ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಹೆಚ್ಚುತ್ತಲೇ ಇದ್ದು, ಇಂದು ಮತ್ತೆ 7 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.
7 ಹೊಸ ಕೊರೋನಾ ಸೋಂಕಿತ ಪ್ರಕರಣಗಳಲ್ಲಿ ನಾಲ್ವರು ರಾಜಧಾನಿ ಬೆಂಗಳೂರಿನವರಾಗಿದ್ದಾರೆ. ಇನ್ನು 10 ತಿಂಗಳ ಮಗುವಿಗೆ ಕೂಡ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ 10 ತಿಂಗಳ ಗಂಡುಮಗುವನ್ನು ಕೆಲವು ದಿನಗಳ ಹಿಂದೆ ಪೋಷಕರು ಕೇರಳಕ್ಕೆ ಕರೆದುಕೊಂಡು ಹೋಗಿದ್ದರು. ಕೇರಳದಿಂದಲೇ ಮಗುವಿಗೆ ಸೋಂಕು ತಗುಲಿರಬಹುದೇ ಎಂಬುದು ತಿಳಿದುಬಂದಿಲ್ಲ.
ಕೊಲಂಬೋದಿಂದ ವಾಪಸಾಗಿದ್ದ ಬೆಂಗಳೂರಿನ 20 ವರ್ಷದ ಯುವಕನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಮಾರ್ಚ್ 15ರಂದು ಈತ ಭಾರತಕ್ಕೆ ವಾಪಸಾಗಿದ್ದ. ನಂತರ ಈತನನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಐಸೋಲೇಷನ್ನಲ್ಲಿ ಇರಿಸಲಾಗಿತ್ತು. ಬೆಂಗಳೂರಿನ 25 ವರ್ಷದ ಯುವತಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಲಂಡನ್ಗೆ ತೆರಳಿದ್ದ ಈ ಯುವತಿ ಮಾರ್ಚ್ 18ರಂದು ಬೆಂಗಳೂರಿಗೆ ಮರಳಿದ್ದರು. 35 ವರ್ಷದ ಬೆಂಗಳೂರಿನ ಇನ್ನೋರ್ವ ವ್ಯಕ್ತಿಗೂ ಸೋಂಕು ತಗುಲಿರುವುದು ಖಚಿತವಾಗಿದೆ. ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಈಗಾಗಲೇ ಕೊರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ, ಅವರಿಂದಲೇ ಈ ವ್ಯಕ್ತಿಗೆ ಕೊರೋನಾ ವೈರಸ್ ಹರಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನು ತುಮಕೂರಿನ 60 ವರ್ಷದ ವ್ಯಕ್ತಿಗೆ ಕೊರೋನಾ ವೈರಸ್ ಹರಡಿರುವುದು ಖಚಿತವಾಗಿದೆ. ಇವರು ಇಂದು ಬೆಳಗ್ಗೆ ಮೃತಪಟ್ಟಿದ್ದು, ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ