Latest

ಕರೋನಾ ಭೀತಿ: ವೀಡಿಯೋ ಸಂವಾದ ನಡೆಸಿದ ಜಿಲ್ಲಾಧಿಕಾರಿ

ಪ್ರಗತಿವಾಹಿನಿ ಸುದ್ದಿ, ಕಾರವಾರ -: ರಾಜ್ಯಾದ್ಯಂತ ಕೊರೋನಾ ವೈರಸ್ ಭೀತಿ ಸೃಷ್ಟಿಯಾಗಿ, ಜಿಲ್ಲೆಯಲ್ಲೂ ಕೂಡ ಅದೇ ವಾತಾವರಣ ಕಂಡು ಬರುತ್ತಿದ್ದು, ಇದರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ್‌ಕುಮಾರ್ ಕೆ. ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲೆಯ ಉಪವಿಭಾಗಾಧಿಕಾರಿಗಳು, ತಹಶಿಲ್ದಾರರು ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಸಲಹೆ ಸೂಚನೆ ನೀಡಿದರು.
ಗ್ರಾಮ ಮತ್ತು ತಾಲೂಕು ಪಂಚಾಯತ್ ಹಾಗೂ ತಾಲೂಕು ಆಸ್ಪತ್ರೆಗಳಲ್ಲ್ಲಿ ಕೊರೋನಾ ವೈರಸ್ ಕುರಿತಾಗಿ ಸಭೆಗಳನ್ನು ನಡೆಸಬೇಕು. ಅಲ್ಲದೇ ಅಧಿಕಾರಿಗಳು ಖುದ್ದಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಮೂಲ ಸೌಲಭ್ಯಗಳ ಬಗ್ಗೆ ಪರಿಶೀಲಿಸಬೇಕು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಕೊರೋನಾ ಭೀತಿಯ ಕುರಿತಾಗಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಬೇಕು. ಆರೋಗ್ಯ ಇಲಾಖೆಯು ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ವಹಿಸಬೇಕು.

ಜನತೆ ಆತಂಕ ಪಡದ ರೀತಿಯಲ್ಲಿ ಜಾಗೃತರನ್ನಾಗಿಸುವ ಕಾರ್ಯ ಸ್ಥಳಿಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಗ್ರಾಮ, ಪಟ್ಟಣ ಹಾಗೂ ತಾಲೂಕು, ಪಂಚಾಯತ್‌ಗಳು, ಜನರು ಕೊರೋನಾ ವೈರಸ್ ಸಂಬಂಧಿಸಿದಂತೆ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂಬ ಜನಜಾಗೃತಿಯನ್ನು ಪರಿಣಾಮಕಾರಿಯಾಗಿ ಮಾಡಬೇಕೆಂದರು.
ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟವನ್ನು ಸಾಧ್ಯವಾದಷ್ಟು ಹೆಚ್ಚಿಸಬೇಕು. ತುರ್ತು ಸಂದರ್ಭದಲ್ಲಿ ಅಗತ್ಯ ಸೌಲಭ್ಯಗಳಿಂದ ಯಾವ ಆಸ್ಪತ್ರೆಗಳೂ ವಂಚಿತವಾಗಬಾರದು ಹಾಗೂ ಖಾಸಗಿ ವೈದ್ಯರ ಸಹಾಯವನ್ನು ಪಡೆಯಬೇಕೆಂದರು.
ಈ ವೇಳೆ ಜಿಲ್ಲಾಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್ ಮಾತನಾಡಿ, ಪ್ರಾಥಮಿಕ ಚಿಕಿತ್ಸೆ ಹಾಗೂ ರಕ್ಷಣಾ ಕವಚಗಳತ್ತ ಹೆಚ್ಚಿನ ಗಮನ ವಹಿಸಬೇಕಾದ ಅಗತ್ಯತೆ ಇದೆ. ಆರೋಗ್ಯ ರಕ್ಷಾ ಸಮಿತಿ ಅಡಿಯಲ್ಲಿನ ಹಣ ಬಳಸಿಕೊಂಡು ಅಗತ್ಯತೆಯುಳ್ಳ ಸಾಮಗ್ರಿಗಳನ್ನು ಹೊಂದಬಹುದಾಗಿದೆ ಎಂದರು. ಜಿಲ್ಲೆಯ ಗೋಕರ್ಣ, ಮುಂಡಗೋಡನಂತಹ ಪ್ರವಾಸಿ ಸ್ಥಳಗಳಿಗೆ ಹೆಚಿನ್ಚ ಜನರು ಭೇಟಿ ನೀಡುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆಂಟಿವೈರಸ್ ಸ್ಪ್ರೇ ಚಿಂತಿಸಲಾಗುವುದು ಹಾಗೂ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಲಾಗುತ್ತಿದೆ ಎಂದರು.
ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾತನಾಡಿ, ಸಾಲು ಸಾಲಾಗಿ ಜಾತ್ರೆಗಳು ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ದೂರ ದೂರದ ಪ್ರದೇಶಗಳಿಂದ ಜಿಲ್ಲೆಗೆ ಜನ ಆಗಮಿಸುತ್ತಿದ್ದಾರೆ. ಬೆಂಗಳೂರು, ಗೋವಾ ಮಂತಾದ ಕಡೆಗಳಿಂದ ಜಿಲ್ಲೆಗೆ ಬರುವ ಜನರಿಗೆ ಸ್ಕಾನರ್ ಮೂಲಕ ತಪಾಸಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ವಿದೇಶದಿಂದ ಪ್ರವಾಸಿ ಸ್ಥಳಗಳಿಗೆ ಜನ ಭೇಟಿ ನೀಡುತ್ತಿದ್ದು ಅವರನ್ನೂ ಸಹ ತಪಾಸಣೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಿ.ಎನ್ ಅಶೋಕ ಕುಮಾರ ಹಾಗೂ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಶಿವಾನಂದ ಕುಡ್ತಕರ ಅವರು ಉಪಸ್ಥಿತರಿದ್ದರು.

 ದೂರು ಬಾರದ ರೀತಿಯಲ್ಲಿ ಕ್ರಮಕೈಗೊಳ್ಳಿ

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಬಾರದ ರೀತಿಯಲ್ಲಿ ಅಧಿಕಾರಿಗಳು  ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲೆಯ ವಿವಿಧ ತಾಲೂಕು ಅಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ, ನೀರಿನ ಸಮಸ್ಯೆಗಳು ಉಧ್ಭವವಾಗಬಹುದಾದ ಪ್ರದೇಶಗಳನ್ನು ಈಗಿನಿಂದಲೇ ಗುರುತಿಸಿ ಮುನ್ನೆಚ್ಚರಿಕಾ ಕ್ರಮವಾಗಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ಜನಪ್ರತಿನಿದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕೆಂದರು.
೧೪ ನೇ ಹಣಕಾಸು ಯೋಜನೆಯಡಿ ಲಭ್ಯವಿರುವ ಹಣ ಬಳಸಿಕೊಂಡು ಗ್ರಾಮ ಪಂಚಾಯತ್, ತಾಲೂಕಾ ಪಂಚಾಯತ್ ಅಧಿಕಾರಿಗಳು ಕಾರ್ಯಬದ್ಧರಾಗಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಶನ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಉಂಟಾದ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಟ್ಯಾಂಕರ್ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು. ನೀರಿನ ಕೊರತೆಯಿರುವ ಸ್ಥಳಗಳ ಮಾಹಿತಿಯನ್ನು ಸ್ಥಳೀಯ ಅಧಿಕಾರಿಗಳಿಂದ ತೆಗೆದುಕೊಂಡು ಆ ಸ್ಥಳಗಳಲ್ಲಿ ಆಗಬೇಕಾದ ಕಾರ್ಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುಲಾಗುವುದೆಂದರು.
ನೀರು ಸರಬರಾಜಿಗೆ ಪೈಪ್‌ಲೈನ್ ವ್ಯವಸ್ಥೆ ಸೇರಿದಂತೆ ಇನ್ನಿತರ ವ್ಯವಸ್ಥೆಗಳ ಕುರಿತಾಗಿ ತಹಶಿಲ್ದಾರರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೇ ಗ್ರಾಮಲೆಕ್ಕಾಧಿಕಾರಿಗಳು ಹೆಚ್ಚಿನ ಗಮನ ವಹಿಸಬೇಕಿದೆ ಎಂದರು.

ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಉಂಟಾಗಹುದೆಂದು ನಿರಿಕ್ಷಿಸಲಾಗುವ ತಾಲೂಕುಗಳಲ್ಲಿ, ಈಗಲೇ ಟ್ಯಾಂಕರ್ ಮೂಲಕ ನೀರು ಪೂರೈಕೆಗಾಗಿ ದರಪಟ್ಟಿ ಆಹ್ವಾನಿಸಿ ಪೂರ್ವಸಿದ್ದತೆಯಲ್ಲಿರಬೇಕು ಎಂದು ಹೇಳಿದರು.

ರಾಯಭಾರಿ ನೇಮಿಸಿ

ಸಪ್ತಪದಿ ಸರಳ ಸಾಮೂಹಿಕ ವಿವಾಹವನ್ನು ಜಿಲ್ಲೆಯಲ್ಲೂ ನಡೆಸಲಾಗುತ್ತಿದ್ದು, ರಾಯಭಾರಿಯನ್ನು ನೇಮಿಸುವ ಮೂಲಕ ವ್ಯಾಪಕ ಪ್ರಚಾರ ನೀಡಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ ಅವರು ಹೇಳಿದರು.
ಅವರು ಬುಧವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಪವಿಭಾಗಾಧಿಕಾರಿಗಳು ಹಾಗೂ ತಹಶಿಲ್ದಾರರೊಂದಿಗೆ ವೀಡಿಯೋ ಸಂವಾದ ನಡೆಸಿ ಜಿಲ್ಲೆಯಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಏಪ್ರಿಲ್ ೨೬ ರಂದು ನಡೆಸಲು ಪ್ರಯತ್ನಿಸಬೇಕು, ಬೇರೆ ಜಿಲ್ಲೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೊಂದಣಿಯಾಗಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಮಾಡಿ, ವಿವಾಹ ಜೋಡಿಗಳ ನೊಂದಣಿ ಮಾಡಿಸುವ ಕಾರ್ಯ ಮಾಡಬೇಕೆಂದರು.
ಸಪ್ತಪದಿ ಸರಳ ಸಾಮೂಹಿಕ ವಿವಾಹವನ್ನು ಉತ್ತಮವಾದ ರೀತಿಯಲ್ಲಿ ಆಯೋಜಿಸಲಾಗುವುದು. ವಿವಾಹದ ನಂತರ ದಂಪತಿಗಳ ರಿಜಿಸ್ಟ್ರೇಷನ್ ಸಹ ಮಾಡಲಾಗುವುದು. ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ನಡೆಸಲು ಈಗಾಗಲೇ ತೀರ್ಮಾನಿಸಲಾಗಿದೆ, ಇಡಗುಂಜಿ ಹಾಗೂ ಅಳವೆಕೊಂಡಿ ದೇವಾಲಯಗಳಲ್ಲಿ ಕೂಡ ನಡೆಸಲು ಪ್ರಯತ್ನಿಸಲಾಗುದೆಂದರು.
ಮುಜರಾಯಿ ಇಲಾಖೆಯ ಪ್ರಭಾರ ಅಧಿಕಾರಿ ಹಾಗೂ ಸಪ್ತಪದಿ ಸಾಮೂಹಿಕ ವಿವಾಹದ ಜಿಲ್ಲಾ ನೋಡಲ್ ಅಧಿಕಾರಿ ಎಸ್ ಪುರುಷೋತ್ತಮ್ ಮಾತನಾಡಿ, ವಿವಾಹವಾಗುವ ಒಂದು ಜೋಡಿಗೆ ೪೦,೦೦೦ ರೂ. ತಾಳಿಸರ, ಮದುವೆ ಜವಳಿ ಖರೀದಿಗಾಗಿ ವಧುವಿನ ಖಾತೆಗೆ ೧೦ ಸಾವಿರ ರೂ ಹಾಗೂ ವರನ ಖಾತೆಗೆ ೫ ಸಾವಿರ ಒಟ್ಟೂ ೫೫ ಸಾವಿರ ರೂ. ವೆಚ್ಚ ಮಾಡಲಾಗುವುದು. ಮದುವೆಗೆ ಬಂದಂತಹ ಎಲ್ಲರಿಗೂ ಊಟದ ವ್ಯವಸ್ಥೆ ಇರುತ್ತದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ. ರೋಶನ್ ಅವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button