Film & EntertainmentKarnataka NewsLatest

*ದರ್ಶನ್ ಹಾಗೂ ಕುಟುಂಬದ ವಿರುದ್ಧ ಮಾತನಾಡದಂತೆ ಧನ್ವೀರ್​​ಗೆ ಕೋರ್ಟ್ ಆದೇಶ*

ಪ್ರಗತಿವಾಹಿನಿ ಸುದ್ದಿ: ನಟ ಧನ್ವೀರ್ ಗೌಡ ಮತ್ತು ವಿಜಯಲಕ್ಷ್ಮಿ ದರ್ಶನ್ ನಡುವಿನ ವಿವಾದ ಇದೀಗ ಮತ್ತೊಂದು ಹಂತ ತಲುಪಿದೆ. ಈಗಾಗಲೇ ಧನ್ವೀರ್ ವಿರುದ್ಧ ಎರಡು ಎಫ್‌ಐಆರ್ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ್ ಕೂಡ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ತಮ್ಮ ಹಾಗೂ ಕುಟುಂಬದ ವಿರುದ್ಧ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದಂತೆ ಧನ್ವೀರ್‌ಗೆ ನಿರ್ಬಂಧ ವಿಧಿಸಬೇಕೆಂದು ದರ್ಶನ್ ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಲಯ ಸ್ಪಂದಿಸಿದೆ.

ನಟ ದರ್ಶನ್ ತೂಗುದೀಪ ಅವರು ಬೆಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ತಮ್ಮ ಹಾಗೂ ಕುಟುಂಬದ ಸದಸ್ಯರ ವಿರುದ್ಧ ಧನ್ವೀರ್ ಯಾವುದೇ ಸಾರ್ವಜನಿಕ ಹೇಳಿಕೆ ಅಥವಾ ಅವಹೇಳನಕಾರಿ ಟೀಕೆಗಳನ್ನು ಮಾಡದಂತೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ದರ್ಶನ್ ಮತ್ತು ಅವರ ಕುಟುಂಬದ ವಿರುದ್ಧ ಹೇಳಿಕೆ ನೀಡದಂತೆ ಧನ್ವೀರ್‌ಗೆ ನಿರ್ಬಂಧ ವಿಧಿಸಿದೆ ಎಂದು ವರದಿಯಾಗಿದೆ.

ಈಗಾಗಲೇ ಧನ್ವೀರ್ ಗೌಡ ಅವರು ವಿಜಯಲಕ್ಷ್ಮಿ ದರ್ಶನ್ ಕುರಿತು ಕೆಲವು ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡಿದ್ದರು. ಒಂದು ಹೇಳಿಕೆಯಲ್ಲಿ ವಿಜಯಲಕ್ಷ್ಮಿ ಅವರನ್ನು ‘ಫೇಕ್’ ಎಂದೂ ಕರೆದಿದ್ದರು ಎನ್ನಲಾಗಿದೆ. ಧನ್ವೀರ್ ನೀಡುತ್ತಿರುವ ಇಂತಹ ಹೇಳಿಕೆಗಳಿಂದ ಕುಟುಂಬದ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಆರೋಪಿಸಿ ದರ್ಶನ್ ನ್ಯಾಯಾಲಯದ ಮೊರೆ ಹೋಗಿದ್ದರು.

ಇನ್ನು ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ಜಟಾಪಟಿಗೆ ಸುಮಾರು 10 ಕೋಟಿ ರೂಪಾಯಿ ಹಣಕಾಸಿನ ವ್ಯವಹಾರವೇ ಕಾರಣ ಎನ್ನಲಾಗುತ್ತಿದೆ. ಈ ವಿವಾದ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ವಿಜಯಲಕ್ಷ್ಮಿ ಪರ ಇರುವ ಕೆಲವರು ಧನ್ವೀರ್ ವಿರುದ್ಧ ಆರ್.ಆರ್. ನಗರ, ಬಸವೇಶ್ವರ ನಗರ ಮತ್ತು ಬ್ಯಾಟರಾಯನಪುರ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದಾರೆ.

ಈ ಪೈಕಿ ಆರ್.ಆರ್. ನಗರ ಮತ್ತು ಬಸವೇಶ್ವರ ನಗರ ಪೊಲೀಸ್ ಠಾಣೆಗಳಲ್ಲಿ ಧನ್ವೀರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದೀಗ ನ್ಯಾಯಾಲಯದ ನಿರ್ಬಂಧಕಾಜ್ಞೆಯಿಂದ ದರ್ಶನ್ ಕುಟುಂಬ ಮತ್ತು ಧನ್ವೀರ್ ನಡುವಿನ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ.

Related Articles

Back to top button