ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ವೈರಸ್ ದೇಶದಾದ್ಯಂತ ಆತಂಕಕ್ಕೆ ಕಾರಣವಾಗಿರುವ ಬೆನ್ನಲ್ಲೇ ರಾಜ್ಯಕ್ಕೂ ಕಾಲಿಟ್ಟಿದೆ. ಈ ನಡುವೆ ಜನರಲ್ಲಿ ಕೊರೋನಾ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಮೊಬೈಲ್ಗಳ ಕಾಲರ್ ಟ್ಯೂನ್ಗಳ ಮೂಲಕ ಎಚ್ಚರಿಕೆ ಸಂದೇಶವನ್ನು ನೀಡಲಾಗುತ್ತಿದೆ. ಈ ಬಗ್ಗೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ಕೇಂದ್ರ ಸರ್ಕಾರ ವಿನಾಕಾರಣ ಜನರನ್ನು ಹೆದರಿಸುತ್ತಿದೆ ಎಂದು ಗುಡುಗಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಕಿಡಿಕಾರಿರುವ ಡಿ.ಕೆ ಶಿವಕುಮಾರ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲ ದೂರವಾಣಿ ಕರೆಗಳ ಆರಂಭದಲ್ಲಿ ಕೊರೋನಾ ವೈರಸ್ ಬಗ್ಗೆ ನೀಡುತ್ತಿರುವ ಮುನ್ನೆಚ್ಚರಿಕಾ ಸಂದೇಶವನ್ನು ನೋಡಿದರೆ ‘ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ’ ಎಂಬ ಗಾದೆಮಾತು ನೆನಪಿಗೆ ಬರುತ್ತಿದೆ. ಕೊರೋನಾ ಭೀತಿಯಿಂದ ದೇಶದ ಜನರು ತತ್ತರಿಸಿ ಹೋಗಿದ್ದಾರೆ. ಹಣ್ಣು, ಕಾಯಿಯಿಂದ ಹಿಡಿದು ಷೇರು ಮಾರುಕಟ್ಟೆವರೆಗೆ ಎಲ್ಲವೂ ಪಾತಾಳಕ್ಕೆ ಕುಸಿದಿದೆ. ಸಮಸ್ಯೆ ಇರುವೆಡೆ ಕ್ರಮಕೈಗೊಳ್ಳಬೇಕೇ ಹೊರತು ಜನರನ್ನು ಸಾಮೂಹಿಕವಾಗಿ ಹೆದರಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ದೇಶದ ಅರ್ಥ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಜನರನ್ನು ಹೆದರಿಸಲು ನೋಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ ತಪ್ಪು. ಕೊರೋನಾ ವೈರಸ್ ಪರಿಣಾಮವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ