Latest

ಮದುವೆ ಮನೆ ಅಡುಗೆಯವನಿಗೆ ಕೊರೊನಾ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿ; ತುಮಕೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಮದುವೆ ಮನೆ ಅಡುಗೆಯವನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಮದುವೆಗೆ ಬಂದವರೆಲ್ಲಾ ಕ್ವಾರಂಟೈನ್ ಆಗುವ ಸ್ಥಿತಿ ನಿರ್ಮಾಣವಾಗಿದೆ.

ಬೆಳಿಗ್ಗೆಯಷ್ಟೇ ಮದುವೆಯಾದ ನವಜೋಡಿ ಕೊರೊನಾದಿಂದ ಸಂಜೆ ವೇಳೆಗೆ ಕ್ವಾರಂಟೈನ್‍ನಲ್ಲಿ ಲಾಕ್ ಆಗಿರುವ ಘಟನೆ ತುಮಕೂರಿನ ಗುಬ್ಬಿಯ ಹೇರೂರಿನಲ್ಲಿ ನಡೆದಿದೆ. ವಧುವರರಿಗೆ ಕೊರೊನಾ ಬಂದಿಲ್ಲ. ಬದಲಾಗಿ ಮದುವೆ ಮನೆಯಲ್ಲಿ ಅಡುಗೆ ಮಾಡಿದ್ದ ಅಡುಗೆಯವನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ನವ ಜೋಡಿ ಸೇರಿದಂತೆ ಮದುವೆಗೆ ಬಂದವರೆಲ್ಲಾ ಕ್ವಾರಂಟೈನ್ ಆಗಿದ್ದಾರೆ.

ಹೇರೂರಿನ ವರ ಗಿರೀಶ್‍ಗೆ ಕಾಟೇನಹಳ್ಳಿಯ ವಧು ಮೀನಾಕ್ಷಿಯ ಜೊತೆ ವಿವಾಹವಾಗಿತ್ತು. ಹುಡುಗನ ಮನೆ ಆವರಣದಲ್ಲೇ ಮದುವೆ ನಡೆದಿದೆ. ಈ ಮದುವೆಗೆ ಅಡುಗೆ ಮಾಡಲು ಬಂದ ಚಿಟ್ಟದ ಕುಪ್ಪೆ ನಿವಾಸಿ 50 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಜೂನ್ 14 ರಂದು ಈತ ಸ್ವಾಬ್ ಕೊಟ್ಟು ಬಂದಿದ್ದ. ರಿಪೋರ್ಟ್ ಬರುವವರೆಗೂ ಈತನನ್ನು ಅಧಿಕಾರಿಗಳು ಕ್ವಾರಂಟೈನ್‍ನಲ್ಲಿ ಇಡಬೇಕಿತ್ತು. ಆದರೆ ಈತ ಎಲ್ಲಾ ಕಡೆ ಓಡಾಡಿಕೊಂಡು ಅಡುಗೆ ಕೆಲಸ ಮಾಡಿಕೊಂಡಿದ್ದ.

ಜೂನ್ 18 ರಂದು ಅಡುಗೆಯವನಿಗೆ ಪಾಸಿಟಿವ್ ರಿಪೋರ್ಟ್ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಅಡುಗೆಯವ ಇದ್ದ ಮದುವೆ ಮನೆಗೆ ದಾಳಿ ಮಾಡಿದ್ದಾರೆ. ಅಡುಗೆಯವ, ವಧುವರರು, ಕ್ಯಾಮೆರಾಮನ್, ವಧು ಮತ್ತು ವರನ ಹತ್ತಿರ ಸಂಪರ್ಕ ಇದ್ದವರು ಸೇರಿ ಒಟ್ಟು 56 ಜನರನ್ನು ಕ್ವಾರಂಟೈನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Home add -Advt

ಸೋಂಕಿತ ಅಡುಗೆಯವನ ಟ್ರಾವೆಲ್ ಹಿಸ್ಟರಿ ಏನೂ ಇಲ್ಲ. ಟಿ.ಬಿ ಹಾಗೂ ಹೃದಯ ಸಂಬಂಧಿ ಕಾಯಿಲೆ ಇದ್ದ ಈತ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಂದ ಸೋಂಕು ಈತನಿಗೆ ಹರಡಿರಬಹುದು ಎಂದು ಶಂಕಿಸಲಾಗಿದೆ.

Related Articles

Back to top button