ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕು ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಾರ್ಚ್ 31ರ ವರೆಗೆ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಲಾಗಿದೆ. ಅಲ್ಲದೇ ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ.
ವಿದೇಶದಿಂದ ಆಗಮಿಸುವ ಪ್ರತಿಯೊಬ್ಬರೂ 15 ದಿನಗಳ ಕಾಲ ಕಡ್ಡಾಯ ದಿಗ್ಬಂಧನಕ್ಕೆ ಸರ್ಕಾರ ಆದೇಶಿಸಿದೆ. ಬೆಂಗಳೂರು ಅಂತಾರಾಷ್ಟ್ರೀಯ ನಿಲ್ದಾಣದ ಸುತ್ತಮುತ್ತಲಿನ ಹೋಟೆಲ್‌ಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಇಟ್ಟು 15 ದಿನಗಳ ಕಾಲ ನಿಗಾ ವಹಿಸಲು ನಿರ್ಧರಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಬಂದಿಳಿದವರ ಗುರುತಿಗಾಗಿ ಅಂಥವರ ಬಲಗೈಗೆ ಸ್ಟಾಂಪ್ ಹಾಕಲೂ ನಿರ್ಧರಿಸಲಾಗಿದೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ನೂರಕ್ಕಿಂತ ಹೆಚ್ಚು ಜನ ಸೇರುವುದನ್ನು ನಿಷೇಧಿಸಲಾಗಿದೆ.
ಕೊರೊನಾ ಸೋಂಕು 4 ಹಂತಗಳಲ್ಲಿ ವ್ಯಾಪಿಸುತ್ತದೆ. ಹಾಗಾಗಿ ಮುಂದಿನ 3 ವಾರ ಕಟ್ಟೆಚ್ಚರದಿಂದ ಇರಬೇಕಾದಾ ಅಗತ್ಯವಿದ್ದು, ಯಾವುದೇ ಕಾರಣಕ್ಕೂ 2ನೇ ಹಂತವನ್ನು ಕೊರೊನಾ ದಾಟದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತುರ್ತು ಪರಿಸ್ಥಿತಿ ವಿಸ್ತರಿಸಿದೆ.
ಚಿಕಿತ್ಸೆಗೆ ಸಹಕರಿಸಲು ಆರೋಗ್ಯ ಇಲಾಖೆಯ ಸಹಾಯವಾಣಿ ಸಂಖ್ಯೆ 104 ದಿನದ 24 ಗಂಟೆಯೂ ಲಭ್ಯವಿರುತ್ತದೆ.
ಚಾಲ್ತಿಯಲ್ಲಿರುವ ಪರೀಕ್ಷೆ ಹೊರತು ಪಡಿಸಿ ಶಾಲಾ, ಕಾಲೇಜಿಗೆ ರಜೆ ನೀಡಲಾಗಿದ್ದು, ಬೀದಿ ಬದಿ ವ್ಯಾಪಾರಕ್ಕೂ ನಿಷೇಧ ಹೇರಲಾಗಿದೆ. ಬೆಂಗಳೂರಿನಲ್ಲಿ ಪಿಜಿಯಲ್ಲಿ ವಾಸಿಸುವವರಿಗೆ ಊರಿಗೆ ಮರಳುವಂತೆ ಸಲಹೆ ನಿಡಲಾಗಿದೆ. ವಿಧಾನಸೌಧ, ವಿಕಾಸಸೌಧ, ಕೋರ್ಟ್, ಕಚೇರಿಗಳಿಗೆ ನಿರ್ಬಂಧ ಹೇರಲಾಗಿದ್ದು, ಕ್ರಿಕೆಟ್, ಕಬ್ಬಡಿ, ಫುಟ್ಬಾಲ್ ಇನ್ನಿತರ ಪಂದ್ಯಾವಳಿ ಆಡುವಂತಿಲ್ಲ, ಸಮ್ಮರ್ ಕ್ಯಾಂಪ್ ಸೇರಿದಂತೆ ಯಾವುದೇ ಶಿಬಿರಗಳಿಗೆ ಅವಕಾಶವಿಲ್ಲ ಎಂದು ಆದೇಶಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ