Kannada NewsKarnataka NewsLatest

ಬೆಳಗಾವಿಯಲ್ಲಿ 54 ಜನರ ಮೇಲೆ ನಿಗಾ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೋವಿಡ್ ೧೯ ವೈರಾಣು ಹರಡುವಿಕೆ ತಡೆಗಟ್ಟುವ ಉದ್ಧೇಶದಿಂದ ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಜಿಲ್ಲೆಯ ಟೋಲ್ ಪ್ಲಾಜಾಗಳಲ್ಲಿ ಆರೋಗ್ಯ ತಪಾಸಣಾ ತಂಡಗಳನ್ನು ನಿಯೋಜಿಸಲಾಗಿದೆ. ಅದೇ ರೀತಿ ಗೋವಾ ರಾಜ್ಯ ಸಂಪರ್ಕಿಸುವ ಸ್ಥಳಗಳಲ್ಲಿ ಕೂಡ ಸೂಕ್ತ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಜಿಲ್ಲೆಯಲ್ಲಿ ಕರೋನಾ ವೈರಸ್ ಹರಡದಂತೆ ತಡೆಗಟ್ಟುವಿಕೆ ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಇಂದು ಮಂಗಳವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ವಿವಿಧ ಧಾರ್ಮಿಕ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದೇಶದಿಂದ ಆಗಮಿಸುವ ಜನರ ಬಗ್ಗೆ ಈಗಾಗಲೇ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಆದಾಗ್ಯೂ ಅಂತಹ ವ್ಯಕ್ತಿಗಳು ಜಿಲ್ಲೆಗೆ ಬಂದಾಗ ಸ್ವಯಂ ಪ್ರೇರಣೆಯಿಂದ ಮಾಹಿತಿ ನೀಡಬೇಕು. ಇದರಿಂದ ವೈರಾಣು ಹರಡುವುದನ್ನು ತಡೆಗಟ್ಟುವುದು ಸುಲಭ ಸಾಧ್ಯವಾಗುತ್ತದೆ ಎಂದರು.
ಜನದಟ್ಟಣೆ ನಿರ್ಬಂಧಿಸಲು ಸರ್ಕಾರ ನೀಡಿರುವ ಆದೇಶದ ಮೇರೆಗೆ ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ನಿರ್ಬಂಧ ವಿಧಿಸಲಾಗಿದೆಯೇ ವಿನಃ ಸಾರ್ವಜನಿಕರ ಸ್ವಾತಂತ್ರ್ಯ ಅಥವಾ ಧಾರ್ಮಿಕ ಆಚರಣೆಗೆ ನಿರ್ಬಂಧ ವಿಧಿಸಿಲ್ಲ. ವೈರಾಣು ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ೫೪ ಜನರ ಮೇಲೆ ನಿಗಾ

೫೪ ಜನರು ವಿದೇಶದಿಂದ ಬೆಳಗಾವಿ ಜಿಲ್ಲೆಗೆ ಆಗಮಿಸಿದ್ದು, ಅದರಲ್ಲಿ ೩ ಜನರು ೨೮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ೮ ಜನರು ೧೪ ದಿನಗಳ ನಿಗಾ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ೪೧ ಜನರು ೧೪ ದಿನಗಳ ಆರಂಭಿಕ ನಿಗಾ ವ್ಯವಸ್ಥೆಯಲ್ಲಿದ್ದಾರೆ. ಎಲ್ಲರಿಗೂ ಅವರವರ ಮನೆಯಲ್ಲಿಯೇ ನಿಗಾ ವ್ಯವಸ್ಥೆ ಕಲ್ಪಿಸಲಾಗಿದೆ.
ಅಗತ್ಯವಿರುವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಗಾ ವಹಿಸಲು ಕೂಡ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಮ್ಸ್, ತಾಲ್ಲೂಕು ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡುಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ಕೋವಿಡ್ ೧೯ ವೈರಾಣುವಿನಿಂದ ಜಗತ್ತಿನ ಅನೇಕ ರಾಷ್ಟ್ರಗಳು ತಲ್ಲಣಗೊಂಡಿವೆ. ಕರೋನಾ ವೈರಸ್ ಹರಡುವಿಕೆ ತಡೆಗಟ್ಟಲು ವಿವಿಧ ಬಗೆಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಕೆಲವು ನಿರ್ದೇಶನ ನೀಡಿರುತ್ತದೆ. ಆ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಕ್ರಮಗಳನ್ನು ಕೈಗೊಂಡಿವೆ.

ಧಾರ್ಮಿಕ ಸ್ಥಳ; ಜನದಟ್ಟಣೆ ನಿಯಂತ್ರಣಕ್ಕೆ ಮನವಿ

ದೇವಸ್ಥಾನದ ಟ್ರಸ್ಟ್ ಮತ್ತು ಆಡಳಿತ ಮಂಡಳಿಗಳು ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಮನವೊಲಿಸುವ ಮೂಲಕ ಜನದಟ್ಟಣೆಯನ್ನು ನಿರ್ವಹಿಸಬೇಕು.
ಸಾಮೂಹಿಕ ಪ್ರಾರ್ಥನೆ ಅಥವಾ ಉತ್ಸವಗಳ ಮೇಲೆ ಆಯಾ ಸಮುದಾಯದ ಜನರು ಸ್ವಯಂನಿಯಂತ್ರಣ ಹೇರಿಕೊಳ್ಳುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮನವಿ ಮಾಡಿಕೊಂಡರು.
ಸ್ವಯಂನಿಯಂತ್ರಣ ಹೇರಿಕೊಳ್ಳುವ ಮೂಲಕ ವೈರಾಣು ಪಸರಿಸುವುದನ್ನು ತಡೆಗಟ್ಟಲು ಸರ್ಕಾರದ ಜತೆ ಕೈಜೋಡಿಸಬೇಕು. ಒಂದು ವೇಳೆ ಪರಿಸ್ಥಿತಿ ಕೈಮೀರಿದರೆ ಕಾನೂನು ಮೂಲಕ ನಿಯಂತ್ರಣಕ್ಕೆ ಮುಂದಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಹೇಳಿದರು.

ಮಸೀದಿಗಳಲ್ಲಿ ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆ ವೇಳೆ ಹಾಗೂ ನಂತರ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು. ಸರ್ಕಾರದ ನಿರ್ದೇಶನದ ಮೇರೆಗೆ ಎಲ್ಲ ರೀತಿಯ ಜಾತ್ರೆ- ಉತ್ಸವಗಳನ್ನು ನಿರ್ಬಂಧಿಸುತ್ತಿರುವ ಈ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆ ಬದಲು ತಮ್ಮ ತಮ್ಮ ಮನೆಗಳಲ್ಲಿ ಪ್ರಾರ್ಥನೆ ಮಾಡುವ ಬಗ್ಗೆ ಜಮಾತ್ ಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ವೈರಾಣು ಹರಡುವಿಕೆ ತಡೆಗಟ್ಟಲು ಸರ್ಕಾರ ಕೈಗೊಳ್ಳುವ ಎಲ್ಲ ಕ್ರಮಗಳಿಗೆ ಮುಕ್ತ ಮನಸ್ಸಿನಿಂದ ಬೆಂಬಲ ನೀಡಲಾಗುವುದು ಎಂದು ಸಮಾಜದ ಮುಖಂಡರು ಭರವಸೆ ನೀಡಿದರು.
ಮಲ್ಲೇಶ್ ಚೌಗಲೆ ಮಾತನಾಡಿ, ಸಾರ್ವಜನಿಕರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಕರೋನಾ ತಡೆಗಟ್ಟಲು ಎಲ್ಲ ಸಮುದಾಯದ ಜನರು ಮತ್ತು ಸಂಘ-ಸಂಸ್ಥೆಗಳು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದರು.
ರಾಜಶೇಖರ ತಳವಾರ ಮಾತನಾಡಿ, ವಿವಿಧ ಬಗೆಯ ನಿರ್ಬಂಧಗಳಿಂದ ಜನರು ಉದ್ಯೋಗಗಳಿಂದ ವಂಚಿತರಾಗುತ್ತಿದ್ದು, ಮುನ್ನೆಚ್ಚರಿಕೆ ಜತೆಗೆ ಈ ಬಗ್ಗೆಯೂ ಗಮನಿಸಬೇಕು. ಅಗತ್ಯ ಪ್ರಮಾಣದಲ್ಲಿ ಮಾಸ್ಕ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಪ್ರತ್ಯೇಕವಾಗಿ ಇಡಲು ಸಲಹೆ

ಸಭೆಯಲ್ಲಿ ಮಾತನಾಡಿದ ಶ್ರೀನಿವಾಸ್ ತಾಳೂಕರ, ವಿದೇಶದಿಂದ ಬರುವ ಪ್ರಯಾಣಿಕರನ್ನು ಮನೆಗೆ ಕಳುಹಿಸದೇ ಅವರನ್ನು ಪ್ರತ್ಯೇಕವಾಗಿ ಇಡುವ ಮೂಲಕ ವೈದ್ಯಕೀಯ ನಿಗಾ ವಹಿಸಬೇಕು. ಅಂದಾಗ ಮಾತ್ರ ವೈರಾಣು ಹರಡುವಿಕೆ ತಡೆಗಟ್ಟಬಹುದು ಎಂದು ಸಲಹೆ ನೀಡಿದರು.
ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಶಂಕಿತ ಕರೋನಾ ಪ್ರಕರಣಗಳು ವರದಿಯಾಗಿರುತ್ತವೆ. ಬೆಳಗಾವಿ ಬಹಳ ಜನರು ಮಹಾರಾಷ್ಟ್ರದ ಜತೆ ಜಾಸ್ತಿ ಸಂಪರ್ಕ ಹೊಂದಿರುವುದರಿಂದ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಿಗಾ ವಹಿಸಬೇಕು ಎಂದು ಅನೇಕ ಜನರು ಅಭಿಪ್ರಾಯಪಟ್ಟರು.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡುವುದರಿಂದ ಜನರು ಭಯಭೀತರಾಗುತ್ತಿದ್ದು, ಅಂತಹ ಸುದ್ದಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದರು.
ಪತ್ರಕರ್ತ ಮೆಹಬೂಬ್ ಮಕಾನದಾರ ಮಾತನಾಡಿ, ವ್ಯಾಪಾರಸ್ಥರು ಸೇರಿ ಅನೇಕ ಜನರು ಸರ್ಕಾರದ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಎಲ್ಲರೂ ಸಹಕರಿಸುವ ಮೂಲಕ ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕು.
ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿರುವ ಗೋವಾ ರಾಜ್ಯದ ಜನರು ದೈನಂದಿನ ವ್ಯಾಪಾರ ವಹಿವಾಟಿಗೆ ಬೆಳಗಾವಿ ನಗರಕ್ಕೆ ಆಗಮಿಸುತ್ತಾರೆ. ಆದ್ದರಿಂದ ಈ ಬಗ್ಗೆ ಇನ್ನಷ್ಟು ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಪರಸ್ಪರ ಅಂತರ ಕಾಯ್ದಕೊಳ್ಳಲು ಸಲಹೆ

ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ, ಅನವಶ್ಯಕವಾಗಿ ಜನದಟ್ಟಣೆ ಉಂಟು ಮಾಡದೇ ಪರಸ್ಪರ ಸೂಕ್ತ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ವೈರಾಣುವಿನಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾಮೂಹಿಕ ಪ್ರಾರ್ಥನೆ ಬಗ್ಗೆ ಸ್ವಯಂನಿಯಂತ್ರಣದ ಧಾರ್ಮಿಕ ಮುಖಂಡರು ಭರವಸೆ ನೀಡಿರುವುದು ಶ್ಲಾಘನೀಯ ಎಂದರು.
ಸೋಂಕಿನ ಲಕ್ಷಣ ಹೊಂದಿದವರು ಮಾತ್ರ ಮಾಸ್ಕ್ ಧರಿಸಬೇಕು. ಒಂದು ಮಾಸ್ಕ್ ಅನ್ನು ಏಳೆಂಟು ಗಂಟೆ ಮಾತ್ರ ಧರಿಸಬೇಕು. ಹೆಚ್ಚಿನ ಅವಧಿಗೆ ಧರಿಸಿದರೆ ಅದರಿಂದಲೇ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಡಾ.ರಾಜೇಂದ್ರ ಸಲಹೆ ನೀಡಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಡಾ.ತುಕ್ಕಾರ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

 ಎಲ್ಲ ಸಂತೆ, ಜಾತ್ರೆಗಳನ್ನು ರದ್ದುಗೊಳಿಸಿ 

ಕೋವಿಡ್-೧೯ (ಕರೋನಾ ವೈರಾಣು ಕಾಯಿಲೆ-೨೦೧೯) ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ  ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಒಂದು ವಾರದ ಅವಧಿಗೆ ಜಿಲ್ಲೆಯಾದ್ಯಂತ ಜರಗುವ ಎಲ್ಲ ಸಂತೆ, ಜಾತ್ರೆಗಳನ್ನು ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ದೇವಾಲಯಗಳು ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ದಿನನಿತ್ಯದ ಧಾರ್ಮಿಕ ವಿಧಿ ವಿಧಾನಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ಮುಂಜಾಗೃತಾ ಕ್ರಮ ವಹಿಸಿ ನಡೆಸಲು ಷರತ್ತಿಗೊಳಪಟ್ಟು ವಿನಾಯಿತಿ ನೀಡಿದೆ.
ಈ ವಿಷಯವಾಗಿ ಆದೇಶವನ್ನು ಜಾರಿಗೊಳಿಸಲು ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ ಅಧೀಕ್ಷಕರು, ಜಿಲ್ಲೆಯ ಎಲ್ಲ ಉಪವಿಭಾಗಾಧಿಕಾರಿಗಳು, ತಹಶೀಲದಾರರು ಹಾಗೂ ಜಿಲ್ಲೆಯ ಸಂಬಂಧಪಟ್ಟ ಎಲ್ಲ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

——————
ಅಪರಿಚಿತ ವ್ಯಕ್ತಿ ಸಾವು

ಮಾರ್ಚ್ ೧೫ ರಂದು ಕೇಂದ್ರ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ ೨-೧೫ ಗಂಟೆ ಸುಮಾರಿಗೆ, ಸಾರ್ವಜನಿಕ ಮೂತ್ರಿ ಎದುರುಗಡೆ ತಗಡಿನ ಸೆಡ್ ಹತ್ತಿರ ಯಾವುದೋ ಖಾಯಿಲೆಯಿಂದ ಬಳಲಿ ಅಸ್ವಸ್ಥನಾಗಿ ವ್ಯಕ್ತಿ ಮರಣ ಹೊಂದಿದ್ದು, ಸ್ಥಳಿಯರು ಕೂಡಿಕೊಂಡು ಅಂಬುಲೆನ್ಸ್‌ಗೆ ಕರೆ ಮಾಡಿ ಶವವನ್ನು ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ. ಈ ಕುರಿತು ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮಾರು ೪೦ ವರ್ಷ, ಮೈ ಮೇಲೆ ಕಂದು ಬಣ್ಣದ ಹಾಫ್ ಟೀ ಶರ್ಟ್, ಕಪ್ಪು ಬಣ್ಣದ ಹಾಫ್ ಪ್ಯಾಂಟ್ ಧರಿಸಿದ್ದು, ಈ ಪ್ರಕಾರ ಚಹರೆಯುಳ್ಳ ವ್ಯಕ್ತಿಯ ವಾರಸುದಾರರು ಯಾರಾದರು ಇದ್ದಲ್ಲಿ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೩೧-೨೪೦೫೨೪೨ ಹಾಗೂ ಮೊಬೈಲ್ ಸಂಖ್ಯೆ ೯೪೮೦೮೦೪೦೪೫ ಸಂಪರ್ಕಿಸಬೇಕು ಎಂದು ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಅರ್ಜಿ ಆಹ್ವಾನ

 

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ೨೦೧೯ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಏಪ್ರಿಲ್ ೧೫ ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು ೫೬೦೦೦೨, ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು ದೂರವಾಣಿ ಸಂಖ್ಯೆ ೦೮೦-೨೨೪೮೪೫೧೬, ೨೨೦೧೭೭೦೪ ಗೆ ಸಂಪರ್ಕಿಸಬೇಕು ಎಂದು ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿಕ್ಕೋಡಿ ಪಟ್ಟಣ: ಜಾಹೀರು ಲೀಲಾವು ಮುಂದೂಡಿಕೆ

೨೦೨೦-೨೧ ನೇ ಸಾಲಿನ ಚಿಕ್ಕೋಡಿ ಪಟ್ಟಣದ ಸಂತೆ ಕರ ವಸೂಲಿ ಕುರಿತು ಜಾಹೀರು ಲೀಲಾವನ್ನು ಮಾರ್ಚ್ ೧೮ ರಂದು ಬೆಳಿಗ್ಗೆ ೧೧ ಗಂಟೆಗೆ ಪುರಸಭೆ ಸಭಾ ಭವನದಲ್ಲಿ ಜರುಗಿಸಲು ನಿಗದಿಪಡಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸಂತೆ ಜಾಹೀರು ಲೀಲಾವನ್ನು ಮುಂದಕ್ಕೆ ಹಾಕಲಾಗಿದೆ ಎಂದು ಚಿಕ್ಕೋಡಿ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಾಪು ನಿಧನ: ಸಚಿವೆ ಶಶಿಕಲಾ ಜೊಲ್ಲೆ ಕಂಬನಿ

ಕರ್ನಾಟಕ ನಾಡು, ನುಡಿಗಾಗಿ ಬದುಕಿನುದ್ದಕ್ಕೂ ಹೋರಾಡಿದ ಏಕೀಕರಣದ ರೂವಾರಿ ಹಾಗೂ ಹಿರಿಯ ಪತ್ರಕರ್ತ, ನಾಡೋಜ ಪ್ರಶಸ್ತಿ ಪುರಸ್ಕೃತ ಸಾಹಿತಿ ಪಾಟೀಲ ಪುಟ್ಟಪ್ಪನವರ ನಿಧನದಿಂದ ಕನ್ನಡ ನಾಡಿಗೆ ಹಾಗೂ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು ಕಂಬನಿ ಮಿಡಿದಿದ್ದಾರೆ.
ಕನ್ನಡಿಗರ ಧ್ವನಿಯಾಗಿ ಗುರುತಿಸಿಕೊಂಡಿದ್ದ ಶತಾಯುಷಿ ಪಾ.ಪು. ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಪತ್ರಿಕಾರಂಗ ಬಡವಾಗಿದೆ.
ಅವರ ಆತ್ಮಕ್ಕೆ ಪರಮಾತ್ಮ ಚಿರಶಾಂತಿ ಕರುಣಿಸಲಿ ಎಂದು ಸಚಿವೆ ಶಶಿಕಲಾ ಜೊಲ್ಲೆ ಅವರು ಪ್ರಾರ್ಥಿಸಿದ್ದಾರೆ.

ಸಂಸದ ಅಣ್ಣಾಸಾಹೇಬ್ ಜೊಲ್ಲೆ ಸಂತಾಪ

ಕನ್ನಡ ನಾಡು-ನುಡಿಗಾಗಿ ಹಗಲಿರುಳು ಶ್ರಮಿಸಿದ ಶತಾಯುಷಿ, ಹಿರಿಯ ಪತ್ರಕರ್ತರಾದ ನಾಡೋಜ ಪಾಟೀಲ ಪುಟ್ಟಪ್ಪ ಅವರ ನಿಧನಕ್ಕೆ ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತರಾಗಿ, ಸಾಹಿತಿಗಳಾಗಿ, ಕನ್ನಡ ನಾಡು-ನುಡಿ-ಜಲಕ್ಕಾಗಿ ನಿರಂತರ ಹೋರಾಟ ಮಾಡಿದ್ದರು. ಕರ್ನಾಟಕ ಏಕೀಕರಣ ರೂವಾರಿಯಾದ ಪಾಟೀಲ್ ಪುಟ್ಟಪ್ಪ ಹಿಂದಿನಿಂದಲೂ ಕನ್ನಡನಾಡು ನುಡಿಗಾಗಿ ಶ್ರಮಿಸುತ್ತಾ ಬಂದಿದ್ದರು. ಅವರನ್ನು ಕಳೆದುಕೊಂಡಿರುವುದು ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ.
ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರು ಪ್ರಾರ್ಥಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button