ಪ್ರಗತಿವಾಹಿನಿ ಸುದ್ದಿ; ಪಾಟ್ನಾ: ಒಂದೆಡೆ ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಲಾಕ್ ಡೌನ್ ಘೋಷಿಸಲಾಗಿದೆ. ಸೋಂಕಿತರನ್ನು ಗುಣಪಡಿಸುವ ನಿಟ್ಟಿನಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಸತತ ಪ್ರಯತ್ನ ನಡೆಸುತ್ತಿದ್ದರೆ. ಇನ್ನೊಂದೆಡೆ ಬಿಹಾರದ ಗಯಾದಲ್ಲಿ ಐಸೋಲೇಷನ್ ಮಾರ್ಡ್ ನಲ್ಲಿ ವೈದ್ಯನೊಬ್ಬ ಕೊರೊನಾ ಶಂಕಿತ ಸಂತ್ರಸ್ತೆಯ ಮೇಲೆ ನಿರಂತರ ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದಾನೆ.
ಬಿಹಾರದ ಗಯಾದಲ್ಲಿನ ಅನುಗ್ರಹ ನಾರಾಯಣ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ತೀವ್ರ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾಳೆ. ಈ ಕುರಿತು ಮೃತ ಸಂತ್ರಸ್ತೆಯ ಅತ್ತೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
25 ವರ್ಷದ ಸಂತ್ರಸ್ತೆ ಪಂಜಾಬ್‍ನ ಲೂಧಿಯಾನದಿಂದ ಬಿಹಾರದ ಗಯಾಕ್ಕೆ ಮಾರ್ಚ್ 25ರಂದು ಪತಿಯೊಂದಿಗೆ ಬಂದಿದ್ದರು. ಮೃತ ಸಂತ್ರಸ್ತೆ ಎರಡು ತಿಂಗಳ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತವಾಗಿತ್ತು. ಗರ್ಭಪಾತದ ಕಾರಣದಿಂದಾಗಿ ಸಂತ್ರಸ್ತೆಗೆ ಹೆಚ್ಚು ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಆಕೆಯನ್ನು ಮಾರ್ಚ್ 27ರಂದು ಗಯಾದ ಅನುಗ್ರಹ ನಾರಾಯಣ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಏಪ್ರಿಲ್ 1 ರಂದು ಆಕೆಗೆ ಕೊರೊನಾ ವೈರಸ್ ಶಂಕೆ ಇದೆ ಎಂದು ಪ್ರತ್ಯೇಕ ವಾರ್ಡಿನಲ್ಲಿ ಇರಿಸಲಾಗಿತ್ತು.
ಪ್ರತ್ಯೇಕ ವಾರ್ಡಿನಲ್ಲಿ ಸಂತ್ರಸ್ತೆ ಒಬ್ಬರೇ ಇದ್ದುದರಿಂದ ತಪಾಸಣೆ ಮಾಡಲು ಬರುತ್ತಿದ್ದ ವೈದ್ಯರು ಏಪ್ರಿಲ್ 2 ಮತ್ತು 3ರಂದು ಸತತ ಎರಡು ರಾತ್ರಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದಾರೆ. ಆಕೆಗೆ ಕೊರೊನಾ ಸೋಂಕು ಇಲ್ಲದಿರುವುದು ದೃಢಪಟ್ಟ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿತ್ತು. ಆದರೆ ಆಕೆ ಮನೆಯಲ್ಲಿ ಮೌನವಾಗಿ ಇರುತ್ತಿದ್ದು, ಭಯಪಡುತ್ತಿದ್ದಳು. ಮನೆಯವರು ಆಕೆಯನ್ನು ವಿಚಾರಿಸಿದಾಗ ಆಸ್ಪತ್ರೆಯಲ್ಲಿ ವೈದ್ಯರು ಅತ್ಯಾಚಾರ ಎಸಗಿರುವ ವಿಚಾರವನ್ನು ಹೇಳಿದ್ದಾಳೆ. ಆದರೆ ಚಿಕಿತ್ಸೆ ಪಡೆದರೂ ರಕ್ತಸ್ರಾವ ನಿಂತಿರಲಿಲ್ಲ. ಕೊನೆಗೆ ತೀವ್ರ ರಕ್ತಸ್ರಾವದಿಂದ ಏಪ್ರಿಲ್ 6 ರಂದು ಸಂತ್ರಸ್ತೆ ಸಾವನ್ನಪ್ಪಿದ್ದಾಳೆ. ಈ ಕುರಿತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ