CrimeKarnataka NewsLatest

*ಯುವಕನನ್ನು ಅಪಹರಿಸಿ ಲಿಂಗ ಬದಲಿಸಿದ ಮಂಗಳ ಮುಖಿಯರು*

ಪ್ರಗತಿವಾಹಿನಿ ಸುದ್ದಿ: ಹೂವು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದ ಯುವಕನೊಬ್ಬನನ್ನು ಅಪಹರಿಸಿ, ಅಮಲು ಪದಾರ್ಥ ನೀಡಿ ಬಲವಂತವಾಗಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸಿದ ಆರೋಪ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಕೇಳಿಬಂದಿದೆ. 

ಹೂವು ಮಾರಾಟಕ್ಕೆ ತೆರಳುತ್ತಿದ್ದ ಯುವಕನಿಗೆ ಕೆಲ ದಿನಗಳ ಹಿಂದೆ ಮಂಗಳಮುಖಿಯರ ಪರಿಚಯವಾಗಿತ್ತು ಎನ್ನಲಾಗಿದೆ. ಇದೇ ಪರಿಚಯದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 1ರಂದು ಯುವಕನನ್ನು ಕಾರಿನಲ್ಲಿ ಅಪಹರಿಸಿ ಚಳ್ಳಕೆರೆಯಿಂದ ದಾವಣಗೆರೆಗೆ ಕರೆದೊಯ್ದು ಅಲ್ಲಿ ಕೂಡಿಹಾಕಲಾಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ದಾವಣಗೆರೆಯಲ್ಲಿ ಯುವಕನಿಗೆ ಅಮಲು ಪದಾರ್ಥ ನೀಡಿ ಪ್ರಜ್ಞೆ ತಪ್ಪಿಸಿದ ಬಳಿಕ, ಆತನ ಒಪ್ಪಿಗೆ ಇಲ್ಲದೆ ಬಲವಂತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎನ್ನಲಾಗಿದೆ. ಅಲ್ಲದೆ, ಬಿಸಿ ನೀರು ಸುರಿದು ಹಾಗೂ ಬರೆ ಎಳೆದು ಹಿಂಸೆ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಈ ಹಿಂಸೆಯಿಂದ ಹೇಗೋ ತಪ್ಪಿಸಿಕೊಂಡ ಯುವಕ ಮನೆಗೆ ಮರಳಿದ್ದಾನೆ. ಆದರೆ ಕುಟುಂಬದ ಮಾನ-ಮರ್ಯಾದೆಗೆ ಧಕ್ಕೆ ಬರಬಹುದೆಂಬ ಆತಂಕದಿಂದ ಘಟನೆ ಕುರಿತು ಯಾರಿಗೂ ಮಾಹಿತಿ ನೀಡದೆ ಕುಟುಂಬಸ್ಥರು ಮೌನವಾಗಿದ್ದರು ಎನ್ನಲಾಗಿದೆ.

ಇದೀಗ ಗುರುವಾರ ಯುವಕನ ಮನೆಗೆ ಮಂಗಳಮುಖಿಯರ ತಂಡವೊಂದು ತೆರಳಿ, ಶಸ್ತ್ರಚಿಕಿತ್ಸೆಗೆ ಸುಮಾರು ₹3 ಲಕ್ಷ ವೆಚ್ಚವಾಗಿದೆ. ಆ ಹಣವನ್ನು ನೀಡುವಂತೆ ಒತ್ತಾಯಿಸಿ ಬೆದರಿಕೆ ಹಾಕಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಹಣ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಘಟನೆಯನ್ನು ಖಂಡಿಸಿದ್ದು, ಆರೋಪಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button