
ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತಾ/ ಬೆಂಗಳೂರು: ದೇಶಾದ್ಯಂತ ಮಾರಣಾಂತಿಕ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಭಾರತದಲ್ಲಿ ಕೊರೊನಾ ವೈರಸ್ ಮಾತ್ತೊಂದು ಬಲಿ ಪಡೆದುಕೊಂಡಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಕೋಲ್ಕತ್ತಾದ ಡಂ ಡಂ ಪ್ರದೇಶದಲ್ಲಿ 55 ವರ್ಷದ ವ್ಯಕ್ತಿ ಕೊರೊನಾ ಸೋಂಕಿಗೆ ಮೃತಪಟ್ಟಿದ್ದು, ಇದು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಮೊದಲ ಬಲಿಯಾಗಿದೆ. ಮೃತ ವ್ಯಕ್ತಿಯ ಮಗ ಇಟಲಿಯಿಂದ ಬಂದ ಬಳಿಕ ತಂದೆಗೆ ಕೊರೊನ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಜಗತ್ತಿನಾದ್ಯಂತ 15 ಸಾವಿರಕ್ಕೂ ಅಧಿಕ ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 3 ಲಕ್ಷದ 49 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಸ್ಪೇನ್ ನಲ್ಲಿ ಇಂದು ಒಂದೇ ದಿನ 409 ಜನ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ ನಿನ್ನೆ 650 ಜನ ಸಾವನ್ನಪ್ಪಿದ್ದರೆ. ಅಮೇರಿಕಾದಲ್ಲಿ 35 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಭಾರತದಾದ್ಯಂತ ಪ್ರಕರಣಗಳ ಸಂಖ್ಯೆ 415 ದಾಟಿದ್ದು, 9 ಜನರು ಸಾವನ್ನಪ್ಪಿದ್ದಾರೆ.
ಒಂದೇ ದಿನ 7 ಜನರಿಗೆ ಸೋಂಕು
ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 7 ಜನರಿಗೆ ಸೋಂಕು ಪತ್ತೆಯಾಗಿದೆ. ಕರ್ನಾಟಕ ಅತ್ಯಂತ ಅಪಾಯಕಾರಿ ಸ್ಥಿತಿಗೆ ತಲುಪುತ್ತಿದ್ದು, ಜನರು ಜಾಗೃತರಾಗದಿದ್ದಲ್ಲಿ ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ