Kannada NewsKarnataka NewsPolitics

ಬಿಜೆಪಿಯ ಸೇಡಿನ‌ ರಾಜಕಾರಣವನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಸಿದ್ದೇವೆ: ಸಿ.ಎಂ ಸಿದ್ದರಾಮಯ್ಯ

ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನ ಫಲ ನೀಡುವುದಿಲ್ಲ: ಸಿ.ಎಂ ಸ್ಪಷ್ಟ ನುಡಿ

ಪ್ರಗತಿವಾಹಿನಿ ಸುದ್ದಿ, ದೆಹಲಿ : ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನ ಫಲ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ದೆಹಲಿಯಲ್ಲಿ AICC ಅಧ್ಯಕ್ಷರಾದ ಮಲ್ಲಿಕಾರ್ಜುನ‌ ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.

ವಾಲ್ಮೀಕಿ ಹಗರಣದಲ್ಲಿ ಸರ್ಕಾರದ ಪಾತ್ರ ಇಲ್ಲ. ಹಣಕಾಸು ಇಲಾಖೆಯ ಪಾತ್ರ ಕೂಡ ಇಲ್ಲ . ಮುಡಾ ವಿಚಾರದಲ್ಲೂ ಕಾನೂನುಬಾಹಿರವಾಗಿ ಏನೂ ನಡೆದಿಲ್ಲ. ಎಲ್ಲವೂ ಕಾನೂನುಬದ್ದವಾಗಿ, ನಿಯಮಗಳ ಪ್ರಕಾರವೇ ನಡೆದಿದೆ ಎನ್ನುವುದನ್ನು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಸಿದ್ದೇವೆ.

ಪರಿಶಿಷ್ಠ ಪಂಗಡಕ್ಕೆ ಸೇರಿದ ಹಣ ದುರುಪಯೋಗ ಆಗಿಲ್ಲ. ವಾಲ್ಮೀಕಿ ಹಗರಣದಲ್ಲಿ ಹಣ ವಶಪಡಿಸಿಕೊಳ್ಳಲಾಗುತ್ತಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎನ್ನುವುದನ್ನೂ ಅರ್ಥ ಮಾಡಿಸಿದ್ದೇವೆ.

ಬಿಜೆಪಿಯ ಸೇಡಿನ ಮತ್ತು ಅಸೂಯೆಯ ರಾಜಕಾರಣ ಹೈಕಮಾಂಡ್ ಅವರಿಗೂ ಮನವರಿಕೆಯಾಗಿದೆ. ಬಿಜೆಪಿಯ ಪಾದಯಾತ್ರೆಗೆ ಪ್ರತಿಯಾಗಿ ಏನು ಮಾಡಬೇಕು ಎನ್ನುವುದನ್ನು ಬೆಂಗಳೂರಿಗೆ ತೆರಳಿದ ಬಳಿಕ KPCC ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಬಜೆಟ್ ಪೂರ್ವ ಸಭೆಯಲ್ಲಿ ರಾಜ್ಯದಿಂದ ಇಟ್ಟಿದ್ದ ಯಾವ ಬೇಡಿಕೆಗಳನ್ನೂ ಈಡೇರಿಸಲಾಗಿಲ್ಲ. ಹೀಗಾಗಿ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎನ್ನುವ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು ಎಂದರು.

ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವುದು ಬಿಜೆಪಿಯ ಹುನ್ನಾರ. ಆದರೆ ಇದರಲ್ಲಿ ಅವರಿಗೆ ಯಶಸ್ಸು ಸಿಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ನುಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button