Belagavi NewsBelgaum NewsCrimeKannada NewsKarnataka NewsNational

*ನಿರ್ಮಲಾ ಸಿತಾರಾಮನ್ ಜಾಹಿರಾತು ನಂಬಿ ₹21.94 ಲಕ್ಷ ಕಳೆದುಕೊಂಡ ಬೆಳಗಾವಿ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಭರ್ಜರಿ ಲಾಭ ಗಳಿಸಬಹುದು ಎಂಬ ಯೂಟ್ಯೂಬ್ ಜಾಹೀರಾತನ್ನು ನಂಬಿದ 60 ವರ್ಷದ ವ್ಯಕ್ತಿಯೊಬ್ಬರು ಬರೋಬ್ಬರಿ ₹21,93,999 ಕಳೆದುಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಹಿಂದವಾಡಿ ನಿವಾಸಿ ಕಿಶೋರ ಅವರು ವಂಚನೆಗೊಳಗಾದವರು. ಕಳೆದ ಜೂನ್ 20ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿ ಪ್ರಸಾರವಾಗಿದ್ದ ಷೇರು ಹೂಡಿಕೆ ಕುರಿತ ಜಾಹೀರಾತನ್ನು ಅವರು ವೀಕ್ಷಿಸಿದ್ದರು. ಜಾಹೀರಾತಿನಲ್ಲಿದ್ದ ಲಿಂಕ್ ಮೂಲಕ ತಮ್ಮ ಹೆಸರು, ವಿಳಾಸ ಸೇರಿದಂತೆ ಅಗತ್ಯ ಮಾಹಿತಿಯನ್ನು ನೀಡಿ ನೋಂದಣಿ ಮಾಡಿಕೊಂಡಿದ್ದರು.

ನಂತರ ಸಂದೀಪ ಶರ್ಮಾ ಎಂಬಾತ ಕಿಶೋರ ಅವರಿಗೆ ಕರೆ ಮಾಡಿ, ಟೆಲಿಗ್ರಾಮ್ ಗುಂಪಿಗೆ ಸೇರಿಸಿದ್ದಾನೆ. 

ಬಳಿಕ ಪ್ರಿಯಾಂಶ ಶರ್ಮಾ ಎಂಬಾತ ಫೋನ್‌ಪೇ ಮೂಲಕ ಆರಂಭದಲ್ಲಿ ₹22 ಸಾವಿರ ಹಣ ವರ್ಗಾಯಿಸಿಕೊಂಡಿದ್ದಾನೆ ಎನ್ನಲಾಗಿದೆ. ಹೆಚ್ಚಿನ ಮೊತ್ತ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ ಎಂದು ನಂಬಿಸಿದ ವಂಚಕರು, ವೆಬ್‌ಸೈಟ್ ಮೂಲಕ ಹಂತ ಹಂತವಾಗಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾರೆ. ಆದರೆ ಬಳಿಕ ಹೂಡಿಕೆ ಮಾಡಿದ ಹಣವಾಗಲಿ, ಭರವಸೆ ನೀಡಿದ್ದ ಲಾಭವಾಗಲಿ ಯಾವುದನ್ನೂ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ಕಿಶೋರ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಬೆಳಗಾವಿ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಂಚನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button