Kannada NewsKarnataka NewsLatest

*ರಾಜ್ಯದಲ್ಲಿ ಹಿಂಗಾರು ಮಳೆ ಪ್ರವೇಶಕ್ಕೆ ಕ್ಷಣಗಣನೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಮುಂಗಾರು ಮಳೆಯ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಇದೀಗ ಹಿಂಗಾರು ಮಳೆಯ ಆಗಮನಕ್ಕೆ ವಾತಾವರಣ ಸಜ್ಜಾಗುತ್ತಿದೆ. 

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಅಕ್ಟೋಬರ್ 15 ಅಥವಾ 16ರ ವೇಳೆಗೆ ರಾಜ್ಯದಲ್ಲಿ ಹಿಂಗಾರು ಮಳೆ ಆರಂಭವಾಗುವ ಸಾಧ್ಯತೆ ಇದೆ.

ಮುಂಗಾರು ದುರ್ಬಲವಾಗುತ್ತಿದ್ದರೂ, ವಾತಾವರಣದಲ್ಲಿನ ಬದಲಾವಣೆಗಳ ಪರಿಣಾಮ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಇನ್ನೂ ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆ ಇದೆ.

ಕರಾವಳಿ, ಮಲೆನಾಡಿನಲ್ಲಿ ಮಳೆ ಸಾಧ್ಯತೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಳಿಕ ಹಾಗೂ ಸಂಜೆ ವೇಳೆಯಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಕನ್ನಡದಲ್ಲಿ ಕೆಲವೆಡೆ ಮೋಡ ಕವಿದ ವಾತಾವರಣ ಕಂಡುಬಂದರೂ, ಹೆಚ್ಚಿನ ಭಾಗಗಳಲ್ಲಿ ಬಿಸಿಲು ಮುಂದುವರಿಯಲಿದೆ.

ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ಭಾಗಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಹಗುರದಿಂದ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.

ಉತ್ತರ ಕರ್ನಾಟಕದಲ್ಲಿ ಒಣಹವೆ

ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಮತ್ತಷ್ಟು ಇಳಿಕೆಯಾಗಲಿದ್ದು, ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ಕೆಲವೆಡೆ ಮೋಡ ಕವಿದ ವಾತಾವರಣ ಕಂಡುಬಂದರೂ, ಉತ್ತರ ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ಸಾಮಾನ್ಯ ಮಟ್ಟದಲ್ಲೇ ಇರಲಿದೆ.

ಅಕ್ಟೋಬರ್ 14ರ ಬಳಿಕ ಹವಾಮಾನ ಬದಲಾವಣೆ

ಅಕ್ಟೋಬರ್ 14ರ ವೇಳೆಗೆ ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯ ಉಂಟಾಗುವ ಸಾಧ್ಯತೆ ಇದೆ. ಇದರ ಪರಿಣಾಮ ಅಕ್ಟೋಬರ್ 15 ಅಥವಾ 16ರಿಂದ ರಾಜ್ಯದಲ್ಲಿ ಹಿಂಗಾರು ಮಳೆ ಆರಂಭವಾಗುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button