ಪ್ರಗತಿವಾಹಿನಿ ಸುದ್ದಿ; ಕಾರವಾರ: ರಾಜ್ಯಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ದಿನದಿಂದ ದಿನಕ್ಕೆ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಇಬ್ಬರಲ್ಲಿ ಇಂದು ಕೊವಿಡ್ 19 ಪಾಸಿಟಿವ್ ಇರುವುದು ದೃಢಪಟ್ಟಿದೆ.
ಇಂದು ಬೆಳಿಗ್ಗೆ ರಾಜ್ಯದಲ್ಲಿ ಕೊರೊನಾ ವೈರಸ್ ನ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿತ್ತು. ಅವರಲ್ಲಿ ಇಬ್ಬರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದವರು ಎಂದು ತಿಳಿದುಬಂದಿದೆ. ಈ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್, ಮಾರ್ಚ್ 21ಕ್ಕೆ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ 40 ವರ್ಷದ ವ್ಯಕ್ತಿ ತಮ್ಮದೇ ವಾಹನದಲ್ಲಿ ಸಹೋದರ ಸಂಬಂಧಿ ಜೊತೆ ಭಟ್ಕಳದ ಮನೆಗೆ ಬಂದಿದ್ದರು. ನಂತರ ಅರ್ಧ ಗಂಟೆ ಮನೆಯಲ್ಲಿದ್ದು, ತಾಲ್ಲೂಕು ಆಸ್ಪತ್ರೆಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು, ಈಗ ಸೋಂಕು ದೃಢಪಟ್ಟಿದೆ.
ಇನ್ನು ಮತ್ತೊಬ್ಬ ವ್ಯಕ್ತಿ 65 ವರ್ಷದವರಾಗಿದ್ದು, ಮಾರ್ಚ್ 18ಕ್ಕೆ ದುಬೈನಿಂದ ಮುಂಬೈಗೆ ಬಂದಿದ್ದರು. ಅಲ್ಲಿಂದ ಮಾ.19ರಂದು ರೈಲಿನಲ್ಲಿ ಹೊರಟು ಮಾ.20ಕ್ಕೆ ಭಟ್ಕಳದ ಮನೆಗೆ ತಲುಪಿದ್ದರು. ಆರೋಗ್ಯ ಕಾರ್ಯಕರ್ತರು ಮರುದಿನ ತಪಾಸಣೆ ನಡೆಸಿದಾಗ ಸೋಂಕಿನ ಲಕ್ಷಣಗಳು ಕಂಡುಬಂದಿತ್ತು. ಅವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿತ್ತು. ಅವರ ಗಂಟಲು ದ್ರವದ ಪರೀಕ್ಷೆಯೂ ಕೋವಿಡ್ 19 ಪಾಸಿಟಿವ್ ಬಂದಿದೆ. ಇಬ್ಬರ ಪ್ರಯಾಣ ವಿವರಗಳು ಮತ್ತು ಸಂಪರ್ಕಕ್ಕೆ ಬಂದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
ಭಟ್ಕಳ ಪಟ್ಟಣವನ್ನೇ ಕ್ಲಸ್ಟರ್ ಎಂದು ಪರಿಗಣಿಸಲಾಗಿದ್ದು, ಅಲ್ಲಿಗೆ ಹೋಗುವುದು ಮತ್ತು ಬರುವುದನ್ನು ನಿಷೇಧಿಸಲಾಗಿದೆ. ಆರೋಗ್ಯ ಕಾರ್ಯಕರ್ತರು 15 ದಿನ ಪ್ರತಿ ಮನೆಗೆ ಭೇಟಿ ನೀಡಲಿದ್ದಾರೆ. ಭಟ್ಕಳ ತಾಲ್ಲೂಕು ಆಸ್ಪತ್ರೆಯನ್ನು ಕೇವಲ ಕೋವಿಡ್ 19 ಚಿಕಿತ್ಸೆಗಾಗಿ ಮೀಸಲಿಡಲಾಗಿದೆ ಎಂದು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ