರಬೇಕಿದೆ. ನಮ್ಮ ಗ್ರಾಮ, ನಮ್ಮ ಶಕ್ತಿ ಎಂಬ ಧ್ಯೇಯದೊಂದಿಗೆ ಜನರನ್ನು ಸೆಳೆಯುವ ಪ್ರಯತ್ನ ಮಾಡಬೇಕಿದೆ. ದೇಶದ ಪ್ರತಿಯೊಂದು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ ನರೇಗಾ ಯೋಜನೆ ಶಕ್ತಿಯನ್ನು ತಂದಿದ್ದು, ಬಡಜನರ ಬದುಕಿಗೆ ದಾರಿದೀಪವಾಗಿದೆ ಎಂದು ಹೆಬ್ಬಾಳಕರ್ ಹೇಳಿದರು.

ದೇಶಕ್ಕೆ ಅಚ್ಚೇ ದಿನ್ ತರ್ತೀವಿ ಎಂದು ಸುಳ್ಳು ಭರವಸೆಗಳ ಮೂಲಕ ಜನರ ದಾರಿ ತಪ್ಪಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರಗಳು ದೇಶಾದ್ಯಂತ ನಿರುದ್ಯೋಗ ಸಮಸ್ಯೆಗಳನ್ನು ಹೆಚ್ಚಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದರಲ್ಲಿ ತಲ್ಲೀನವಾಗಿವೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರಗಳ ಸಾಧನೆ ಅಕ್ಷರಶಃ ಶೂನ್ಯ. ಮುಗ್ದ ಜನರನ್ನು ದಾರಿ ತಪ್ಪಿಸಿ ಅಧಿಕಾರಕ್ಕೇರಿವೆ. ಜನರು ಬೀದಿಗೆ ಬಿದ್ದಿದ್ದಾರೆ. ಇನ್ನಾದರೂ ಇವರು ಜನರ ಕಡೆಗೆ ಗಮನ ಹರಿಸಲಿ. ಇಂತಹ ಸರಕಾರಗಳು ಇರುವುದಕ್ಕಿಂತ ತೊಲಗುವುದೇ ಲೇಸು ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸತೀಶ ಮೆಹರವಾಡೆ ಮಾತನಾಡಿ, ಗ್ರಾ.ಪಂ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ಮುಖಂಡರು ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಲಿದ್ದು, ಯೋಗ್ಯ ಅಭ್ಯರ್ಥಿಗಳನ್ನು ಸೂಚಿಸುವಲ್ಲಿ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಮುಂದಿನ ರಾಜಕೀಯ ಭವಿಷ್ಯಕ್ಕೆ ಗ್ರಾ.ಪಂ ಚುನಾವಣೆ ಭದ್ರಬುನಾದಿಯಾಗಲಿದೆ ಎಂದರು.
ವಿಶ್ವಾಸ ವೈದ್ಯ ಮಾತನಾಡಿ ಪಕ್ಷ ಸಂಘಟನೆಯಲ್ಲಿ ಪ್ರಾಮಾಣಿಕತೆಯಿಂದ ನಾವು ಕಾರ್ಯನಿರ್ವಹಿಸಬೇಕಿದ್ದು, ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿರುವ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಅವಕಾಶ ನೀಡಬೇಕಿದೆ ಎಂದರು.
ಡಿ.ಡಿಟೋಪೋಜಿ, ಪಂಚನಗೌಡ ದ್ಯಾಮನಗೌಡರ, ಉಮೇಶ ಬಾಳಿ, ಫಕ್ಕೀರಪ್ಪ ಹದ್ದನ್ನವರ ಮಾತನಾಡಿದರು.
ಮಾಜಿ ಶಾಸಕ ಆರ್.ವಿ.ಪಾಟೀಲ, ಸದಾಶಿವ ಕೌಜಲಗಿ, ರವೀಂದ್ರ ಯಲಿಗಾರ, ಸೌರವ ಚೋಪ್ರಾ, ಜಿ.ಜಿ.ಕಣವಿ, ಮಹಾರಾಜಗೌಡ ಪಾಟೀಲ, ಪಂಚಪ್ಪ ಮಲ್ಲಾಡ, ಎಮ್.ಬಿ.ಸವದತ್ತಿ, ಚನ್ನರಾಜ ಹಟ್ಟಿಹೊಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲು ಜಕಾತಿ, ಎಮ್.ಎಸ್.ಹಿರೇಕುಂಬಿ, ಬಸವರಾಜ ಬಸಲಿಗುಂದಿ ಉಪಸ್ಥಿತರಿದ್ದರು. ಹುಸೇನ ನದಾಫ ನಿರೂಪಿಸಿ ವಂದಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button