Belagavi NewsBelgaum NewsEducationKannada NewsKarnataka News

ಶ್ರೇಷ್ಠ ಭಾರತ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅಪಾರ: ಸಚಿವ ಸತೀಶ್ ಜಾರಕಿಹೊಳಿ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ದೇಶ ಕಟ್ಟುವ ಭವಿಷ್ಯದ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರ ಕಾರ್ಯ ಶ್ಲಾಘನೀಯ. ದೇಶಕ್ಕೆ ಕೊಡುಗೆ ನೀಡುವ ಮಕ್ಕಳ ವ್ಯಕ್ತಿತ್ವ ವಿಕಸನದ ಮೂಲಕ ದೇಶವನ್ನು ಎಲ್ಲ ಆಯಾಮಗಳಿಂದ ಬಲಿಷ್ಠಗೊಳಿಸಿ, ಶ್ರೇಷ್ಠ ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಲೋಕೋಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಕಾರ್ಯಾಲಯ, ಬೆಳಗಾವಿ ದಕ್ಷಿಣ ಹಾಗೂ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ (ಸೆ.೦೫) ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ -೨೦೨೩ ಹಾಗೂ ಬೆಳಗಾವಿ (ದ) ಜಿಲ್ಲಾ ಮಟ್ಟದ ಮತ್ತು ನಗರ ವಲಯ ಮಟ್ಟದ ಪ್ರತಿಭಾಕಾರಂಜಿ ಕಲೋತ್ಸವದ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಕೇವಲ ಅಂಕಿ ಆಧಾರದ ಮೇಲೆ ಶಾಲೆಗಳು ನಡೆಯುತ್ತಿವೆ, ವಿದ್ಯಾರ್ಥಿಗಳ ಅಂಕಿ ಸಂಖ್ಯೆಗಿಂತ ಪ್ರತಿ ಗ್ರಾಮದಲ್ಲಿ ಶಾಲೆಗಳು ಇರಲೇಬೇಕು. ಶಾಲೆಗಳ ಹೊಸ ಕಟ್ಟಡ, ಶಿಕ್ಷಣದ ಗುಣಮಟ್ಟ, ಉತ್ತಮ ಶಾಲಾ ಕೊಠಡಿ, ಶಿಕ್ಷಕರ ನೇಮಕ ಸೇರಿದಂತೆ ಸರ್ಕಾರಿ ಶಾಲೆಗಳು ಮತ್ತಷ್ಟು ಅಭಿವೃದ್ಧಿ ಹೊಂದಬೇಕಿದೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳ ಅಭವೃದ್ಧಿಗೆ ಚಿಂತನೆ:
ಈಗಾಗಲೇ ಖಾಸಗಿ ಶಾಲೆಗಳಿಗೆ ಬಹಳ ಮಕ್ಕಳು ವಲಸೆ ಹೋಗುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳ ಮಾದರಿಯ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಿಕ್ಷಕರು ಹೆಚ್ಚಿನ ಶ್ರಮ ವಹಿಸಬೇಕು. ಮಲೆನಾಡು ಪ್ರದೇಶದಲ್ಲಿನ ಶಾಲೆಗಳಿಗೆ ವಿದ್ಯಾರ್ಥಿಗಳು ತೆರಳಲು ಬಹಳ ಕಷ್ಟಕರ ಸಂಗತಿಯಿದೆ. ಅಂತಹ ಪ್ರದೇಶಗಳಲ್ಲಿ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಶಿಕ್ಷಕರಲ್ಲಿ ಹೊಸ ಚಿಂತನೆಗಳು ಬೆಳೆಯಬೇಕು ಇದರಿಂದ ಹೊಸ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯ. ಮೊದಲ ಮಹಿಳಾ ಶಿಕ್ಷಕಿಯಾಗಿ ಮಹಿಳೆಯರನ್ನು ಮುಖ್ಯ ವಾಹಿನಿಗೆ ತಂದಿರುವ ಸಾವಿತ್ರಿ ಬಾಯಿ ಫುಲೆ ಅವರನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ. ಶಿಕ್ಷಕರು ಬುದ್ಧ, ಬಸವ ಅಂಬೇಡ್ಕರ್ ಅವರು ವಿಚಾರ ಚಿಂತನೆಗಳನ್ನು ಮಕ್ಕಳಲ್ಲಿ ಮೂಡಿಸಬೇಕು ಎಂದರು.

ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸಿ:
ಮುಂದಿನ ಶಿಕ್ಷಕರ ದಿನಾಚರಣೆಯಲ್ಲಿ ಹೊಸ ಹೊಸ ಆಲೋಚನೆಗಳು ಚಿಂತನೆಗಳು ಶಿಕ್ಷಕರಲ್ಲಿ ಬರಬೇಕು. ಭವಿಷ್ಯದ ಶ್ರೇಷ್ಠ ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವದಾಗಿದೆ ಈ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ಉತ್ತಮ ಪ್ರಜೆಗಳ ತಯಾರಿಗಾಗಿ ಕಾರ್ಯ ನಿರ್ವಹಿಸಬೇಕು ಎಂದು ಲೋಕೋಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹೇಳಿದರು.


ಬಲಿಷ್ಠ ದೇಶವನ್ನು ಕಟ್ಟಲು ಶಿಕ್ಷಣ, ಕ್ರೀಡೆ ಬಹಳ ಮುಖ್ಯ. ದೇಶದಲ್ಲಿ ಸ್ವಾತಂತ್ರ್ಯ ಸಿಕ್ಕ ನಂತರದ ಶಿಕ್ಷಣ ಸಾಕಷ್ಟು ಬದಲಾವಣೆ ಕಂಡಿದೆ. ನಮ್ಮ ದೇಶದಲ್ಲಿ ಶಿಕ್ಷಣ ಪಡೆದ ಸಾಧಕರು, ಕ್ರೀಡಾ ಪಟುಗಳು, ವಿಜ್ಞಾನಿಗಳು ಈಗ ಬೇರೆ ರಾಷ್ಟ್ರದಲ್ಲಿ ಹೆಸರುವಾಸಿ ಅವರ ಮೂಲ ಶಿಕ್ಷಣಕ್ಕೆ ಗುರುಗಳೆ ಕಾರಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ತಿಳಿಸಿದರು.

ಖಾಲಿ ಹುದ್ದೆಗಳ ಶೀಘ್ರ ಭರ್ತಿ:
ಪ್ರತಿ ನಾಗರಿಕರೂ ತಮ್ಮ ಮಕ್ಕಳು ಉನ್ನತ ಶಿಕ್ಷಣ ಪಡಯಬೇಕೆಂಬ ಆಸೆ ಹೊಂದಿರುತ್ತಾರೆ. ಪಾಲಕರು ತಮ್ಮ ಸ್ವಂತ ಮಕ್ಕಳ ಏಳಿಗೆ ಶ್ರಮಿಸಿದರೆ, ಶಿಕ್ಷಕರು ಎಲ್ಲ ಮಕ್ಕಳ ಏಳಿಗೆ ನಿರಂತರ ಶ್ರಮಿಸುತ್ತಾರೆ. ಸರ್ಕಾರಿ ಶಾಲೆಗಳ ಸುಧಾರಣೆ, ಉತ್ತಮ ಗುಣಮಟ್ಟದ ಶಿಕ್ಷಣ ನೀಡಿವುದು ಸರ್ಕಾರದ ಮುಖ್ಯ ಉದ್ದೇಶ. ಮುಂಬರುವ ದಿನಗಳಲ್ಲಿ ಶಿಕ್ಷಣ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಹೆಬ್ಬಾಳಕರ್ ಹೇಳಿದರು.

ಶಿಕ್ಷಕರಿಂದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಸಾಧ್ಯ:
ಈ ವೇಳೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಉತ್ತರ ವಿಧಾನ ಸಭಾ ಕ್ಷೇತ್ರದ ಆಸಿಫ್ (ರಾಜು) ಸೇಠ ಅವರು ಪಾಲಕರು ಮಕ್ಕಳನ್ನು ಕೇವಲ ಶಾಲೆಗೆ ಕಳುಹಿಸಿ ಅವರ ಜವಾಬ್ದಾರಿ ತೋರಿದರೆ, ಅವರ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ.
೭೦ ರಿಂದ ೮೦ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಶಾಲಾ ಕಟ್ಟಡ, ಕೊಠಡಿ, ಮಕ್ಕಳ ಶಿಕ್ಷಣದ ಕುರಿತು ಪರಿಶೀಲಿಸಿದ್ದೇನೆ. ಶಾಲೆಗಳು ಇನ್ನೂ ೫೦ ಪ್ರತಿಶತ ದುರಸ್ತಿಯ ಅವಶ್ಯವಿದೆ. ಖಾಸಗಿ ಶಾಲೆಗಳ ಮಾದರಿಯಲ್ಲಿ ಶಾಲೆಗಳ ಉನ್ನತೀಕರಣಗೊಳಿಸಿ, ಸುಧಾರಣೆ ಹಂತಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಎಸ್ ಹಿರೇಮಠ ಅವರು ಮಾತನಾಡಿ, ಮನುಷ್ಯನ ಜೀವನದಲ್ಲಿ ಶಿಕ್ಷಣ ಎಂಬುದು ಬಹಳ ಮುಖ್ಯ. ತರಗತಿ ಕೊನೆಯಲ್ಲಿ ಶಿಕ್ಷಣ ಪಡೆದರೆ ಮಾತ್ರಾ ಅದು ಶಿಕ್ಷಣವಲ್ಲ,
ಜೀವನದ ಪ್ರತಿ ಕ್ಷಣ ಮನುಷ್ಯ ಶಿಕ್ಷಣ ಪಡೆಯುತ್ತಾನೆ. ಡಾ. ರಾಧಾಕೃಷ್ಣನ್ ಅವರ ಮಾತಿನಂತೆ ತಮ್ಮ ಹುಟ್ಟಿನ ದಿನವನ್ನ ಶಿಕ್ಷಕರ ದಿನಾಚರಣೆ ಎಂದು ಆಚರಣೆ ಮಾಡಲಾಗುತ್ತಿದೆ.
ವಿದ್ಯಾರ್ಥಿಯನ್ನು ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಪಡಿಸುವ ಶಕ್ತಿ ಶಿಕ್ಷಕರಲ್ಲಿದೆ. ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಅವರು ಶಿಕ್ಷಣದ ಕುರಿತು ತಮ್ಮ ವಿಚಾರಗಳನ್ನು ಬಿತ್ತುವ ಮೂಲಕ ಶಿಕ್ಷಕರ ದಿನಾಚರಣೆ ಮಾಡುವದಾಗಿ ಹೇಳಿದ್ದಾರೆ ಎಂದು ಎಲ್.ಎಸ್. ಹಿರೇಮಠ ಅವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳಗಾವಿ ಶಾಲಾ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ನಾಲತವಾಡ ಅವರು ಸಮಾಜವನ್ನ ಬದಲಿಸುವ ಶಕ್ತಿ ಶಿಕ್ಷಕರ ಕೈಯಲ್ಲಿದೆ. ಒಂದು ಮೂರ್ತಿಯನ್ನು ಕೆತ್ತಿ, ಶಿಲೆ ಮಾಡುವ ಮೂಲಕ ಮಾದರಿ ವ್ಯಕ್ತಿಗಳನ್ನು ಮಾಡುವ ಕಲೆ ಶಿಕ್ಷಿಕರಿಗೆ ಮಾತ್ರವಿದೆ ಎಂದು ಹೇಳಿದರು.

ಸನ್ಮಾನ ಕಾರ್ಯಕ್ರಮ:
ಶಿಕ್ಷಕರಗಾಗಿ ವೃತ್ತಿ ಜೀವನದಿಂದ ನಿವೃತ್ತಿ ಪಡೆದ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿಯಲ್ಲಿ ೨೦೨೩/೨೪ ನೇ ಸಾಲಿನ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್, ಡಿಸಿಪಿ ಸ್ನೇಹಾ, ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು, ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button