ಕರೋನಾ ವೈರಸ್ ಗೆ ಔಷಧ ಕಂಡು ಹಿಡಿದ ಹಿಂದೂ ಮಹಾಸಭಾ ಅಧ್ಯಕ್ಷ

ಪ್ರಗತಿವಾಹಿನಿಸುದ್ದಿ; ನವದೆಹಲಿ: ಕೊರೋನಾ ವೈರಸ್​​ಗೆ ಚೀನಾದಲ್ಲಿ ಈವರೆಗೆ 300ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ವಿಶ್ವಾದ್ಯಂತ ಹರಡುತ್ತಿರುವ ಕೊರಾನಾ ವೈರಸ್ ಆತಂಕದ ವಾತಾವರಣ ಸೃಷ್ಠಿಸಿದೆ. ಈನಡುವೆ ವೈದ್ಯಲೋಕಕ್ಕೆ ಸವಾಲೆನಿಸಿರುವ ಈ ಕೊರೊನಾ ವೈರಸ್​​​ಗೆ ಹಿಂದೂ ಮಹಾಸಭಾದ ಅಧ್ಯಕ್ಷರು ಔಷಧಿಯೊಂದನ್ನು ಕಂಡುಹಿಡಿದಿದ್ದಾರೆ.

ಭಾರತದಲ್ಲಿ ದೇವರೆಂದು ಪೂಜಿಸಲ್ಪಡುವ ಗೋಮಾತೆಯ ಮೂತ್ರ ಮತ್ತು ಸಗಣಿ ಕೊರೊನಾ ವೈರಸ್​​ನಿಂದ ಬಳಲುತ್ತಿರುವವರಿಗೆ ಸೂಕ್ತ ಔಷಧಿಯಾಗಿದೆ ಎಂದು ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್​ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಕೊರೊನಾ ವೈರಸ್​​ನ್ನು ಕೊಲ್ಲಲು ವಿಶೇಷ ಯಜ್ಞವನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಗೋ ಮೂತ್ರ ಮತ್ತು ಸಗಣಿಯನ್ನು ಸೇವಿಸಿದರೆ ಕೊರೊನಾ ಸೋಂಕಿನಿಂದ ಉಂಟಾಗುವ ಪರಿಣಾಮಗಳನ್ನು ತಡೆಗಟ್ಟಬಹುದಾಗಿದೆ. ‘ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸಿ ಸೋಂಕು ತಗುಲಿರುವ ವ್ಯಕ್ತಿಯ ದೇಹದ ಮೇಲೆ ಗೋವಿನ ಸಗಣಿ ಹಚ್ಚಿದರೆ ಆತನನ್ನು ಕಾಪಾಡಬಹುದಾಗಿದೆ. ಈ ಮಾರಾಣಾಂತಿಕ ಕೊರೊನಾ ವೈರಸ್​​ನ್ನು ನಾಶ ಮಾಡಲು ಶೀಘ್ರದಲ್ಲೇ ವಿಶೇಷ ಯಜ್ಞವನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ನಡುವೆ ಕೊರೊನಾ ವೈರಸ್​​ ಗುಣಪಡಿಸಲು ಮಹಾರಾಜ್​ ನೀಡಿರುವ ಸಲಹೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್​ ಆಗುತ್ತಿದೆ. ಗೋ ಮೂತ್ರದಿಂದ ಕೊರೊನಾ ವೈರಸ್​​ ಹೇಗೆ ವಾಸಿಯಾಗುತ್ತದೆ ಎಂಬುದು ನೆಟ್ಟಿಗರ ಪ್ರಶ್ನೆ..

ಚೀನಾದಲ್ಲಿ ಈವರೆಗೆ 304 ಮಂದಿ ಕೊರೊನಾ ವೈರಸ್​​ಗೆ ಬಲಿಯಾಗಿದ್ದಾರೆ. ಸುಮಾರು 9,692 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹುವಾಯಿ ಪ್ರಾಂತ್ಯ ಒಂದರಲ್ಲೇ 5,806 ಪ್ರಕರಣಗಳು ಪತ್ತೆಯಾಗಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕೊರೊನಾ ವೈರಸ್​​ ಭೀತಿ ಹಿನ್ನೆಲೆ, ವಿಶ್ವ ಆರೋಗ್ಯ ಸಂಸ್ಥೆಯು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಜಾಗತಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ.

ಭಾರತ, ಬ್ರಿಟನ್​, ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್​ ಮತ್ತು ಫ್ರಾನ್ಸ್​​ ಸೇರಿದಂತೆ ಸುಮಾರು 20 ದೇಶಗಳಲ್ಲಿ ಕೊರೊನಾ ವೈರಸ್​​​ ಪ್ರಕರಣಗಳು ಪತ್ತೆಯಾಗಿರುವುದು ದೃಢಪಟ್ಟಿದೆ. ನಿನ್ನೆ ಚೀನಾದಿಂದ 324 ಭಾರತೀಯರನ್ನು ಏರ್​ ಇಂಡಿಯಾ ವಿಮಾನದ ಮೂಲಕ ಭಾರತಕ್ಕೆ ಸ್ಥಳಾಂತರಿಸಲಾಗಿತ್ತು. ಇಂದು ಮತ್ತಷ್ಟು ಭಾರತೀಯರನ್ನು ವುಹಾನ್​ನಿಂದ ದೆಹಲಿಗೆ ಕರೆತರಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button