ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಕೊರೊನಾ ಪೀಡಿತರ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ 12ನೇ ಸ್ಥಾನಕ್ಕೆ ಇಳಿದಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಈವರೆಗೆ 247 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 9 ಜನ ಸಾವಿಗೀಡಾಗಿದ್ದರೆ 60 ಜನ ಗುಣಮುಖರಾಗಿದ್ದಾರೆ. ಹೀಗಾಗಿ ದೇಶದಲ್ಲಿ ಕನಾಟಕ ಕೊರೊನಾ ಪೀಡಿತರ ಸಂಖ್ಯೆಯಲ್ಲಿ 12ಕ್ಕೆ ಇಳಿದಿದೆ ಎಂದರು.
ಕೊರೊನಾ ಸೋಂಕು ಹರಡದಂತೆ ಮೇ 3ರವರೆಗೆ ಲಾಕ್ ಡೌನ್ ಮುಂದುವರಿಯಲಿದೆ ಎಂದು ಪ್ರಧಾನಿ ಮೋದಿಯವರು ತಿಳಿಸಿದ್ದಾರೆ. ಆದ್ದರಿಂದ ಎಲ್ಲರೂ ಪ್ರಧಾನಿ ಮೋದಿಯವರು ನೀಡಿರುವ ಸಪ್ತ ಸೂತ್ರಗಳನ್ನು ಚಾಚು ತಪ್ಪದೇ ಪಾಲಿಸಬೇಕು ಎಂದು ತಿಳಿಸಿದರು.
ಮೋದಿಯವರು ಹೇಳಿರುವಂತೆ ರಾಜ್ಯದಲ್ಲಿ ಯಾರು ಸಹ ಹಸಿವಿನಿಂದ ಬಳಲಬಾರದು. ಹೀಗಾಗಿ ಶ್ರೀಮಂತರು ಹಾಗೂ ಸ್ಥಿತಿವಂತರಾಗಿರುವವರು ಬಡವರಿಗೆ, ನಿರ್ಗತಿಕರಿಗೆ ಮತ್ತು ಕೂಲಿಕಾರ್ಮಿಕರಿಗೆ ಸಹಾಯವಾಗುವಂತೆ ದಾನಮಾಡಿ ಎಂದು ಕರೆನೀಡಿದರು. ಜೊತೆಗೆ ಸರ್ಕಾರದಿಂದ ಕೂಡ ಬಡವರು, ನಿರ್ಗತಿಕರಿಗೆ ಆಹಾರ ವ್ಯವಸ್ಥೆ ಮಾಡಲಾಗುವುದು ಎಂಬ ಭರವಸೆ ನೀಡಿದರು.
ಕೊರೊನಾ ಭೀತಿಯಿಂದ ಎಲ್ಲರೂ ಮಾಸ್ಕ್ ಬಳಸುತ್ತಿದ್ದಾರೆ. ಆದರೆ ವೈದ್ಯರು ಹೊರತುಪಡಿಸಿ ಸಾರ್ವಜನಿಕರು ಎನ್ 95 ಮಾಸ್ಕ್ ಧರಿಸುವ ಅಗತ್ಯವಿಲ್ಲ. ಜನಸಾಮಾನ್ಯರು ಕೇವಲ ಬಟ್ಟೆಗಳಿಂದ ತಯಾರಿಸಿದ ಮಾಸ್ಕ್ ಧರಿಸಿದರೆ ಸಾಕು. ಅದರಿಂದ ಯಾವುದೇ ಸಮಸ್ಯೆಗಳಿಲ್ಲ ಎಂದರು. ಜೊತೆಗೆ ಕೋವಿಡ್ 19 ಹರಡದಂತೆ ಜಿಲ್ಲೆಯ ಗಡಿಭಾಗದಲ್ಲಿ ಬಂದ್ ಮಾಡಿ ಕೊರೊನಾ ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ