ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಕರೋನಾ ವೈರಾಣು ಹರಡುವಿಕೆ ಕುರಿತು ವಿವಿಧ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವದಂತಿಗಳನ್ನು ಪರಾಮರ್ಶಿಸಿ ನೈಜ ಮಾಹಿತಿ ಕೊಡುವ ಉದ್ಧೇಶದಿಂದ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸಲು ಸಜ್ಜಾಗಿರುವ ಕರೋನಾ ಸೈನಿಕರ(ಸ್ವಯಂಸೇವಕರು) ಸಭೆ ವಾರ್ತಾಭವನದಲ್ಲಿ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಕೊರೊನಾ ವೈರಾಣು ಹರಡುವಿಕೆ ಕುರಿತಾಗಿ ವಿವಿಧ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಮೂಡಿಬರುವ ವದಂತಿಗಳ ಬಗ್ಗೆ ಪರಾಮರ್ಶಿಸಿ, ನೈಜ ಮಾಹಿತಿ ಕೊಡುವುದು ಹಾಗೂ ಸ್ಥಳೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಕೊಡುವುದು ಕೊರೊನಾ ಸೈನಿಕರ ಕೆಲಸವಾಗಿದೆ ಎಂದು ಸ್ವಯಂಸೇವಕರಿಗೆ ಮನವರಿಕೆ ಮಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕ ತರಬೇತಿ ಸಂಸ್ಥೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಕರೋನಾ ಸೈನಿಕ ಪಡೆ ರಚಿಸಲಾಗಿದ್ದು, ಶೀಘ್ರದಲ್ಲೇ ಗುರುತಿನಪತ್ರ ಹಾಗೂ ವಿಶೇಷ ಕಿಟ್ ನೀಡಲಾಗುವುದು ಎಂದು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೆಳಗಾವಿ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಡಿ.ಎನ್.ಮಿಸಾಳೆ, ದೇಶದ ಗಡಿ ಕಾಯುವ ಯೋಧರಂತೆ ಕರೋನಾ ಸೈನಿಕರು ಕೋವಿಡ್-೧೯ ಸೋಂಕು ಹಾಗೂ ಅದಕ್ಕೆ ಸಂಬಂಧಿಸಿದ ಸುಳ್ಳು ವದಂತಿಗಳ ವಿರುದ್ಧ ಹೋರಾಡಬೇಕಿದೆ ಎಂದರು.
ಕರೋನಾ ಸೈನಿಕರ ನೋಂದಣಿ, ನಿಯೋಜನೆ, ಕಾರ್ಯಕ್ಷೇತ್ರ, ಕಾರ್ಯವಿಧಾನ ಮತ್ತು ಮಾರ್ಗಸೂಚಿಗಳ ಬಗ್ಗೆ ಅವರು ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪ್ರಕಟಿಸಿರುವ ಕರಪತ್ರಗಳನ್ನು ಎಲ್ಲರಿಗೂ ಹಂಚಲಾಯಿತು.
ರೆಡ್ ಕ್ರಾಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಗುರುಪಾದಯ್ಯ ಶಿವಯೋಗಿಮಠ, ಮನೋಶಾಸ್ತ್ರಜ್ಞರಾದ ಮಲ್ಲಿಕಾರ್ಜುನ ನಿರ್ವಾಣಿ, ರೆಡ್ ಕ್ರಾಸ್ ಸಂಸ್ಥೆಯ ವಿಭಾಗೀಯ ಸಮನ್ವಯಾಧಿಕಾರಿ ಭಂಡಾರಿ, ಸದಸ್ಯರಾದ ಶ್ರೀನಿವಾಸ್ ಎಲ್.ವಿ. ಮತ್ತಿತರರು ಉಪಸ್ಥಿತರಿದ್ದರು.
ಕರೋನಾ ವದಂತಿಗಳ ಪರಾಮರ್ಶಿಸಿ ನೈಜ ಮಾಹಿತಿ ನೀಡಲು ಜಿಲ್ಲೆಯ ವಿವಿಧ ಕಡೆಗಳಿಂದ ಅನೇಕ ಯುವಕರು ಸ್ವಯಂಪ್ರೇರಣೆಯಿಂದ ಹೆಸರು ನೋಂದಾಯಿಸಿರುತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ