*ಅರಣ್ಯ ಪ್ರದೇಶದಲ್ಲಿ ಸತತಧಾರೆ: ಹಲವು ಸೇತುವೆಗಳು ಜಲಾವೃತ: 12 ಮನೆಗಳಿಗೆ ಹಾನಿ* *ಖಾನಾಪುರ ಪಟ್ಟಣದ ಇಸ್ಕಾನ್ ದೇವಾಲಯದ ಆವರಣಕ್ಕೆ ನುಗ್ಗಿದ ಮಲಪ್ರಭಾ ನದಿಯ ನೀರು*
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಶನಿವಾರ ತಾಲೂಕಿನ ಕಣಕುಂಬಿಯಲ್ಲಿ ೨೦.೭ ಸೆಂ.ಮೀ, ಖಾನಾಪುರ ಪಟ್ಟಣದಲ್ಲಿ ೭.೩ ಸೆಂ.ಮೀ, ಲೋಂಡಾದಲಿ ೧೨ ಸೆಂ.ಮೀ, ನಾಗರಗಾಳಿಯಲ್ಲಿ ೬.೫ ಸೆಂ.ಮೀ, ಜಾಂಬೋಟಿಯಲ್ಲಿ ೧೧.೪ ಸೆಂ.ಮೀ, ಅಸೋಗಾದಲ್ಲಿ ೮.೫ ಸೆಂ.ಮೀ, ಬೀಡಿಯಲ್ಲಿ ೪.೫ ಸೆಂ.ಮೀ, ಕಕ್ಕೇರಿಯಲ್ಲಿ ೨.೫ ಸೆಂ.ಮೀ, ಗುಂಜಿಯಲ್ಲಿ ೬ ಸೆಂ.ಮೀ ಪ್ರಮಾಣದಲ್ಲಿ ಮಳೆಯಾಗಿದೆ.
ತಾಲೂಕಿನ ನೇರಸಾ-ಗವ್ವಾಳಿ, ಹೆಮ್ಮಡಗಾ-ತಳೇವಾಡಿ, ಚಿಕಲೆ-ಅಮಗಾಂವ, ಮೋದೆಕೊಪ್ಪ-ತೀರ್ಥಕುಂಡೆ, ಹಬ್ಬನಹಟ್ಟಿ-ದೇವಾಚಿಹಟ್ಟಿ, ಅಮಟೆ-ತೋರಾಳಿ, ತಿವೋಲಿ-ಶಿರೋಲಿ, ಅಮಟೆ-ಕಾಲಮನಿ, ಮಳವ-ನೀಲಾವಡೆ, ಕಬನಾಳಿ-ಮುಗುಡ, ಹೆಮ್ಮಡಗಾ-ದೇಗಾಂವ, ಚಿಕ್ಕಹಟ್ಟಿಹೊಳಿ-ಚಿಕ್ಕಮುನವಳ್ಳಿ, ಯಡೋಗಾ-ಚಾಪಗಾಂವ, ಮಾಚಾಳಿ-ಲೋಂಡಾ ಗ್ರಾಮಗಳ ನಡುವಿನ ಸಂಪರ್ಕ ಸೇತುವೆಗಳು ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ಗಳ ಮೇಲೆ ಹಲವು ಅಡಿಗಳಷ್ಟು ನೀರು ಹರಿಯುತ್ತಿದೆ. ಪರಿಣಾಮ ಈ ಮಾರ್ಗಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸಿಂಧನೂರು-ಹೆಮ್ಮಡಗಾ ಹೆದ್ದಾರಿಯ ಅಲಾತ್ರಿ ಹಳ್ಳದ ಸೇತುವೆಯ ಮೇಲೆ ನೀರಿನ ಹರಿವು ಕ್ಷೀಣಿಸಿದ್ದರಿಂದ ಶನಿವಾರ ಮುಂಜಾನೆಯಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಆರಂಭವಾಗಿದೆ.
ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಶನಿವಾರ ಮುಂಜಾನೆ ಪಟ್ಟಣದ ಹೊರವಲಯದ ಮಲಪ್ರಭಾ ನದಿತೀರದ ಇಸ್ಕಾನ್ ದೇವಾಲಯದ ಅಂಗಳಕ್ಕೆ ನದಿನೀರು ನುಗ್ಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದೇವಾಲಯದ ವಿಗ್ರಹಗಳು ಮತ್ತು ಪೂಜಾ ಪರಿಕರಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ತಾಲೂಕಿನ ಅರಣ್ಯ ಪ್ರದೇಶದಾದ್ಯಂತ ಶನಿವಾರ ವರುಣನ ಆರ್ಭಟ ಮುಂದುವರೆದಿದೆ.
ನಾಗರಗಾಳಿ, ಶಿರೋಲಿ, ಕಣಕುಂಬಿ, ಜಾಂಬೋಟಿ, ಭೀಮಗಡ, ಲೋಂಡಾ ಮತ್ತು ಗುಂಜಿ ಅರಣ್ಯ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವು ಸೇತುವೆಗಳು ಜಲಾವೃತಗೊಂಡಿವೆ. ಕಳೆದ ಮೂರು ದಿನಗಳ ಅವಧಿಯಲ್ಲಿ ಮಳೆಯಿಂದ ತಾಲೂಕಿನ ವಿವಿಧೆಡೆ ಒಟ್ಟು ೧೨ ಮನೆಗಳಿಗೆ ಹಾನಿ ಉಂಟಾಗಿದೆ. ಹಲವೆಡೆ ರಸ್ತೆಗಳ ಮೇಲೆ ಮರಗಿಡಗಳು ಉರುಳಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ವಿದ್ಯುತ್ ಮಾರ್ಗಗಳ ಮೇಲೆ ಮರಗಳು ಬಿದ್ದಿದ್ದರಿಂದ ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ ಎಂದು ತಾಲೂಕು ಆಡಳಿತದ ಮೂಲಗಳು ತಿಳಿಸಿವೆ.
ಲೋಂಡಾ-ವರ್ಕಡ ಮತ್ತು ಸಾತನಾಳಿ-ಮಾಚಾಳಿ ಮಾರ್ಗಮಧ್ಯದ ಹಳ್ಳಗಳ ಸೇತುವೆಗಳ ಮೇಲೆ ನೀರಿನ ಹರಿವು ಮುಂದುವರೆದಿದೆ. ಭೀಮಗಡ ಅಭಯಾರಣ್ಯದ ಅಮಗಾಂವ, ದೇಗಾಂವ, ಗವ್ವಾಳಿ, ಕೊಂಗಳಾ ಮತ್ತು ಮೆಂಡಿಲ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲವೃತಗೊಂಡ ಪರಿಣಾಮ ಈ ಗ್ರಾಮಗಳು ಮುಖ್ಯ ವಾಹಿನಿಯಿಂದ ಸಂಪರ್ಕ ಕಳೆದುಕೊಂಡಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ