ಜಿಲ್ಲಾಧಿಕಾರಿಗಳಿಂದ ೨೪೭ ನಿರಂತರ ನೀರು ಸರಬರಾಜು ಯೋಜನೆಯ ಪ್ರಗತಿ ಪರಿಶೀಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದಲ್ಲಿ ಅನುಷ್ಠಾನವಾಗುತ್ತಿರುವ ೨೪೭ ನಿರಂತರ ನೀರು ಸರಬರಾಜು ಯೋಜನೆಯ ಪ್ರಗತಿ ಪರಿಶೀಲನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ಮೊಹಮ್ಮದ ರೋಷನ್ ಯೋಜನಾ ಅನುಷ್ಠಾನ ಘಟಕದ ಕಛೇರಿಯಲ್ಲಿ ನಡೆಸಿದರು.
ಮುಖ್ಯವಾಗಿ ಮಳೆಗಾಲದ ಸಮಯದಲ್ಲಿ ಮಣ್ಣು ಮಿಶ್ರಿತ ನೀರು ಸರಬರಾಜುವಾಗದಂತೆ ಕ್ರಮತೆಗೆದುಕೊಳ್ಳುವಂತೆ ಸೂಚಿಸಿದರು. ಅಲ್ಲದೇ ನೀರು ಶುದ್ಧೀಕರಣ ಘಟಕಗಳಲ್ಲಿ ಹಾಗೂ ಜಲಸಂಗ್ರಹಾಗಾರಗಳಲ್ಲಿ ಸ್ವಚ್ಛತೆ ಕಾಪಾಡಲು ಸೂಚಿಸಿದರು. ಕಲುಷಿತ ನೀರಿನಿಂದಲೇ ಅನಾರೋಗ್ಯವುಂಟಾಗುವುದರಿಂದ ಸಾರ್ವಜನಿಕರ ಆರೋಗ್ಯ ಕಾಪಾಡಲು ಶುದ್ಧವಾದ ನೀರು ನಗರಕ್ಕೆ ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹಾಗೂ ಬೆಳಗಾವಿ ನಗರದಲ್ಲಿ ವಿಶ್ವ ಬ್ಯಾಂಕ್ ನೆರವಿನ ಯೋಜನೆಯ ಕೆಲಸವು ಯಾವ ರೀತಿ ನಡೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆದು ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸಲಹೆ ಸೂಚನೆಗಳನ್ನು ನೀಡಿದರು. ಪ್ರಗತಿಯಲ್ಲಿರುವ ನೀರು ಸರಬರಾಜು ವ್ಯವಸ್ಥೆಯ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಹಾಗೂ ಯೋಜಿತ ನೀರು ಶುದ್ಧೀಕರಣ ಘಟಕವನ್ನು ಡಿಸೆಂಬರ್-೨೦೨೪ರೊಳಗಾಗಿ ಪೂರ್ಣಗೊಳಿಸಲು ಆದೇಶಿಸಿದರು.
ಈ ಸಂದರ್ಭದಲ್ಲಿ ಕೆಯುಐಡಿಎಫ್‌ಸಿಯ ಅಧೀಕ್ಷಕ ಅಭಿಯಂತರರಾದ ಲಕ್ಷ್ಮಿ ಸುಳಗೇಕರ್, ಕಾರ್ಯನಿರ್ವಾಹಕ ಅಭಿಯಂತರುಗಳಾದ ಅಶೋಕ ಬುರಕುಲೆ, ವಿ.ಎಂ.ಸಾಲಿಮಠ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರುಗಳಾದ ಶಶಿಕುಮಾರ ಹತ್ತಿ, ವಿಜಯಾನಂದ ಸೋಲ್ಲಾಪೂರ, ಉಮೇಶ ನಿಟ್ಟೂರಕರ, ಬಸವರಾಜ ಬೇವಿನಕಟ್ಟಿ, ಎಲ್ &ಟಿಯ ಯೋಜನಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ, ಸ್ಮೆಕ್ ಕನ್ಸಲ್ಟೆನ್ಸಿಯ ತಂಡದ ನಾಯಕರು ಮತ್ತು ಸಿಬ್ಬಂದಿ, ಯೋಜನಾ ಅನುಷ್ಠಾನ ಘಟಕದ ಸಿಬ್ಬಂದಿ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ