ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಅಕ್ಕ ಪಕ್ಕದ ರಾಜ್ಯಗಳಲ್ಲಿ ಕೊರೋನಾ ದಿಢೀರ್ ಹೆಚ್ಚಳ ರಾಜ್ಯದಲ್ಲೂ ತೀವ್ರ ಆತಂಕ ಸೃಷ್ಟಿಸಿದ್ದು, ನೆರೆ ರಾಜ್ಯಗಳ ಸ್ಥಿತಿಯ ಪರಿಣಾಮ ಈಗಾಗಲೆ ಕರ್ನಾಟಕದಲ್ಲಿ ಕಾಣಿಸಿದೆ.
ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ತೀವ್ರ ಗತಿಯಲ್ಲಿ ಕೊರೋನಾ ಏರುತ್ತಿದ್ದು, ಇದು 3ನೇ ಅಲೆಯೇ ಎನ್ನುವ ಚರ್ಚೆ ಶುರುವಾಗಿದೆ. ಕೇರಳದಲ್ಲಿ ಈಗಾಗಲೆ ವೀಕ್ ಎಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಮಹಾರಾಷ್ಟ್ರದಲ್ಲೂ ಸಧ್ಯದಲ್ಲೇ ಲಾಕ್ ಡೌನ್ ಅಥವಾ ರಾತ್ರಿ ಕರ್ಫ್ಯೂ ಹೇರುವ ಹಂತ ತಲುಪಬಹುದು.
ಕರ್ನಾಟಕ ರಾಜ್ಯ ಕೇರಳ, ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವುದರಿಂದ ಜನ ಸಂಚಾರ ಎರಡೂ ರಾಜ್ಯಗಳ ನಡುವೆ ಅಪಾರ ಪ್ರಮಾಣದಲ್ಲಿರುತ್ತದೆ. ಎಷ್ಟೇ ತಪಾಸಣೆ. ನಿಯಂತ್ರಣ ಮಾಡಿದರೂ ಕಣ್ತಪ್ಪಿಸಿ ಬರುವವರು ಇದ್ದೇ ಇರುತ್ತಾರೆ.
ಕರ್ನಾಟಕದಲ್ಲೂ ಕಳೆದ 2 -3 ದಿನದಿಂದ ಕೊರೋನಾ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸೇರಿದಂತೆ ಗಡಿ ಭಾಗದಲ್ಲಿ ಕೊರೋನಾ ಹೆಚ್ಚಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕ ಗಣೇಶೋತ್ಸವ ನಿಷೇಧಿಸಲಾಗಿದೆ.
ಈ ವರ್ಷ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಇಲ್ಲ; ಜಿಲ್ಲಾಧಿಕಾರಿಗಳಿಂದ 13 ಮಾರ್ಗದರ್ಶಿ ಸೂತ್ರ ಬಿಡುಗಡೆ
ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ ದಿಢೀರ್ ಹೆಚ್ಚುತ್ತಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸಂಜೆ ಗಡಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ದೆಹಲಿಯಿಂದ ಮರಳಿದ ಬಳಿಕ, ಸಂಜೆ 5.30ಕ್ಕೆ ಬೊಮ್ಮಾಯಿ ವಿಡೀಯೋ ಕಾನ್ಫರೆನ್ಸ್ ಫಿಕ್ಸ್ ಆಗಿದೆ. ಈಗಾಗಲೆ ಸಿಎಂ ಬೊಮ್ಮಾಯಿ ಕೊರೋನಾ ನಿಯಂತ್ರಣ ತಮ್ಮ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ. 8 ಜಿಲ್ಲೆಗಳ ಅಧಿಕಾರಿಗಳ ಜೊತೆ ಚರ್ಚಿಸಿ ಕೈಗೊಳ್ಳಬೇಕಾದ ಬಿಗಿ ಕ್ರಮಗಳ ಬಗ್ಗೆ ಸೂಚಿಸಲಾಗುವುದು ಎಂದಿದ್ದಾರೆ.
ಗಡಿ ಜಿಲ್ಲೆಗಳ ಪರಿಸ್ಥಿತಿ, ತೆಗೆದುಕೊಂಡಿರುವ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ. ವೀಕ್ ಎಂಡ್ ಕರ್ಫ್ಯೂ, ರಾತ್ರಿ ಕರ್ಫ್ಯೂ, ಲಾಕ್ ಡೌನ್ ಮೊದಲಾದ ವಿಷಯಗಳ ಕುರಿತು ಚರ್ಚೆಯಾಗಲಿದೆ. 2ನೇ ಅಲೆ ವೇಳೆ ಮಾಡಿರುವ ನಿರ್ಲಕ್ಷ್ಯ ಮಾಡದೆ ಮುಂಚಿತವಾಗಿಯೇ ಕಠಿಣ ಕ್ರಮ ತೆಗೆದುಕೊಳ್ಳಬೇಕೆನ್ನುವ ಕೂಗು ಈಗಾಗಲೆ ಆರಂಭವಾಗಿದೆ. ರಾಜ್ಯದಲ್ಲಿ ಸಧ್ಯ ಸಂಪೂರ್ಣ ಅನ್ ಲಾಕ್ ಇರುವುದರಿಂದ ಜನರನ್ನು ನಿಯಂತ್ರಿಸುವುದು ಕಷ್ಟವಾಗಿದೆ.
ಹಾಗಾಗಿ ರಾಜ್ಯದಲ್ಲಿ ಭಾಗಶಃ ಲಾಕ್ ಡೌನ್ ಅಥವಾ ಕೊರೋನಾ ಕರ್ಫ್ಯೂ ಹೇರಲು ಮುಂದಾದರೂ ಆಶ್ಚರ್ಯವಿಲ್ಲ. ಇಂದು ಸಂಜೆಯ ಹೊತ್ತಿಗೆ ಸರಕಾರ ಒಂದು ನಿರ್ಧಾರಕ್ಕೆ ಬರಬಹುದು.
ಬಸವರಾಜ ಬೊಮ್ಮಾಯಿ ಹೇಳಿದ 2 ಆದ್ಯತೆಯ ವಿಷಯಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ