*ಕ್ಷಯರೋಗ ಮುಕ್ತ ಅಭಿಯಾನ ಯಶಸ್ವಿಗೆ ನಿರಂತರ ತಪಾಸಣೆ ಅಗತ್ಯ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನವಂಬರ್ 24 ರಿಂದ ಡಿಸೆಂಬರ್ 9 ರವರೆಗೆ ನಡೆಯಲಿರುವ ಕ್ಷಯರೋಗ ಪತ್ತೆಹಚ್ಚುವ ಅಭಿಯಾನ ಯಶಸ್ವಿಗೊಳಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಭೇಟಿ ನೀಡಿ ನಿರಂತರ ಪರೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ನ.14) ನಡೆದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ: ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಯಬಾಗ ತಾಲೂಕಿನಲ್ಲಿ ಕ್ಷಯರೋಗ ಮುಕ್ತ ಅಭಿಯಾನ ಪರಿಣಾಮಕಾರಿ ಜಾರಿಯಾಗುವಂತೆ ಸಮೀಕ್ಷೆ ಕೈಗೊಳ್ಳಬೇಕು. ತಾಲೂಕಿನ ಪ್ರತಿ ಭಾಗದಲ್ಲಿ ಹೋಗಿ ಹೆಚ್ಚಿನ ಪರೀಕ್ಷೆಗಳನ್ನು ಕೈಗೊಂಡು ವರದಿ ಸಿದ್ದಪಡಿಸಬೇಕು. ಪರೀಕ್ಷೆ ವೇಳೆಯಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಲ್ಲಿ ಅಂತಹ ಪ್ರದೇಶಗಳಲ್ಲಿ ಹಾಟ್ ಸ್ಪಾಟ್ ವಲಯ ಎಂದು ಗುರುತಿಸಿ ಅಗತ್ಯ ಚಿಕಿತ್ಸೆಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರ ಮೂಲಕ ಸವದತ್ತಿ, ರಾಯಬಾಗ, ಹುಕ್ಕೇರಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು ಒಂದು ವೇಳೆ ಟಿಬಿ ಪಾಸಿಟಿವ್ ಕಂಡು ಬಂದಲ್ಲಿ ಅಂತವರಿಗೆ ತ್ವರಿತವಾಗಿ ಚಿಕಿತ್ಸೆ ಒದಗಿಸಬೇಕು
ಅದೇ ರೀತಿಯಲ್ಲಿ ಅಗತ್ಯ ಸ್ಥಳಗಳಲ್ಲಿ ಸ್ಥಳೀಯವಾಗಿ ಕ್ಯಾಂಪ್ ಹಮ್ಮಿಕೊಂಡು ವೈದ್ಯಕೀಯ ಸಿಬ್ಬಂದಿಗಳು ನೇಮಿಸಬೇಕು. ಇದಕ್ಕೆ ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್.ಎಚ್.ಎಂ) ಲೆಕ್ಕಾಧಿಕಾರಿಗಳು ಕ್ಯಾಂಪ್ ಹಮ್ಮಿಕೊಳ್ಳಲು ಅನುದಾನ ಬಿಡುಗಡೆಗೆ ಕ್ರಮ ವಹಿಸುವಂತೆ ವರದಿ ಸಿದ್ಧಪಡಿಬೇಕು ಎಂದು ಮೊಹಮ್ಮದ್ ರೋಷನ್ ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಬಿ ಬಸರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಗಡಾದಿ, ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ನಾಯಕ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.



