ಕೊರೊನಾ ಭೀತಿ: ಇಟಲಿ ಏರ್ ಪೋರ್ಟ್ ನಲ್ಲಿ ಸಿಲುಕಿರುವ 50 ಕನ್ನಡಿಗರು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಶ್ವಾದ್ಯಂತ ಮಾರಣಾಂತಿಕ ಕೊರೊನಾ ವೈರಸ್ ಭೀತಿ ಹೆಚ್ಚಾಗಿದ್ದು, ಹಲವು ದೇಶಗಳಲ್ಲಿ ಅಂತರಾಷ್ಟ್ರೀಯ ವಿಮಾನ ಹಾರಾಟ ವಿಳಂಬವಾಗಿದೆ. ಈ ಹಿನ್ನಲೆಯಾಲ್ಲಿ ಇಟಲಿಯ ರೊಮ್ ನಲ್ಲಿ 50ಕ್ಕೂ ಹೆಚ್ಚು ಕನ್ನಡಿಗರು ತಾಯ್ನಾಡಿಗೆ ವಾಪಸ್ ಆಗಲು ಪರದಾಡುವ ಸ್ಥಿತಿ ಎದುರಾಗಿದೆ.

ಭಾರತಕ್ಕೆ ವಾಪಸ್ ಆಗಲು ಮೆಡಿಕಲ್ ಸರ್ಟಿಫಿಕೇಟ್ ಅಗತ್ಯವಿದೆ ಎಂದು ಏರ್ ಪೋರ್ಟ್ ಸಿಬ್ಬಂದಿ ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ತೊಂದರೆಗೆ ಸಿಲುಕಿರುವ ಪ್ರಯಾಣಿಕರು ರೋಮ್ ಏರ್‌ಪೋರ್ಟ್‌ನಲ್ಲಿಯೇ ದಿಗ್ಬಂಧನಕ್ಕೀಡಾಗಿದ್ದಾರೆ. 50ಕ್ಕೂ ಹೆಚ್ಚು ಕನ್ನಡಿಗರೂ ಕೂಡ ಇದ್ದು, ಬುಧವಾರ ಸಂಜೆಯಿಂದಲೂ ವಿಮಾನ ನಿಲ್ದಾಣದಲ್ಲಿಯೇ ಭಾರತದ ವಿಮಾನಕ್ಕಾಗಿ ಕಾಯುತ್ತಿದ್ದಾರೆ.

ಈ ಬಗ್ಗೆ ನಿರುಪಮಾ ಗೌಡ ಎಂಬುವವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಿಲುಚಿನಿ ಏರ್‌ಪೋರ್ಟ್‌ನಲ್ಲಿ ನಾವು ಸಿಲುಕಿ ಹಾಕಿಕೊಂಡಿದ್ದೇವೆ. ಭಾರತದಿಂದ ನಮ್ಮನ್ನು ಕರೆದುಕೊಂಡು ಹೋಗಲು ಫ್ಲೈಟ್ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದೇವೆ. ಯಾವಾಗ ಬರುತ್ತೆ ಎನ್ನುವ ಮಾಹಿತಿಯೇ ಇನ್ನು ಸಿಕ್ಕಿಲ್ಲ. ಬೆಳಿಗ್ಗೆ ಏರ್ ಇಂಡಿಯಾ ಅದರಲ್ಲಿ ಯಾವುದೇ ಪ್ರಯಾಣಿಕರಾಗಲಿ, ವೈದ್ಯರಾಗಲಿ ಇರಲಿಲ್ಲ, ಖಾಲಿ ವಿಮಾನ ಬಂದಿದೆ. ಬುಧವಾರ ಸಂಜೆಯಿಂದ ನಾವು ಕಾಯುತ್ತಿದ್ದೇವೆ. ನಾವು ಏರ್‍ ಇಂಡಿಯಾ ಫ್ಲೈಟ್ ಬುಕ್ ಮಾಡಿದ್ದೇವೆ. ಆದರೆ ಇದುವರೆಗೆ ಯಾವುದೇ ಅಪ್ಡೇಟ್ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚಿಕ್ಕಪುಟ್ಟ ದೇಶವಾದ ಶ್ರೀಲಂಕಾದವರನ್ನು ಹಾಗೂ ಬೇರೆ ದೇಶದವರನ್ನು ಕರೆಸಿಕೊಳ್ಳುತ್ತಿದ್ದಾರೆ. ಆದರೆ ಭಾರತದಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ. ನಾವು ಈವರೆಗೆ ಆರೋಗ್ಯವಾಗಿದ್ದೇವೆ. ಇನ್ನು 2 ದಿನ ಇಲ್ಲೇ ಇದ್ದರೆ ಆರೋಗ್ಯ ಸಮಸ್ಯೆ ಎದುರಾಗುತ್ತೆ. ಚಿಕ್ಕಮಕ್ಕಳು, ಗರ್ಭಿಣಿಯರು ಕೂಡ ನಮ್ಮ ಜತೆ ಇದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಡಿಸಿಎಂ ಅಶ್ವಥ್ ನಾರಾಯಣ, ಇಟಲಿ ಸೇರಿದಂತೆ ಕೊರೊನಾ ಪೀಡಿತ ಹೊರದೇಶಗಳಲ್ಲಿರುವ ಕನ್ನಡಿಗರನ್ನು ಕರೆತರಲು ನಮ್ಮ ಸರ್ಕಾರ ಕೇಂದ್ರದ ಪ್ರಧಾನಿ ಮೋದಿ ಸರ್ಕಾರದ ಜೊತೆಗೆ ಸಹಕರಿಸಿ ಕಾರ್ಯೋನ್ಮುಖವಾಗಿದೆ. ತಜ್ಞ ವೈದ್ಯರನ್ನು ಕರೆದುಕೊಂಡು ಹೋಗಿ ಅಲ್ಲಿಯೇ ತೀವ್ರ ತಪಾಸಣೆಗೆ ಒಳಪಡಿಸಿ ಸುರಕ್ಷತೆಯಿಂದ ಅವರನ್ನು ಇಲ್ಲಿಗೆ ವಾಪಸ್ ಕರೆತರಲಾಗುವುದು ಎಂದು ಟ್ವೀಟ್ ಮಾಡಿ ಭರವಸೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button