ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಶಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅದ್ದೂರಿ ರೋಡ್ ಶೋ ನಡೆಸಿದ ಆರೋಪದ ಮೇಲೆ ಬಂಧಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಡಾ.ಭಾಸ್ಕರ್ ರಾವ್ ತಿಳಿಸಿದ್ದಾರೆ. ಇಮ್ರಾನ್ ಅವರನ್ನು ಅಜ್ಞಾತ ಸ್ಥಳದಲ್ಲಿ ಕ್ವಾರಂಟೈನ್ ಗೆ ಒಳಪಡಿಸಿದ್ದಾರೆ.
ಆಸ್ಪತ್ರೆಯಿಂದ ನೇರವಾಗಿ ಮನೆಗೆ ತೆರಳದೇ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಮೆರವಣಿಗೆ ಮಾಡಿದ್ದು ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಪೊಲೀಸರು ವಾರ್ನಿಂಗ್ ಮಾಡಿ, ಮೆರವಣಿಗೆಯಲ್ಲಿದ್ದವರನ್ನು ಚದುರಿಸಿದ್ದಾರೆ.
ಅಲ್ಲದೆ ಜೆ.ಜೆ. ನಗರ ಠಾಣೆ ವ್ಯಾಪ್ತಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ 144 ಸೆಕ್ಷನ್ ಜಾರಿಗೊಳಿಸಿರುವುದಾಗಿ ಪ್ರಕಟಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪಾದರಾಯನಪುರ ಸುತ್ತಮುತ್ತ ಬಿಗುವಿನ ಸ್ಥಿತಿ ನಿರ್ಮಾಣವಾಗಿದೆ. ರೋಡ್ ಶೋಗೆ ಅನುಮತಿ ಕೊಟ್ಟಿದ್ದು ಯಾರು ಎಂದು ಇಮ್ರಾನ್ ಪಾಷಾ ಅವರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಇಮ್ರಾನ್ ಪಾಶಾಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಮೆರವಣಿಗೆ ತಡೆದು ಮನೆಗೆ ಹೋಗುವಂತೆ ತಾಕೀತು ಮಾಡಿದ್ದರು. ಆದರೆ ಇದನ್ನು ಧಿಕ್ಕರಿಸಿ 150 ಕ್ಕೂ ಹೆಚ್ಚು ಬೈಕ್ ಗಳ ಜತೆ ರೋಡ್ ಶೋ ಮುಂದುವರಿಸಿದ್ದರಿಂದ ಬಂಧಿಸಿರುವುದಾಗಿ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಬೆಂಗಳೂರಿನ ಪಾದರಾಯನಪುರ ವಾರ್ಡ್ ಕಾರ್ಪೋರೇಟರ್ ಇಮ್ರಾನ್ ಪಾಶಾ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದು ಸಾಮಾಜಿಕ ಅಂತರ ನಿರ್ಲಕ್ಷಿಸಿ ಮೆರವಣಿಗೆ ನಡೆಸಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ