
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗಂಟಲು ದ್ರವ ಪರೀಕ್ಷೆಗೆ ಕೊಟ್ಟ ವ್ಯಕ್ತಿ ಐಸೋಲೇಷನ್ ಅಥವಾ ಮನೆಯಲ್ಲೇ ಕ್ವಾರಂಟೈನಲ್ಲಿರಬೇಕು ಎಂದು ಆರೋಗ್ಯ ಇಲಾಖೆ ಹೊಸ ಆದೇಶವನ್ನು ಹೊರಡಿಸಿದೆ.
ಸೋಂಕು ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹೊಸ ಆದೇಶ ನೀಡಿದೆ. ಕೋವಿಡ್-19 ಪರೀಕ್ಷೆಯ ವರದಿ ಬರುವವರೆಗೂ ಹೋಂ ಐಸೋಲೇಷನ್‍ನಲ್ಲಿರುವುದು ಕಡ್ಡಾಯ ಮಾಡಲಾಗಿದೆ. ನಿಯಮಗಳನ್ನು ಮೀರಿ ಸ್ವ್ಯಾಬ್ ಟೆಸ್ಟ್ ಕೊಟ್ಟವರು ಸಾರ್ವಜನಿಕವಾಗಿ ಓಡಾಡುವುದು, ಕಚೇರಿಗೆ ಹೋಗುವುದು, ಅನಗತ್ಯವಾಗಿ ತಿರುಗಾಡುವುದು ಕಂಡು ಬಂದರೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದೆ.
ಶಂಕಿತ ವ್ಯಕ್ತಿಗಳನ್ನು ಗುರುತಿಸಿ ಅಧಿಕಾರಿಗಳೇ ಸಾಕಷ್ಟು ಮಂದಿಯ ಸ್ವ್ಯಾಬ್ ಟೆಸ್ಟ್ ಮಾಡಿಸಿರುತ್ತಾರೆ. ಆದರೆ ಆ ಬಳಿಕ ವ್ಯಕ್ತಿಯನ್ನು ಯಾವುದೇ ಸೂಚನೆ ನೀಡದೆ ಮನೆಗೆ ಕಳುಹಿಸಿದ್ದ ಸಾಕಷ್ಟು ಪ್ರಕರಣಗಳು ವರದಿಯಾಗಿದ್ದವು. ಅಲ್ಲದೇ ಸ್ವ್ಯಾಬ್ ಟೆಸ್ಟ್ ಕೊಟ್ಟ ವ್ಯಕ್ತಿ ಮನೆಗೆ ಬಂದ ಬಳಿಕ ಹಲವು ಸ್ಥಳಗಳಿಗೆ ಭೇಟಿ ನೀಡುತ್ತಿದ್ದ ಈ ಹಿನ್ನಲೆಯಲ್ಲಿ ಇಲಾಖೆ ಹೊಸ ಆದೇಶವನ್ನು ಹೊರಡಿಸಿದೆ.