ಗುತ್ತಿಗೆದಾರರು ಬೇರೆ ನಾಯಕರ ಭೇಟಿ ಮಾಡುವುದನ್ನು ತಡೆಯಲಾಗದು: ಡಿಸಿಎಂ ಡಿ.ಕೆ. ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: “ಗುತ್ತಿಗೆದಾರರು ಯಾರನ್ನು ಬೇಕಾದರೂ ಭೇಟಿ ಮಾಡಬಹುದು. ಅವರನ್ನು ನಾವು ತಡೆಯಲಾಗದು. ಅವರಿಗೆ ಯಾರು ಸಲಹೆ, ಮಾರ್ಗದರ್ಶನ ಕೊಡಬೇಕೋ ಕೊಡುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳು ಗುತ್ತಿಗೆದಾರರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನ್ಯಾಯ ಕೊಡಿಸಿ ಎಂದು ಕೇಳಿರುವ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಅವರು ಎಲ್ಲೆಲ್ಲಿ ಹೋಗಬೇಕೋ ಹೋಗಲಿ. ಹೋಗುವವರನ್ನು ಯಾರು ತಡೆಯುವುದು ಸಾಧ್ಯವಿಲ್ಲ. ಅವರ ಹೋರಾಟಕ್ಕೆ ಜಯ ಸಿಗಲಿ. ನಾವು ಎಲ್ಲವನ್ನೂ ಗಮನಿಸುತ್ತಿದ್ದೇವೆ. ನಾವು ನ್ಯಾಯ, ನೀತಿಯಿಂದ ಸರ್ಕಾರ ನಡೆಸುತ್ತಿದ್ದೇವೆ, ಮುಂದೆಯೂ ನಡೆಸುತ್ತೇವೆ.” ಎಂದರು.
ದೂರ ಇಟ್ಟಿದ್ದಕ್ಕೆ ಬೇಸರವಿಲ್ಲ:
ವಕೀಲರ ಪರಿಷತ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಿಂದ ತಮ್ಮ ಹೆಸರು ಕೈಬಿಟ್ಟಿರುವ ವಿಚಾರವಾಗಿ ಕೇಳಿದಾಗ, “ವಕೀಲ ಪರಿಷತ್ತಿನ ಕಾರ್ಯಕ್ರಮದಿಂದ ನನ್ನನ್ನು ದೂರ ಇಟ್ಟಿದ್ದಕ್ಕೆ ಯಾವುದೇ ಬೇಸರವಿಲ್ಲ. ಈ ದೇಶದಲ್ಲಿ ಸ್ವಂತ ತೀರ್ಮಾನ ತೆಗದುಕೊಳ್ಳಲು ಎಲ್ಲರೂ ಸ್ವತಂತ್ರರೂ. ಹೀಗಾಗಿ ನನಗೆ ಯಾವುದೇ ಮುಜುಗರವಿಲ್ಲ. ಆದರೆ ಮಾನ್ಯ ಸುರೇಶ್ ಕುಮಾರ್ ಅವರಲ್ಲಿ ಒಂದು ಪ್ರಶ್ನೆ ಕೇಳುತ್ತೇನೆ. ಯಡಿಯೂರಪ್ಪ ಅವರು ಸಹ ನಾನಾ ಕೇಸ್‌ಗಳನ್ನು ಎದುರಿಸುತ್ತಿದ್ದರು. ಅವರು ಮುಖ್ಯಮಂತ್ರಿಗಳಾಗಿದ್ದಾಗ ನ್ಯಾಯಾಂಗದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ನಾನೂ ಅವರ ಜತೆ ಭಾಗವಹಿಸಿದ್ದೇನೆ. ಅವರಿಗೆ ಪ್ರಶ್ನೆ ಮಾಡದ ನೀವು ಈಗೇಕೆ ನನ್ನನ್ನೇ ಗುರಿ ಮಾಡುತ್ತಿದ್ದೀರಿ? ಬೇರೆಯವರು ವೇದಿಕೆ ಏರಿದಾಗ ಪ್ರಶ್ನೆ ಮಾಡದ ಸುರೇಶ್ ಕುಮಾರ್ ಹಾಗೂ ಬಿಜೆಪಿ ಸ್ನೇಹಿತರ ನಾಲಿಗೆಗೆ ಏನಾಗಿತ್ತು? ಆಗ ಏಕೆ ನಾಲಿಗೆ ಬಿಗಿಹಿಡಿದಿದ್ದರು?” ಎಂದು ಪ್ರಶ್ನಿಸಿದರು.
ಶಾಸಕರನ್ನು ವಿದೇಶಿ ಪ್ರವಾಸಕ್ಕೆ ಕಳುಹಿಸಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿಕೆಗೆ ಪ್ರತಿಕ್ರಿಯಿಸಿ, “ಸ್ಪೀಕರ್ ಅವರ ನಿರ್ಧಾರದಲ್ಲಿ ನಾವು ಮೂಗು ತೂರಿಸಲು ಆಗುವುದಿಲ್ಲ, ಅವರದು ಸ್ವತಂತ್ರ ನಿರ್ಧಾರ ತೆಗದುಕೊಳ್ಳುವಂತಹ ಹುದ್ದೆ, ಅದಕ್ಕೆ ನಾನು ಹೇಗೆ ಪ್ರತಿಕ್ರಿಯಿಸಲಿ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ