Latest

15 ದಿನದ ಹಿಂದೆ ಊಹಿಸಲು ಸಾಧ್ಯವಿತ್ತಾ?- ಇದು ರಾಜಕೀಯ!

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಈ ಫೋಟೋದಲ್ಲಿರುವ ದೃಷ್ಯವನ್ನು 15 ದಿನದ ಹಿಂದೆ ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ!

ಭಾನುವಾರ ಕೂಡಲಸಂಗಮದಲ್ಲಿ ನಡೆದ ಬಸವೇಶ್ವರ ಜಯಂತಿ ಕಾರ್ಯಕ್ರಮಕ್ಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸಿದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ ಗಾಂಧಿಯವರನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಜತ್ ಉಳ್ಳಾಗಡ್ಡಿಮಠ ಮೊದಲಾದವರು ಸ್ವಾಗತಿಸಿದರು.

ಅಷ್ಟೇ ಅಲ್ಲ, ಶೆಟ್ಟರ್ ಮತ್ತು ರಜತ್ ಅವರು ರಾಹುಲ್ ಗಾಂಧಿ ಅಕ್ಕ ಪಕ್ಕ ನಿಂತು ಫೋಟೋ ತೆಗೆಸಿಕೊಂಡರು.

ಸಂಘ ಪರಿವಾರದಲ್ಲಿ ಬೆಳೆದು ಬಂದು, ಕಟ್ಟಾ ಬಿಜೆಪಿಗರಾಗಿದ್ದ, ಮೊನ್ನೆ ಮೊನ್ನೆಯವರೆಗೂ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾ ಮುಗ್ಗಾ ಬಯ್ಯುತ್ತಿದ್ದ, ಕಾಂಗ್ರೆಸ್ ಐಸಿಯು ಸೇರಿದೆ ಎನ್ನುತ್ತಿದ್ದ ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರಿದ್ದೇ ಒಂದು ಪವಾಡ. ಅವರು ರಾಹುಲ ಗಾಂಧಿ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವ ಸನ್ನಿವೇಶ ಬರುತ್ತದೆ ಎಂದು ಸ್ವತಃ ಅವರೂ ಊಹಿಸಲು ಸಾಧ್ಯವಿರಲಿಲ್ಲ.

Home add -Advt

ಬಿಜೆಪಿ ಹೈಕಮಾಂಡ್ ನಿಂದ ಬಂದ ಒಂದೇ ಒಂದು ಫೋನ್ ಕರೆ ಎಂತಹ ಬದಲಾವಣೆಯನ್ನು, ಎಂತಹ ಸನ್ನಿವೇಶವನ್ನು ಸೃಷ್ಟಿಸಿಬಿಟ್ಟಿತು! ಹಲವು ದಶಕಗಳ ಕಾಲ ಪಕ್ಷವನ್ನು ಕಟ್ಟಿ ಬೆಳೆಸಿದ್ದ, ಹತ್ತಾರು ಕಾರ್ಯಕರ್ತರಿಗೆ ಟಿಕೆಟ್ ಕೊಡಿಸುವ ಸ್ಥಾನದಲ್ಲಿದ್ದ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಕರೆದು ಮಾತನಾಡದೆ, ಅಗೌರವಯುತವಾಗಿ ಹೊರಹೋಗುವಂತೆ ಮಾಡುತ್ತದೆ ಎನ್ನುವುದೂ ಸಹ ಕಲ್ಪನಾತೀತವೇ ಸರಿ.

ಹಾಗೆಯೇ ಮೊನ್ನೆ ಮೊನ್ನೆಯವರಗೆ ಶೆಟ್ಟರ್ ವಿರುದ್ಧ ಕಣಕ್ಕಿಳಿಯಲು ತೊಡೆ ತಟ್ಟಿ ನಿಂತಿದ್ದ ರಜತ್ ಉಳ್ಳಾಗಡ್ಡಿಮಠ ಅವರು ಸಹ ಈಗ ಶೆಟ್ಟರ್ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿರುವುದು ಸಹ ಅವರ ಕಾರ್ಯಕರ್ತರಿಗೆ ಇರುಸು ಮುರಿಸನ್ನುಂಟು ಮಾಡಿದೆ.

ಇದು ರಾಜಕೀಯ! ಇದೇ ರಾಜಕೀಯ!!

https://pragati.taskdun.com/manslamscm-basavaraj-bommainelamnagala-rally/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button