ಆಸ್ಪತ್ರೆ ನಿರ್ಮಾಣಕ್ಕೆ ಸರಕಾರದಿಂದ ವಿಳಂಬ, ಸ್ವತಃ 50 ಲಕ್ಷ ರೂ ಬಳಸುತ್ತಿರುವ ಬಾಲಚಂದ್ರ ಜಾರಕಿಹೊಳಿ

ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕರ ಭೇಟಿ
ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ಹಾಗೂ ಕಟ್ಟಡಕ್ಕೆ ಅನುದಾನ ಬರುವುದು ವಿಳಂಬವಾಗುತ್ತಿರುವುದರಿಂದ ಸ್ವತಃ ನಾನೇ ಈ ಆಸ್ಪತ್ರೆ ವೆಚ್ಚವನ್ನು ಭರಿಸುತ್ತೇನೆ
ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ಯಾದವಾಡ ಹಾಗೂ ಸುತ್ತಲಿನ ಗ್ರಾಮಗಳ ರೋಗಿಗಳ ಅನುಕೂಲಕ್ಕೋಸ್ಕರ ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಕಾಮಗಾರಿಯನ್ನು ಒಂದು ವಾರದೊಳಗೆ ಆರಂಭಿಸಲಾಗುವುದು. ಇದಕ್ಕಾಗಿ ೫೦ ಲಕ್ಷ ರೂ.ಗಳನ್ನು ನೀಡುವುದಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ತಾಲೂಕಿನ ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಿವಾರದಂದು ಭೇಟಿ ನೀಡಿ ಆಸ್ಪತ್ರೆಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ಹಾಗೂ ಕಟ್ಟಡಕ್ಕೆ ಅನುದಾನ ಬರುವುದು ವಿಳಂಬವಾಗುತ್ತಿರುವುದರಿಂದ ಸ್ವತಃ ತಾವೇ ಈ ಆಸ್ಪತ್ರೆಗೆ ವೆಚ್ಚವನ್ನು ಭರಿಸುತ್ತಿರುವುದಾಗಿ ಅವರು ಹೇಳಿದರು.
ಈಗಾಗಲೇ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವು ಶಿಥಿಲಾವಸ್ಥೆಯಲ್ಲಿರುವುದರಿಂದ ರೋಗಿಗಳ ಚಿಕಿತ್ಸೆಗೆ ಅಡಚಣೆಯಾಗುತ್ತಿದೆ. ಆದ್ದರಿಂದ ೪ ಎಕರೆ ನಿವೇಶನದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಲಾಗುವುದು. ವಾರದೊಳಗೆ ಕಟ್ಟಡದ ಕಾಮಗಾರಿಯನ್ನು ಆರಂಭಿಸಿ ಈ ಭಾಗದ ರೋಗಿಗಳಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಅವರು ಹೇಳಿದರು.
ಯಾದವಾಡದಲ್ಲಿ ನಿರ್ಮಾಣವಾಗಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡಕ್ಕೆ ನಾನು ೨೫ ಲಕ್ಷ ಮತ್ತು ಡಾಲ್ಮಿಯಾ ಸಿಮೆಂಟ್ ಕಾರ್ಖಾನೆಯವರು ೨೫ ಲಕ್ಷ ರೂ. ಗಳನ್ನು ನೀಡುತ್ತಿದ್ದೇವೆ ಎಂದು ಹೇಳಿದರು.
ಕೋವಿಡ್ ೧ ಮತ್ತು ೨ ನೇ ಅಲೆಯಿಂದ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಅಷ್ಟೊಂದು ಘೋರ ಪ್ರಮಾಣದಲ್ಲಿ ನಮ್ಮ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈಗಾಗಲೇ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಮತ್ತೇ ೩ನೇ ಅಲೆ ಅಪ್ಪಳಿಸಬಹುದೆಂದು ತಜ್ಞರು ಹೇಳುತ್ತಿದ್ದಾರೆ. ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲಿಕ್ಕೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳು ಸಹ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದಾರೆ. ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವಂತೆ ಅವರು ಹೇಳಿದರು.
ಶಿಥಿಲಾವಸ್ಥೆಯಲ್ಲಿರುವ ಆಸ್ಪತ್ರೆಗಳನ್ನು ಸುಧಾರಿಸುವ ಕಾರ್ಯವನ್ನು ಈಗಾಗಲೇ ಮಾಡಲಾಗುತ್ತಿದೆ. ಇದರಿಂದ ಬಡ ರೋಗಿಗಳ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳು ವರದಾನವಾಗಲಿವೆ. ಕೋವಿಡ್ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಬಿಲ್ಲನ್ನು ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೋವಿಡ್ ಸೊಂಕಿತರಿಗೆ ಉಚಿತವಾಗಿ ಚಿಕಿತ್ಸೆ ಸಿಗಲು ಸರ್ಕಾರಿ ಆಸ್ಪತ್ರೆಗಳನ್ನೇ ಬಳಸಲಾಗುತ್ತಿದೆ. ಸೊಂಕಿತರಿಗೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಿ ಕೊಟ್ಟು ಆಮ್ಲಜನಕ ಸಹಿತ ಎಲ್ಲ ಔಷಧೋಪಕರಣಗಳನ್ನು ಈಗಾಗಲೇ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಯಾದವಾಡ ಗ್ರಾಪಂ ಅಧ್ಯಕ್ಷೆ ಜಯಶ್ರೀ ದಾಸರ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಮುಖಂಡ ಈಶ್ವರ ಕತ್ತಿ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಶಂಕರ ಬೆಳಗಲಿ, ಬಿ.ಎಚ್. ಪಾಟೀಲ, ಸದಾಶಿವ ದುರಗನ್ನವರ, ಹನಮಂತ ಹುಚರಡ್ಡಿ, ಸುರೇಶ ಸಾವಳಗಿ, ಯಲ್ಲಪ್ಪ ನ್ಯಾಮಗೌಡರ, ರಾಜುಗೌಡ ಪಾಟೀಲ, ಮಲ್ಲಪ್ಪ ಚಕ್ಕೆನ್ನವರ, ಬಸು ಭೂತಾಳಿ, ಬಸು ಕೇರಿ, ಬಸು ಹಿಡಕಲ್, ಶ್ರೀಶೈಲ ಢವಳೇಶ್ವರ, ಬೀರಪ್ಪ ಮುಗಳಖೋಡ, ಬಸು ಮಾಳೇದ, ಗೌಡಪ್ಪ ಗುರಡ್ಡಿ, ಧರೆಪ್ಪ ಮುಧೋಳ, ಮಾರುತಿ ಹರಿಜನ, ಕಲ್ಲಪ್ಪ ಗಾಣಿಗೇರ, ನಿವೃತ್ತ ತಾಲೂಕ ಆರೋಗ್ಯಾಧಿಕಾರಿ ಡಾ. ಆರ್.ಎಸ್. ಬೆಣಚಿನಮರಡಿ, ಗೋಕಾಕ ಟಿಎಚ್‌ಓ ಡಾ. ಎಂ.ಎಸ್. ಕೊಪ್ಪದ, ಪಿಎಚ್‌ಸಿ ವೈದ್ಯಾಧಿಕಾರಿ ಡಾ. ಸಾಗರ ಕಾದ್ರೋಳಿ, ಮೂಡಲಗಿ ಬಿಇಓ ಅಜೀತ ಮನ್ನಿಕೇರಿ, ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಕ್ಷ ಕವಚ ವಾಹನ (ಅಂಬ್ಯುಲೆನ್ಸ್) ವನ್ನು ಹಸ್ತಾಂತರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ