ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಹಕಾರಿ ಬ್ಯಾಂಕಗಳು ನಿಯಮಗಳಿಗೆ ಸಂಸ್ಥೆಗಳು ಬದ್ಧರಾಗಿರಬೇಕು. ನಿಮಯವನ್ನು ಕಡ್ಡಾಯವಾಗಿ ಪಾಲಿಸಬೇಕು, ಸಿಬ್ಬಂದಿ ನೇಮಕಾತಿಗೆ ಒಂದು ಸಮಿತಿ ರಚಿಸಿ, ಸಮಿತಿಯು ಐದು ಸದಸ್ಯರನ್ನು ಒಳಗೊಂಡಿರಬೇಕು. ಆಯ್ಕೆಯಾದ ಸಿಬ್ಬಂದಿಗೆ ನೇಮಕಾತಿ ಪತ್ರವನ್ನು ನೀಡಬೇಕು. ತರಬೇತಿಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಪ್ರಾಂತೀಯ ವ್ಯವಸ್ಥಾಪಕ ಶ್ರೀಕಾಂತ್ ಬರುವೆ ಹೇಳಿದರು.
ನಗರದ ಖಾಸಗಿ ಹೋಟಲ್ ಸಭಾಭವನದಲ್ಲಿ ಶುಕ್ರವಾರ ೨೯ ರಂದು ಆಯೋಜಿಸಲಾಗಿದ್ದ, ಜಿಲ್ಲೆಯ ಸೌಹಾರ್ದ ಸಹಕಾರಿಗಳ ಪದಾಧಿಕಾರಿಗಳಿಗೆ ’ಆಡಳಿತ ಪರಿಣಿತಿ ಅಭಿವೃದ್ಧಿ ತರಬೇತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಳಪ್ಪ ಬೆಳಕೊಡ ಮಾತನಾಡಿ, ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಒಂದು ಸಂಸ್ಥೆಯಲ್ಲಿ ಅವ್ಯವಹಾರ ನಡೆದರೆ, ಉಳಿದ ಉತ್ತಮ ಸಂಸ್ಥೆಗಳ ಮೇಲೂ ಸಹಿತ ಕೆಟ್ಟ ಪರಿಣಾಮ ಬೀರುತ್ತದೆ. ಈಗ ಸಹಕಾರ ಸಂಸ್ಥೆಗಳ ನಡುವೆ ಸ್ಪರ್ಧೆ ಇವೆ. ಆದ್ದರಿಂದ ಸಂಸ್ಥೆಗಳು ಕಾಯ್ದೆ, ನಿಯಮಗಳನ್ನು ಪಾಲನೆ ಮಾಡಿ ಉತ್ತಮವಾಗಿ ಬೆಳೆಯುಂತಾಗಲಿ ಎಂದು ಆಶಿಸಿದರು.
ಸಾಯಿಶ್ಯಾಮ ಸೌಹಾರ್ದ ಸಹಕಾರಿ ಅಧ್ಯಕ್ಷ ಸಿ.ಟಿ.ಮಜಿಗೆ ಮಾತನಾಡಿ , ಸಹಕಾರಿ ಸಂಸ್ಥೆಗಳು ಸ್ವಾಯತ್ತತೆ, ಸ್ವಯಂ ನಿಯಂತ್ರಣ ಹೊಂದಿವೆ, ಇವುಗಳಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪ ಇರುವುದಿಲ್ಲ. ಆದರೆ ಸಂಸ್ಥೆಗಳನ್ನು ತಮ್ಮಿಷ್ಟದಂತೆ ನಡೆಸುವಂತಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಸಂಯುಕ್ತ ಸಹಕಾರಿಯು ನಿರಂತರವಾಗಿ ಕಾಲಕ್ಕೆ ತಕ್ಕಂತೆ ಸಹಕಾರಿಗಳಿಗೆ ಅನ್ವಯಿಸುವ ವಿಷಯಗಳಿಗನುಗುಣವಾಗಿ ತರಬೇತಿಗಳನ್ನು ಆಯೋಜಿಸಿ ಮಾರ್ಗದರ್ಶನ ನೀಡುತ್ತಾ ಬರುತ್ತಿದೆ. ತಾವುಗಳು ಎಲ್ಲಾ ತರಬೇತಿಗಳಲ್ಲಿ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆಯಿರಿ ಎಂದು ಕರೆ ನೀಡಿದರು.
ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಜಂಟಿ ನಿರ್ದೇಶಕ ಸುರೇಶರಾವ್ ಮಾತನಾಡಿ, ಭಾರತದಲ್ಲಿ ಸಹಕಾರಿ ಕ್ಷೇತ್ರ ತನ್ನದೇ ಆದ ಛಾಪು ಮೂಡಿಸಿದೆ. ಆದರೆ ಇವತ್ತಿನ ದಿನಗಳಲ್ಲಿ ಈ ಕ್ಷೇತ್ರ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರ ವೇಗ ಹೆಚ್ಚಬೇಕು. ಆದ್ದರಿಂದ ಸಹಕಾರಿಗಳು ತಂತ್ರಜ್ಞಾನದ ಬಳಕೆ ಮತ್ತು ಗಣಕೀಕೃತ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು. ಒಳ್ಳೆಯ ಜ್ಞಾನವುಳ್ಳ ಮತ್ತು ಸಾಮರ್ಥ್ಯವುಳ್ಳ ಸಿಬ್ಬಂದಿಗಳನ್ನು ನೇಮಿಸಿಕೊಂಡು ಸಂಸ್ಥೆಗಳನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸಬೇಕು. ಸಹಕಾರಿಗಳಲ್ಲಿ ವೃತ್ತಿಪರತೆ ಇರಲಿ ಎಂದು ಕರೆ ನೀಡಿದರು.
ರಾಜ್ಯ ಸೌಹಾರ್ದ ಸಂಯುಕ್ತ ಉಪಾಧ್ಯಕ್ಷ ಜಗದೀಶ ಎಂ.ಕವಟಗಿಮಠ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಎರಡು ಕಾಯ್ದೆಗಳಿವೆ. ಅಧಿನಿಯಮ, ೧೯೫೯ ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, ೧೯೯೭. ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, ೧೯೯೭ದಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ. ಆದರೆ ಇದರ ದುರುಪಯೋಗ ಇತ್ತಿಚಿನ ದಿನಗಳಲ್ಲಿ ತುಂಬಾ ಆಗುತ್ತಿದೆ. ಸ್ವೇಚ್ಛಾಚಾರ ಸಂಸ್ಥೆಗಳಲ್ಲಿ ಅತಿಯಾಗತೊಡಗಿದೆ. ಇದರಿಂದ ಸಂಸ್ಥೆಗಳು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಸಂಸ್ಥೆಯಲ್ಲಿ ಆಡಳಿತ ಮಂಡಳಿ ಸದಸ್ಯರು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತಿರಬೇಕು. ಸಂಸ್ಥೆಯನ್ನು ವ್ಯವಸ್ಥಿತವಾಗಿ ನಡೆಸಬೇಕು. ಸೌಹಾರ್ದ ಸಹಕಾರಿಗಳು ದಾಖಲಿಸುವ ೩ ಲಕ್ಷಕ್ಕಿಂತ ಕಡಿಮೆ ಮೊತ್ತದ ದಾವೆಗಳ ವಿಲೇವಾರಿಗಾಗಿ ಮಧ್ಯಸ್ಥಗಾರರ ನೇಮಕವಾಗಲಿದೆ. ಇದರಿಂದ ಸಹಕಾರಿಗಳಿಗೆ ಅನುಕೂಲವಾಗಲಿದೆ. ಸಂಸ್ಥೆಗಳು ಸಾಲ ನೀಡುವುದು ಮತ್ತು ಠೇವಣಿ ಸ್ವೀಕರಿಸುವುದಷ್ಟಕ್ಕೆ ಸೀಮಿತವಾಗಿರದೇ ಬೇರೆ ಬೇರೆ ಚಟುವಟಿಕೆಗಳನ್ನು ಸಹ ಅಳವಡಿಸಿಕೊಂಡು ಕಾರ್ಯನಿರ್ವಹಿಸಿರಿ ಎಂದು ಕರೆ ನೀಡಿದರು.
ಶ್ರೀ ಬಸವೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಅಧ್ಯಕ್ಷ ಬಾಳಪ್ಪ ಬೆಳಕೊಡ, ವಿಕಾಸ ಸೌಹಾರ್ದ ಕೋ-ಆಪ್ ಬ್ಯಾಂಕ್, ನಿರ್ದೇಶಕರು ಅಮೃತ ಜೋಶಿ ಹಾಗೂ ಇತರರು ಇದ್ದರು ಪ್ರತಿಭಾ ಮಠ ನಿರೂಪಿಸಿದರು. ಜವಾಹರ ಮುಗ್ಗನವರ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ