
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಕೊರೋನಾ ಎನ್ನುವ ಮಹಾಮಾರಿ ವೈರಸ್ ಹೆಸರು ಕೇಳಿದರೇನೆ ಭಯ ಭೀತಿ ಪಡುತ್ತಿರುವ ಇಂದಿನ ಸಂದರ್ಭದಲ್ಲಿ ರಾಜ್ಯದ ಗ್ರಾಮೀಣ ಪ್ರದೇಶಗಳ ಪೈಕಿ ಅತೀ ಹೆಚ್ಚು ಕೊರೋನಾ ಕೇಸ್ ಪತ್ತೆಯಾಗಿರುವ ಹಿರೇಬಾಗೆವಾಡಿ ಗ್ರಾಮವನ್ನು ಈಗಾಗಲೇ ಸೀಲ್ ಡೌನ್ ಪ್ರದೇಶವೆಂದು ಘೋಷಿಸಲಾಗಿದೆ.
ಜನರ ಆರೋಗ್ಯದ ಹಿತದೃಷ್ಟಿಯಿಂದ ತುರ್ತು ಅಗತ್ಯಗತೆ ಹೊರತಾಗಿ ಗ್ರಾಮದ ಯಾರೂ ಕೂಡ ಹೊರ ಹೋಗದಂತೆ ಮತ್ತು ಬೇರೆಯವರು ಈ ಗ್ರಾಮಕ್ಕೆ ಪ್ರವೇಶಿಸದಂತೆ ಆದೇಶವಿದೆ.
ಆದರೆ ಇಷ್ಟು ದಿನಗಳ ಕಾಲ ಹಿರೇಬಾಗೆವಾಡಿಯಲ್ಲಿದ್ದ ದೊಡವಾಡದ ಗ್ರಾಮದ ವ್ಯಕ್ತಿಯೋರ್ವರು ಗ್ರಾಮಕ್ಕೆ ಭಾನುವಾರ ವಾಪಸ್ ಆಗಮಿಸಿದ್ದಾರೆ ಎಂಬ ಸುದ್ದಿ ತಿಳಿದು ಗ್ರಾಮದ ನೂರಾರು ಜನ ಪೇಟೆ ರಸ್ತೆಯಲ್ಲಿ ಸಾಮಾಜಿಕ ಅಂತರ ಗಾಳಿಗೆ ತೂರಿ ಜಮಾಯಿಸಿದ್ದರು.
ಆತನನ್ನು ಗ್ರಾಮದಲ್ಲಿ ಕ್ವಾರಂಟೈನ್ ಮಾಡದೆ ಬೇರೆ ಕಡೆ ಕ್ವಾರಂಟೈನ್ ಮಾಡಬೇಕೆಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಮತ್ತು ಸ್ಥಳೀಯ ಗ್ರಾಪಂ ಪಿಡಿಓ ರವರಿಗೆ ಮನವಿ ಮಾಡಿದರು.
ಒಬ್ಬರ ಮೇಲೊಬ್ಬರು ಬೆರಳು ತೋರಿದ ಅಧಿಕಾರಿಗಳು:
ಹಿರೇಬಾಗೆವಾಡಿಯಿಂದ ಅಧಿಕಾರಿಗಳ ಕಣ್ತಪ್ಪಿಸಿ ಕಾಲ್ನಡಿಗೆ ಮುಖಾಂತರ ಗ್ರಾಮಕ್ಕೆ ಬಂದಿರುವ ಆ ವ್ಯಕ್ತಿಯ ಮಕ್ಕಳು ಕೂಡ ಸರಕಾರದ ನಿಯಮದಂತೆ ನಮ್ಮ ತಂದೆಯನ್ನು ನಾವು ಹೋಮ್ ಕ್ವಾರಂಟೈನ್ ಗೊಳಪಡಿಸಲು ಸಿದ್ದರಿದ್ದೇವೆ. ಆದರೆ ನಾವು ಕೆಲಸಕ್ಕೆಂದು ಹೊರಗಡೆ ಹೋಗಲೆಬೇಕು. ಇದರಿಂದ ಗ್ರಾಮಸ್ಥರಲ್ಲೂ ಶಂಕೆ ಬೇಡ. ಕೊರೋನಾ ಆತಂಕದಿಂದ ನಮ್ಮನ್ನು ಸಂಶಯದ ಕಣ್ಣಿನಿಂದ ನೋಡುವುದು ಬೇಡ. ಆದ್ದರಿಂದ ತಂದೆಯನ್ನು ಸರಕಾರದ ಕ್ವಾರಂಟೈನ್ ಕೇಂದ್ರದಲ್ಲಿ ಇಟ್ಟು ಅವಧಿ ಮುಗಿದ ನಂತರ ಕಳಿಸಿಕೊಡಿ ಎಂದರು.
ಆದರೆ ತಾಲೂಕು ಆರೋಗ್ಯ ಅಧಿಕಾರಿಗಳು ಆಂಬ್ಯುಲೆನ್ಸ ವ್ಯವಸ್ಥೆ ಮಾಡಲಾಗುವುದಿಲ್ಲ ಎಂದರು. ಪಿಡಿಓರವರು ಆರೋಗ್ಯ ಇಲಾಖೆಯವರು ಇದಕ್ಕೆ ವ್ಯವಸ್ಥೆ ಮಾಡಬೇಕೆಂದು ಒಬ್ಬರ ಮೇಲೊಬ್ಬರು ಆರೋಪಿಸಲು ಪ್ರಾರಂಭಿಸಿದ್ದರಿಂದ ಗ್ರಾಮದ ತಾಪಂ ಸದಸ್ಯ ಸಂಗಯ್ಯ ದಾಭಿಮಠ, ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ ಮತ್ತಿತರರು ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೇಸತ್ತು ಆಶಾ ಕಾರ್ಯಕರ್ತೆಯರಿಂದ ವ್ಯಕ್ತಿಯ ಪರೀಕ್ಷೆ ಮಾಡಿಸಿ ಹೋಮ್ ಕ್ವಾರಂಟೈನ್ ಸೀಲ್ ಹಾಕಿಸಿ ಸ್ಥಳೀಯ ಬಿಸಿಎಮ್ ಹಾಸ್ಟೇಲ್ ನಲ್ಲಿ 14 ದಿನಗಳವೆರೆಗ ಕ್ವಾರಂಟೈನ್ ಅವಧಿ ಪೂರೈಸಲು ಕಳಿಸಿಕೊಟ್ಟರು. ಆದರೆ ಹಾಸ್ಟೇಲ್ ಸುತ್ತಲಿನ ಮನೆಗಳ ಜನ ಆ ವ್ಯಕ್ತಿಯ ಯೋಗಕ್ಷೇಮ ಯಾರ ಹೊಣೆ, ಆತನಿಗೆ ಕೊರೋನಾ ಬಂದಿದ್ದರೆ ಅವನ ಜತೆ ನಿತ್ಯ ಸಂಪರ್ಕ ಬರುವವರ ಪಾಡೇನು, ಆತ ಕ್ವಾರಂಟೈನ್ ನಿಯಮ ಪಾಲಿಸದೆ ಹೊರಗಡೆ ತಿರುಗಾಡಿದರೆ ಜನ ಜೀವನ ಹೇಗೆ ಎಂಬಿತ್ಯಾದಿ ಪ್ರಶ್ನೆ ಗೊಂದಲಗಳಿಂದ ಆತಂಕ ಪಡುವಂತಾಗಿದೆ.
ಅಧಿಕಾರಿಗಳು ಸ್ಥಳೀಯವಾಗಿ ಆತನನ್ನು ಕ್ವಾರಂಟೈನ್ ಮಾಡದೆ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸಿ ಗ್ರಾಮಸ್ಥರಲ್ಲಿರುವ ಜನರ ಭಯ ಆತಂಕ ದೂರ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ