ಪ್ರಗತಿವಾಹಿನಿ ಸುದ್ದಿ; ಮುಂಬೈ: ದೇಶಾದ್ಯಂತ ಮಹಾಮಾರಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಈಗಾಗಲೇ 408 ಜನರನ್ನು ಬಲಿಪಡೆದುಕೊಂಡಿದೆ. ವಾಣಿಜ್ಯ ನಗರಿ ಮುಂಬೈ ಒಂದರಲ್ಲೇ ಕೊರೊನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 201ಕ್ಕೆ ಏರಿಕೆಯಾಗಿದೆ. ಈ ನಡುವೆ ಭಾರತೀಯ ನೌಕಾಪಡೆ ಸಿಬ್ಬಂದಿಯಲ್ಲೂ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ.
ಮುಂಬೈನಲ್ಲಿ 21 ನೌಕಾಪಡೆಯ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ನೌಕಾಪಡೆಯಯ ಇನ್ನಷ್ಟು ಸಿಬ್ಬಂದಿಗೆ ಸೋಂಕು ಹರಡುವ ಭೀತಿ ಎದುರಾಗಿದೆ. ಭಾರತೀಯ ನೌಕಾಪಡೆಯ 20 ನಾವಿಕರು ಸೇರಿ ಒಟ್ಟು 21 ಮಂದಿ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಮುಂಬೈನ ಕೊಲಾಬಾ ಆಸ್ಪತ್ರೆಯಲ್ಲಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏ. 7ರಂದು ನೌಕಾಪಡೆಯ ಓರ್ವ ಸಿಬ್ಬಂದಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಆತನಿದ್ದ ಅಪಾರ್ಟ್ಮೆಂಟ್ನಲ್ಲೇ 21 ಸೋಂಕಿತರು ವಾಸವಾಗಿದ್ದರು ಎನ್ನಲಾಗಿದೆ. ಆತನಿಂದಲೇ ಇವರಿಗೂ ಕೊರೋನಾ ಸೋಂಕು ಹರಡಿರುವ ಸಾಧ್ಯತೆಯಿದೆ. ನೌಕಾಪಡೆಯ ಓರ್ವನಿಗೆ ಸೋಂಕು ಪತ್ತೆಯಾದ ಬಳಿಕ ಅನುಮಾನದಿಂದ ಅಲ್ಲಿನ ಎಲ್ಲ ಸಿಬ್ಬಂದಿಯನ್ನೂ ಪರೀಕ್ಷೆ ನಡೆಸಿದಾಗ 21 ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇನ್ನು ಫ್ರೆಂಚ್ ನೌಕಾಪಡೆ ಮತ್ತು ಅಮೆರಿಕದ ನೌಕಾಪಡೆಯ ಯುದ್ಧನೌಕೆಗಳ ಸಿಬ್ಬಂದಿಯಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದೆ. ಇದೀಗ ಭಾರತದ 21 ನೌಕಾಪಡೆಯ ಸಿಬ್ಬಂದಿಗೆ ಕೊರೋನಾ ವೈರಸ್ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ