ರಾಜ್ಯದ ಅಭಿವೃದ್ಧಿಯಲ್ಲಿ ಕೆ.ಎಲ್.ಇ ಸೊಸೈಟಿ ಕೊಡುಗೆ ಅಪಾರ – CM ಬಸವರಾಜ ಬೊಮ್ಮಾಯಿ
*ವಿಧಾನ ಪರಿಷತ್ ಚುನಾವಣೆ: ತಾಲ್ಲೂಕುಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಧಾನ ಪರಿಷತ್ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯ ಪ್ರಚಾರಕ್ಕೆ ಆಗಮಿಸಿದ್ದು, ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರದ ಪಕ್ಷದ ಹಿರಿಯರು, ಶಾಸಕರು, ಸಚಿವರೊಂದಿಗೆ ಒಂದು ಸುತ್ತಿನ ಮಾತುಕತೆಯಾಗಿದೆ. ಕಳೆದ 10 – 12 ದಿನಗಳಿಂದ ಪ್ರಚಾರದಲ್ಲಿ ತೊಡಗಿದ್ದರು. ತಾಲ್ಲೂಕುಗಳ ಸ್ಥಿತಿಗತಿ ಬಗ್ಗೆ ಸಂಪೂರ್ಣ ವಿವರಗಳನ್ನು ಪಡೆದಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಬಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಬಗ್ಗೆಯೂ ಮಾಹಿತಿಯನ್ನು ಪಡೆದಿದ್ದೇನೆ. ಜನರ ಪ್ರತಿಕ್ರಿಯೆ ನೋಡಿದಾಗ ಅರುಣ್ ಶಾಪೂರ್ ಹಾಗೂ ಹನುಮಂತ ನಿರಾಣಿಯವರು 100 ಕ್ಕೆ 100 ಆಯ್ಕೆಯಾಗುವುದು ನಿಶ್ಚಿತ. ಅತಿ ಹೆಚ್ಚು ಮತಗಳಿಂದ ಆಯ್ಕೆಯಾಗುತ್ತಾರೆ.ಈ ಬಾರಿ ಅತಿ ಹೆಚ್ಚು ಮತದಾನವಾಗಲು ಪ್ರಯತ್ನ ವಾಗುತ್ತಿದೆ. ಎಲ್ಲ ವರ್ಗದ ಜನ ಅಭೂತಪೂರ್ವವಾದ ಬೆಂಬಲ ನೀಡಿದ್ದಾರೆ.
ಬೆಳಗಾವಿ, ಬಿಜಾಪುರ ಹಾಗೂ ಬಾಗಲಕೋಟೆಯ ಎಲ್ಲಾ ಪ್ರಮುಖ ಸಂಸ್ಥೆಗಳು ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಶಿಕ್ಷಕರು ಮತ್ತು ಪದವೀಧರರ ಸಂಘಗಳು ಹಾಗೂ ವೈಯಕ್ತಿ ವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಚುನಾವಣೆ ಗೆಲ್ಲಲು ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದ್ದು, ಫಲಿತಾಂಶ ಬಂದ ನಂತರ ತಿಳಿಯಲಿದೆ. ನಮ್ಮ ಪಕ್ಕದಲ್ಲಿ ಯಾವುದೇ ಭಿನ್ನಮತವಿಲ್ಲ.
ಪ್ರಾರಂಭದಲ್ಲಿ ಆತಂಕಗಳಿತ್ತು, ಈಗ ಕಳೆದ ಬಾರಿಗಿಂತ ಹೆಚ್ವಿನ ಮತಗಳಿಂದ ಅರುಣ್ ಶಾಪೂರ್ ಆಯ್ಕೆಯಾಗುವ ವಿಶ್ವಾಸವಿದೆ ಎಂದರು.
*ಗಸ್ತು ಪ್ರಾರಂಭ*
ಅವಹೇಳನಕಾರಿ ಹೇಳಿಕೆ ವಿರುದ್ಧ ಘರ್ಷಣೆಯಾಗದಂತೆ ತಡೆಯಲು ಈಗಾಗಲೇ ರಾಜ್ಯದಲ್ಲಿ ಕ್ರಮ ವಹಿಸಿದೆ. ಕಟ್ಟೆಚ್ಚರ ವಹಿಸಲಾಗಿದೆ ಹಾಗೂ ಗಸ್ತು ಕೂಡ ಪ್ರಾರಂಭವಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಸರ್ವ ರೀತಿಯಲ್ಲಿ ಸನ್ನದ್ದರಾಗಲು ಸೂಚನೆ ನೀಡಲಾಗಿದೆ. ಪರಿಸ್ಥಿತಿ ನಿಯಂತ್ರಣ ದಲ್ಲಿದೆ ಎಂದರು.
*ಮಹದಾಯಿಗೆ ಶೀಘ್ರ ಅನುಮೋದನೆ*
ಮಹದಾಯಿ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಮೇಲೆ ಡಿಪಿಆರ್ ನಲ್ಲಿ ಕೆಲವು ಸ್ಪಷ್ಟೀಕರಣ ಕೇಳಿದ್ದರು. ಅವುಗಳನ್ನು ಒದಗಿಸಲಾಗಿದ್ದು, ಶೀಘ್ರವಾಗಿ ಅನುಮೋದನೆ ದೊರೆಯಿವ ವಿಶ್ವಾಸ ವಿದೆ ಎಂದರು.
*ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕಂಕಣಬದ್ಧ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಾನು ಕಂಕಣಬದ್ಧನಾಗಿದ್ದೇನೆ ಎಂದು ಮುಖ್ಯಮಂತ್ರ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಳಗಾವಿಯ ಕೆ.ಎಲ್.ಇ ಸೊಸೈಟಿಯಲ್ಲಿ ವಾಯುವ್ಯ ಶಿಕ್ಷಕ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.
ಸೂಕ್ತ ಅಭ್ಯರ್ಥಿಗಳನ್ನು ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳಿಸಿದರೆ ಅವರ ಸಲಹೆ ಸೂಚನೆಗಳನ್ನು ಪಡೆದು ಉತ್ತಮವಾದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಆದ್ದರಿಂದ ಮೊದಲನೇ ಪ್ರಾಶಸ್ತ್ಯ ಮತವನ್ನು ಅರುಣ್ ಶಹಪುರ ಹಾಗೂ ಹನುಮಂತರ ನಿರಾಣಿಯವರಿಗೆ ನೀಡಬೇಕು. ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ನಿಮ್ಮನ್ನು ನಾವು ನಿರಾಸೆಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
*ರಾಜ್ಯದ ಅಭಿವೃದ್ಧಿಯಲ್ಲಿ ಕೆ.ಎಲ್.ಇ ಸೊಸೈಟಿ ಕೊಡುಗೆ ಅಪಾರ*
ಕರ್ನಾಟಕದ ಅಭಿವೃದ್ಧಿಯಲ್ಲಿ ಮೈಸೂರು ಮಹಾರಾಜರ ಯೋಜನೆಗಳು ಹಾಗೂ ಉತ್ತರ ಕರ್ನಾಟಕದಲ್ಲಿನ ಶಿಕ್ಷಣ ಸಂಸ್ಥೆಗಳು ಅದರಲ್ಲೂ ಬೆಳಗಾವಿಯ ಕೆ.ಎಲ್.ಇ ಸೊಸೈಟಿಯ ಕೊಡುಗೆ ಅಪಾರವಾದುದು. ಉತ್ತರ ಕರ್ನಾಟಕದಲ್ಲಿ ಕೆಎಲ್‌ಇ ಸಂಸ್ಥೆಯು ಸ್ಥಾಪನೆಗೊಳ್ಳದೇ ಹೋಗಿದ್ದರೆ ಈ ಪ್ರದೇಶ ಶೈಕ್ಷಣಿಕವಾಗಿ ಹಿಂದುಳಿಯುತ್ತಿತ್ತು. ಶೈಕ್ಷಣಿಕ ಹಸಿವು ನೀಗಿಸಿದ ಕೆಎಲ್‌ಇ ಶಿಕ್ಷಕ ಸಪ್ತರ್ಷಿಗಳು ಹಾಗೂ ಅವರ ಮುಂದಣಹೆಜ್ಜೆಯಲ್ಲಿ ಸಂಸ್ಥೆಯನ್ನು ಅಗಾಧವಾಗಿ ವಿಸ್ತರಿಸಿದ ಡಾ.ಪ್ರಭಾಕರ ಕೋರೆಯವರ ಕೊಡುಗೆ ಅನನ್ಯ ಅಸಾದೃಶ್ಯವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು.
ಕೆಎಲ್‌ಇ ಸಂಸ್ಥೆಯು ಶಿಕ್ಷಣದೊಂದಿಗೆ ಆರೋಗ್ಯ ಸೇವೆಗಳನ್ನು ಅಗಾಧವಾಗಿ ಮಾಡಿದೆ. ದೇಶದ ಮುಂಚೂಣಿಯಲ್ಲಿ ಏಕೈಕ ಖಾಸಗಿ ವಲಯದ ಸಂಸ್ಥೆ ಕೆಎಲ್‌ಇ. ಅದರ ಹಿಂದಿನ ಶಕ್ತಿ ಧೀಮಂತ ನಾಯಕ ಡಾ.ಪ್ರಭಾಕರ ಕೋರೆಯವರ ಕೊಡುಗೆ ವಿಸ್ಮರಣೀಯ. ಕೆಎಲ್‌ಇ ಸಂಸ್ಥೆಯೇ ಡಾ.ಕೋರೆಯವರ ಜೀವಾಳ. ಸಂಸ್ಥೆಯ ವಿಕಾಸಕ್ಕಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಜಾಗತಿಕವಾಗಿ ನಾಮಾಂಕಿತ ಸಂಸ್ಥೆಯನ್ನಾಗಿ ಬೆಳೆಸಿದ್ದಾರೆ.
ಯಾವ ಸಮಾಜದಲ್ಲಿ ಶಿಕ್ಷಣವಿರುತ್ತದೆಯೋ ಅದು ಬೆಳೆಯುತ್ತದೆ. ಶಿಕ್ಷಣ ಮತ್ತು ಜ್ಞಾನ ಮಾತ್ರ ಒಂದು ಸಂಸ್ಕಾರ ಭರಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು. ಕೆಎಲ್‍ಇ ಸೊಸೈಟಿಗೆ ಬಹಳ ದೊಡ್ಡ ಇತಿಹಾಸವಿದೆ. ಚುನಾಯಿತ ಅಧ್ಯಕ್ಷರಾಗಿರುವ ಪ್ರಭಾಕರ್ ಕೋರೆ ಅವರ ಸ್ಥಾನ ಅತ್ಯಂತ ಗೌರವಯುತವಾದ ಸ್ಥಾನ. ಪ್ರಭಾಕರ್ ಕೋರೆಯವರ ನೇತೃತ್ವದಲ್ಲಿ ಕೆಎಲ್‍ಇ ಸಂಸ್ಥೆಯ ಅಭಿವೃದ್ದಿಯ ಪಯಣ ಇನ್ನೂ ಮುಂದುವರೆದಿದೆ. 34 ಸಂಸ್ಥೆಗಳಿದ್ದ ಸೊಸೈಟಿ ಮೂರು ದಶಕಗಳಲ್ಲಿ 278 ಸಂಸ್ಥೆಗಳಾಗಿವೆ. ಇದೊಂದು ವಿಶ್ವ ದಾಖಲೆ. ಈ ದೇಶದ ಗಡಿದಾಟಿ ಸಂಸ್ಥೆಗಳನ್ನು ಕಟ್ಟಿದ್ದಾರೆ. ಇದು ಶಿಕ್ಷಣದಲ್ಲಿ ನಾಯಕತ್ವವನ್ನು ತೋರಿಸುತ್ತದೆ. ಪ್ರಭಾಕರ್ ಕೋರೆಯಂತಹವರು ನೂರಾರು ಜನ ಬಂದರೆ ಈ ದೇಶದ ಶೈಕ್ಷಣಿಕ ಚಿತ್ರಣವೇ ಬದಲಾಗುತ್ತದೆ. ವೈಜ್ಞಾನಿಕ ಚಿಂತನೆಯುಳ್ಳ ಸಮಾಜದ ನಿರ್ಮಾಣ ಶೈಕ್ಷಣಿಕ ಸಂಸ್ಥೆಗಳ ಮೇಲೆ ಅವಲಂಬಿತವಾಗಿದೆ. ಮುಂದಿನ ಪೀಳಿಗೆಗೆ ಈ ಸಂಸ್ಥೆ ಹೇಗೆ ಬೆಳೆಯಬೇಕು ಎಂದು ತಿಳಿಯುವ ಸಲುವಾಗಿ ಈ ಬಗ್ಗೆ ವಿದ್ಯಾರ್ಥಿಗಳು ಸಂಶೋಧನೆ ಮಾಡಬೇಕು ಎಂದರು. ಪ್ರಭಾಕರ್ ಕೋರೆಯವರು ಸೊಸೈಟಿಯ ವಿಚಾರದಲ್ಲಿ ಮಾತೃಹೃದಯದ ಅಧ್ಯಕ್ಷರಾಗಿ ಅಧ್ಬುತ ಸೇವೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
*ಶಿಕ್ಷಣಕ್ಕೆ ಆದ್ಯತೆ*
ನನ್ನ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಒಂದೇ ವರ್ಷದಲ್ಲಿ ಏಳು ಸಾವಿರ ಶಾಲಾ ಕೊಠಡಿಗಳನ್ನು ಗ್ರಾಮೀಣ ನಿರ್ಮಿಸಲು ಅನುದಾನವನ್ನು ಬಜೆಟ್‍ನಲ್ಲಿ ಒದಗಿಸಲಾಗಿದೆ. ಇದೇ ವರ್ಷ ಪೂರ್ಣಗೊಳಿಸಲಾಗುವುದು. ಈ ವರ್ಷ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಲು ಅನುಮೋದನೆ ನೀಡಲಾಗಿದೆ. ಮಾದರಿ ಶಾಲೆಗಳನ್ನು ಮತ್ತು ಉನ್ನತ ಶಿಕ್ಷಣಕ್ಕೂ ಮಹತ್ವ ನೀಡಲಾಗಿದೆ. ಆರು ಸಾವಿರ ಶಾಲಾ ಕೊಠಡಿಗಳನ್ನು ಸ್ಮಾರ್ಟ್ ಕ್ಲಾಸ್ ರೂಮ್‍ಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದರು.
ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಐದು ವರ್ಷಗಳಲ್ಲಿ ಅವೆಲ್ಲವನ್ನೂ ಮೇಲ್ದರ್ಜೆಗೇರಿಸಲಾಗುವುದು, ಇದೇ ವರ್ಷಗಳಲ್ಲಿ ವಿದೇಶೀ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ರಾಜೀವ್ ಗಾಂಧಿ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿಜ್ಞಾನದಲ್ಲಿ ಉತ್ಕøಷ್ಟತಾ ಕೇಂದ್ರ ಸ್ಥಾಪನೆ ಮಾಡಲು ಇದೇ ವರ್ಷ ಕೆಲಸ ಪ್ರಾರಂಭವಾಗಿದೆ. ಆರ್ ಅಂಡ್ ಡಿ ಸಂಸ್ಥೆಗಳನ್ನು ಗ್ಯಾರೇಜಿನಿಂದ ಸಂಸ್ಥೆಗಳವರೆಗೆ ಉತ್ತೇಜಿಸಲು ಆರ್ ಅಂಡ್ ಡಿ ನೀತಿಯನ್ನು ರೂಪಿಸಲಾಗಿದೆ. ದೊಡ್ಡ ಬದಲಾವಣೆಯನ್ನು ಶಿಕ್ಷಣದಲ್ಲಿ ತರಲಾಗುತ್ತಿದೆ. ಏಳು ನೂತನ ಡಿಜಿಟಲ್ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಲಾಗುತ್ತಿದೆ. ಬೇರ್ಯಾವ ರಾಜ್ಯವೂ ಇದನ್ನು ಮಾಡುತ್ತಿಲ್ಲ. ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲಾಗಿದೆ. ಜ್ಞಾನ ನೀಡಿದರೆ ಮುಂದಿನದೆಲ್ಲವೂ ಬದಲಾಗುತ್ತದೆ ಎನ್ನುವುದು ನಮ್ಮ ಸರ್ಕಾರದ ನಂಬಿಕೆ. ಶಿಕ್ಷಣ ಪರವಾದ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮಹತ್ವ ಕೊಡುವ ಸರ್ಕಾರ ನಮ್ಮದು. ಒಂದು ತಿಂಗಳಲ್ಲಿ 1 ಲಕ್ಷ ನಾಲ್ಕು ಸಾವಿರ ಕೋಟಿ ಮೌಲ್ಯದ ಯೋಜನೆಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಬೆಳಗಾವಿ ಜ್ಞಾನದ, ಕೌಶಲ್ಯಯುತ ಕೇಂದ್ರ. ಬೆಂಗಳೂರಿನ ನಂತರ ಬಹು ಮುಖ್ಯ ನಗರವಾಗಿರುವ ನಗರ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು, ಕೆಎಲ್‌ಇ ಸಂಸ್ಥೆಯನ್ನು ಕಟ್ಟುವಲ್ಲಿ ಸಪ್ತರ್ಷಿಗಳ ಕೊಡುಗೆ ಅಪಾರವಾಗಿದೆ. ಅವರ ತ್ಯಾಗದ ಫಲದಿಂದಲೇ ಇಂದು ಸಂಸ್ಥೆಯು ವಿಸ್ತರಿಸಿದೆ ವಿನಃ ನನ್ನೊಬ್ಬನಿಂದಲ್ಲ. ಇಂದು ಯಾವುದೇ ದೇಶಕ್ಕೆ ಹೋದರೂ ಅಲ್ಲಿರುವ ಕೆಎಲ್‌ಇ ವಿದ್ಯಾರ್ಥಿಗಳು ಮೊದಲು ಸ್ಮರಿಸುವುದು ಸಂಸ್ಥೆಯ ಶಿಕ್ಷಕರನ್ನು. ಅಂದರೆ ಶಿಕ್ಷಕರ ಅಗಾಧ ಸೇವೆಯ ಫಲದಿಂದ ಕೆಎಲ್‌ಇ ಸಂಸ್ಥೆಯು ಜಾಗತಿಕವಾಗಿ ಬೆಳೆದುನಿಂತಿದೆ, ವಿಸ್ತರಿಸಿದೆ. ಅನೇಕ ಮಹನೀಯರು ಕೆಎಲ್‌ಇಯಲ್ಲಿ ಕಲಿತು ಸಂಸ್ಥೆಯ ಗೌರವವನ್ನು ಹೆಚ್ಚಿಸಿದ್ದಾರೆ. ಇನ್ಫೋಸಿಸ್‌ನ ಸುಧಾಮೂರ್ತಿ, ಸಿಎಂ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ, ದಿ.ಅನಂತಕುಮಾರ, ಪ್ರಹ್ಲಾದ ಜೋಶಿ, ಮುರಗೇಶ ನಿರಾಣಿ ಅನೇಕ ರಾಜಕೀಯ ಮುಖಂಡರು, ಸಮಾಜ ಧುರೀಣರು ಕೆಎಲ್‌ಇ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳೆಂಬುದು ಹೆಮ್ಮೆಯ ಸಂಗತಿ. ಇಂದು ದೇಶಕ್ಕೆ ಹಲವಾರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಈ ಸಂಸ್ಥೆ ನೀಡಿದೆ ಆ ಎಲ್ಲ ವಿದ್ಯಾರ್ಥಿಗಳನ್ನು ನಾನು ಮನಃಪೂರ್ವಕವಾಗಿ ನೆನೆಯುತ್ತೇನೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಸಂಸ್ಥೆಯ ರಚನಾತ್ಮಕ ಕಾರ್ಯಗಳಿಗೆ ಕೈಜೋಡಿಸಿವೆ. ಈ ದಿಸೆಯಲ್ಲಿ ಬಿಜೆಪಿ ಪಕ್ಷಕ್ಕೆ ಸಂಸ್ಥೆಯು ಚಿರಋಣಿಯಾಗಿದೆ. ಈ ಪಕ್ಷದ ಸಮರ್ಥ ಅಭ್ಯರ್ಥಿಗಳಾಗಿರುವ ಅರುಣ ಶಾಹಾಪೂರ ಹಾಗೂ ಹನುಮಂತ ನಿರಾಣಿಯವರಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕೆಂದು ಕೆಎಲ್‌ಇ ಶಿಕ್ಷಕ ಮತದಾರರಿಗೆ ಕರೆನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಗೋವಿಂದ ಕಾರಜೋಳ, ಅರಣ್ಯ, ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವರಾದ ಉಮೇಶ ಕತ್ತಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ ಮತಯಾಚಿಸಿದರು. ವೇದಿಕೆಯ ಮೇಲೆ ಬೆಳಗಾವಿ ಸಂಸದೆ ಮಂಗಲಾ ಅಂಗಡಿ, ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಅನಿಲ ಬೆನಕೆ, ಅಮರಸಿಂಹ ಪಾಟೀಲ, ವಿಶ್ವನಾಥ ಪಾಟೀಲ, ಅನಿಲ ಪಟ್ಟೇದ, ಜಯಾನಂದ ಮುನವಳ್ಳಿ ಉಪಸ್ಥಿತರಿದ್ದರು. ಆರಂಭದಲ್ಲಿ ಕೆಎಲ್‌ಇ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಸ್ವಾಗತಿಸಿ, ವಂದಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು.
ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಸಿಎಂ ಮತಯಾಚನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ