14 ತಿಂಗಳ ಸರಕಾರದ ಭವಿಷ್ಯಕ್ಕೆ ಕ್ಷಣಗಣನೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :
14 ತಿಂಗಳಿನಿಂದ ಕರ್ನಾಟಕದಲ್ಲಿ ಅಸ್ಥಿತ್ವದಲ್ಲಿರುವ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರಕಾರದ ಭವಿಷ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
ಸೋಮವಾರ ಸಂಜೆಯ ಹೊತ್ತಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಕೋರುವ ಸಾಧ್ಯತೆ ಇದ್ದು, ಈವರೆಗಿನ ಸ್ಥಿತಿ ನೋಡಿದರೆ ಸರಕಾರದ ಅಲ್ಪಮತಕ್ಕೆ ಕುಸಿದಿರುವುದು ನಿಶ್ಚಿತ. ಆದರೆ ಕೊನೆಯ ಕ್ಷಣದವರೆಗೂ ಸರಕಾರ ಉಳಿಸಿಕೊಳ್ಳಲು ಉಭಯ ಪಕ್ಷಗಳೂ ಇನ್ನಿಲ್ಲದ ಕಸರತ್ತು ಮುಂದುವರಿಸಲಿವೆ.
ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಕಲಾಪ ಆರಂಭವಾಗಲಿದೆ. ಶಾಸಕರಿಗೆ ವಿಪ್ ಜಾರಿಗೊಳಿಸುವ ವಿಚಾರದಲ್ಲಿ ಗೊಂದಲವಿದೆ. ಅದನ್ನು ಬಗೆಹರಿಸಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶುಕ್ರವಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸೋಮವಾರ ಈ ಅರ್ಜಿಯ ತೀರ್ಪು ಸಹ ಬರುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.
ಸುಪ್ರೀಂ ತೀರ್ಪು ಬರುವ ತನಕ ಕಲಾಪವನ್ನು ಮುಂದುವರೆಸುವ ಆಲೋಚನೆಯಲ್ಲಿ ಮೈತ್ರಿ ಸರ್ಕಾರವಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷದ ಪರವಾಗಿ ತೀರ್ಪು ಬಂದರೆ ಅತೃಪ್ತ ಶಾಸಕರಿಗೆ ಆತಂಕ ಎದುರಾಗಲಿದ್ದು, ರಾಜ್ಯದ ರಾಜಕೀಯ ಹೈಡ್ರಾಮ ಮತ್ತೊಂದು ತಿರುವು ಪಡೆಯುವ ನಿರೀಕ್ಷೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ