ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಮತ್ತೆ ಕೊರೊನಾ ಭೀತಿ ಎದುರಾಗಿದೆ. ಈ ಬಗ್ಗೆ ಸ್ವತ: ಆರೋಗ್ಯ ಸಚಿವ ಡಾ.ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ನೆರೆಯ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 13,000ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದು ನನ್ನನ್ನು ಚಿಂತೆಗೀಡುಮಾಡಿದೆ. ಇದನ್ನು ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಿ, ಹಬ್ಬ-ಹರಿದಿನಗಳು, ಸಭೆ-ಸಮಾರಂಭಗಳು ಏನೇ ಇದ್ದರೂ ಮಾಸ್ಕ್ ಧರಿಸಿ, ಭೌತಿಕ ಅಂತರವನ್ನು ತಪ್ಪದೇ ಪಾಲಿಸಿ, ಜನಸಂದಣಿಯಿಂದ ದೂರವಿರಿ ಎಂದು ಹೇಳಿದ್ದಾರೆ.
60 ವರ್ಷ ಮೇಲ್ಪಟ್ಟವರು, 45 ವರ್ಷ ಮೇಲ್ಪಟ್ಟು ಸಹ-ಅಸ್ವಸ್ಥತೆ ಹೊಂದಿರುವವರು ತಪ್ಪದೇ ಆದಷ್ಟು ಬೇಗ ಕೊರೊನಾ ಲಸಿಕೆ ಪಡೆಯಬೇಕು. ನಮ್ಮ ಮನೆಗಳಲ್ಲಿ, ಬಂಧು-ಬಳಗದಲ್ಲಿ, ಸ್ನೇಹಿತರಲ್ಲಿ, ನೆರೆಹೊರೆಗಳಲ್ಲಿ ಕೊರೊನಾ ಲಸಿಕೆ ಪಡೆಯಲು ಅರ್ಹ ವ್ಯಕ್ತಿಗಳಿದ್ದರೆ ಅವರಿಗೆ ಲಸಿಕೆ ಪಡೆಯುವಂತೆ ಅರಿವು ಮೂಡಿಸಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಇನ್ನು ಕೆಲ ಖಾಸಗಿ ಶಾಲೆಗಳು ಸರ್ಕಾರದ ಅನುಮತಿ ಇಲ್ಲದಿದ್ದರೂ 1-6ನೇ ತರಗತಿಯ ಮಕ್ಕಳಿಗೆ ಶಾಲೆ ಪುನರಾರಂಭಿಸಿರುವುದರ ಬಗ್ಗೆ ದೂರು ಬಂದಿವೆ. ನಿಯಮ ಉಲ್ಲಂಘಿಸಿ ತರಗತಿಗಳನ್ನು ಪುನರಾರಂಭಿಸಿರುವ ಶಾಲೆಗಳ ವಿರುದ್ಧ ಪರವಾನಗಿ ರದ್ದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಇದೇ ವೇಳೆ ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ