CrimeKannada NewsKarnataka NewsLatest

*18 ಲಕ್ಷ ಸಾಲಕ್ಕಾಗಿ ಪತಿಯ ಕೊಲೆ*: *ಪತ್ನಿ ಸೇರಿ ಮೂವರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಮನೆ ನಿರ್ಮಾಣಕ್ಕೆ ಮಾಡಿದ್ದ ಸಾಲ ಮನ್ನಾ ಆಗುತ್ತದೆ, ವಿಮೆ ಹಣ ಕೈ ಸೇರುತ್ತದೆ ಎಂಬ ತಪ್ಪು ಮಾಹಿತಿ ನಂಬಿ ಪತಿಯನ್ನೇ ಕೊಲೆ ಮಾಡಿಸಿರುವ ಆಘಾತಕಾರಿ ಘಟನೆ ನಡೆದಿದೆ. ಪ್ರಕರಣದಲ್ಲಿ ಪತ್ನಿಯೇ ಸಂಬಂಧಿಕರ ಸಹಾಯದಿಂದ ಪತಿಯ ಕೊಲೆಗೆ ಸಂಚು ರೂಪಿಸಿರುವ ಆರೋಪ ಕೇಳಿಬಂದಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮೃತನನ್ನು ರಾಘವೇಂದ್ರ ಹನುಮಂತಪ್ಪ ಸಾಳುಂಕೆ (38) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಉಮಾ, ಆಕೆಯ ಸಂಬಂಧಿ ಶಿವಾಜಿ ಹಾಗೂ ಶಿವಾಜಿಯ ಸ್ನೇಹಿತ ಖಲೀಲ್‌ನನ್ನು ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಸ್ಟೂರು ಕ್ಯಾಂಪ್‌ನಲ್ಲಿ ನಡೆದಿದೆ.

ರಾಘವೇಂದ್ರ ಮತ್ತು ಉಮಾ ದಂಪತಿ ಮನೆ ನಿರ್ಮಾಣಕ್ಕಾಗಿ ವಿವಿಧ ಸ್ತ್ರೀಶಕ್ತಿ ಸಂಘಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಸುಮಾರು 18 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಸಾಲದ ಕಂತುಗಳನ್ನು ಪಾವತಿಸಲಾಗದೆ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ನಡುವೆ, ಪತಿ ಮೃತಪಟ್ಟರೆ ವಿಮೆ ಹಣ ಸಿಗುತ್ತದೆ ಹಾಗೂ ಸಾಲ ಮನ್ನಾ ಆಗುತ್ತದೆ ಎಂಬ ತಪ್ಪು ಮಾಹಿತಿಯನ್ನು ಉಮಾ ನಂಬಿದ್ದಳು. ಇದೇ ಕಾರಣಕ್ಕೆ ಕೊಲೆಗೆ ಸಂಚು ರೂಪಿಸಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಪತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಉಮಾ ಸುಮಾರು ಒಂದು ವಾರ ಅನ್ನದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿದ್ದಳು ಎನ್ನಲಾಗಿದೆ. ಇದರಿಂದ ಉದ್ದೇಶ ಈಡೇರದ ಹಿನ್ನೆಲೆಯಲ್ಲಿ ಗಂಗಾವತಿಯಲ್ಲಿದ್ದ ತನ್ನ ಸಂಬಂಧಿ ಶಿವಾಜಿಯನ್ನು ಸಂಪರ್ಕಿಸಿದ್ದಳು. ಪತಿಯನ್ನು ಕೊಲೆ ಮಾಡಿದರೆ ಹೊಸ ಸ್ಕೂಟಿ ಕೊಡಿಸುವುದಾಗಿ ಆಮಿಷವೊಡ್ಡಿದ್ದಳು. ಬಳಿಕ ಶಿವಾಜಿ ತನ್ನ ಸ್ನೇಹಿತ ಖಲೀಲ್‌ನನ್ನೂ ಕೃತ್ಯಕ್ಕೆ ಸೇರಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಅಕ್ಟೋಬರ್ 6ರ ರಾತ್ರಿ ಶಿವಾಜಿ ಮತ್ತು ಖಲೀಲ್ ಮನೆಗೆ ಬಂದಿದ್ದರು. ಎಲ್ಲರೂ ಮಲಗಿದ ಬಳಿಕ ಮಧ್ಯರಾತ್ರಿ ಸುಮಾರು 12 ಗಂಟೆಗೆ ಉಮಾ ಮತ್ತು ಶಿವಾಜಿ ಸೇರಿ ನಿದ್ರೆಯಲ್ಲಿದ್ದ ರಾಘವೇಂದ್ರನ ಕುತ್ತಿಗೆಗೆ ಹಗ್ಗ ಬಿಗಿದು, ಕಟ್ಟಿಗೆಯಿಂದ ಮುಖಕ್ಕೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ತಂದೆಯ ಚೀರಾಟ ಕೇಳಿ ಎಚ್ಚರಗೊಂಡ ಮಕ್ಕಳಿಗೆ ಜೀವ ಬೆದರಿಕೆ ಹಾಕಿ ಸುಮ್ಮನಿರಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಹಲ್ಲೆಯ ಬಳಿಕವೂ ರಾಘವೇಂದ್ರ ಮೃತಪಟ್ಟಿರಲಿಲ್ಲ. ನಂತರ ಆರೋಪಿಗಳು ಆತನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಸುಮಾರು ಐದು ಕಿಲೋಮೀಟರ್ ದೂರದ ಹೆಬ್ಬಾಳ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಅಲ್ಲಿ ಅಪಘಾತದಂತೆ ಬಿಂಬಿಸುವ ಉದ್ದೇಶದಿಂದ ಬಾಯಿಗೆ ಕೀಟನಾಶಕ ಸುರಿದು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ. ಮರುದಿನ ಬೆಳಗ್ಗೆ ಹೊಲಕ್ಕೆ ತೆರಳುತ್ತಿದ್ದ ರೈತರು ರಾಘವೇಂದ್ರ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪತ್ನಿ ಉಮಾ, ಅಪಘಾತ ಅಥವಾ ಫಿಟ್ಸ್‌ನಿಂದ ಘಟನೆ ಸಂಭವಿಸಿರಬಹುದು ಎಂದು ಹೇಳಿದ್ದಳು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button