ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದಲ್ಲಿ ಮತ್ತು ಪಕ್ಕದ ಮಹಾರಾಷ್ಟ್ರದಲ್ಲಿ ಕೊರೋನಾ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ.
ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಪ್ರಗತಿವಾಹಿನಿಗೆ ಈ ವಿಷಯ ತಿಳಿಸಿದ್ದು, ದಿನದಿಂದ ದಿನಕ್ಕೆ ವಿಷಯ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರ ನಿಲ್ಲಿಸುವುದು ಅನಿವಾರ್ಯವೆನಿಸುತ್ತಿದೆ. ಈ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ. ಅನಿವಾರ್ಯವಾದರೆ ಆರೋಗ್ಯ ಇಲಾಖೆ ಈ ಕುರಿತು ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡಲಿದೆ ಎಂದು ತಿಳಿಸಿದ್ದಾರೆ.
ಕನಿಷ್ಠ ಅಂತಾರಾಜ್ಯ ಸಾರಿಗೆ, ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರ ಸಾರಿಗೆ ನಿಲ್ಲಿಸುವುದು ಉತ್ತಮ ಎನ್ನುವುದು ನಮ್ಮ ಅಭಿಪ್ರಾಯ. ನಂತರದಲ್ಲಿ ಸ್ಥಳೀಯ ಸಾರಿಗೆಯನ್ನೂ ನಿಲ್ಲಿಸಬೇಕಾಗಬಹುದು. ಈ ಬಗ್ಗೆ ಒಂದೆರಡು ದಿನದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಂತರದಲ್ಲಿ ಜಿಲ್ಲಾಡಳಿತ ಮತ್ತು ರಸ್ತೆ ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ 11 ಜನರಿಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಬೆಳಗಾವಿ ಮತ್ತು ಮಹಾರಾಷ್ಟ್ರ ಮಧ್ಯೆ ನಿಕಟ ಸಂಪರ್ಕವಿದೆ. ಪ್ರತಿನಿತ್ಯ ಲಕ್ಷಾಂತರ ಜನರು ಎರಡೂ ರಾಜ್ಯಗಳ ಮಧ್ಯೆ ಸಂಚರಿಸುತ್ತಾರೆ. ಹಾಗಾಗಿ ಅಲ್ಲಿಂದ ವೈರಸ್ ಹರಡುವ ಅಪಾಯವಿದೆ. ಈ ಕಾರಣಕ್ಕಾಗಿ ಕೊನೆಯ ಪಕ್ಷ ಮಹಾರಾಷ್ಟ್ರ ಸಾರಿಗೆ ನಿಲ್ಲಿಸುವುದು ಒಳಿತು ಎನ್ನುವುದು ಆರೋಗ್ಯ ಇಲಾಖೆಯ ಅಭಿಪ್ರಾಯವಾಗಿದೆ.
ಬೆಳಗಾವಿ ಜಿಲ್ಲೆಗೆ ವಿದೇಶದಿಂದ ಬಂದಿರುವ 58 ಜನರ ಮೇಲೆ ಈಗಾಗಲೆ ನಿಗಾ ವಹಿಸಲಾಗಿದೆ. ಆದರೆ ಯಾರೊಬ್ಬರಿಗೆ ರೋಗ ತಗುಲಿರುವುದು ದೃಢಪಟ್ಟಿಲ್ಲ. ಆದಾಗ್ಯ ಜಿಲ್ಲಾಡಳಿತ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ